




ನಿಟ್ಟೆಯಲ್ಲಿ ಟೊಯೋಟಾ ಕಂಪೆನಿಯ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ
ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಸಂಸ್ಥೆಯ ಸಹಯೋಗದಲ್ಲಿ ನಿಟ್ಟೆ ಕ್ಯಾಂಪಸ್ ನಲ್ಲಿ ನಿಟ್ಟೆ-ಟೊಯೋಟಾ ಸೆಂಟರ್ ಆಫ್ ಎಕ್ಸಲೆನ್ಸ್ ನ್ನು ಆರಂಭಿಸಿದೆ. ಈ ಸೆಂಟರನ್ನು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಸಂಸ್ಥೆಯ ಸೀನಿಯರ್ ವೈಸ್ ಪ್ರೆಸಿಡೆಂಟ್ ಸುದೀಪ್ ಎಸ್. ಡಲ್ವಿ ಅವರು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿದರು. ಟೊಯೋಟಾ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲಿ ನಿರ್ಮಿಸಿರುವ 20ನೇ ಸೆಂಟರ್ ಆಫ್ ಎಕ್ಸಲೆನ್ಸ್ ಇದಾಗಿದೆ.
ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆಗೊಳಿಸಿ ಮಾತನಾಡಿದ ಸುದೀಪ್ ಅವರು ‘ಭಾರತ ದೇಶದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲೊಂದಾಗಿರುವ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದೊಂದಿಗೆ ಟೊಯೋಟಾ ಸಂಸ್ಥೆಯು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇಂಜಿನ್ ಹಾಗೂ ಪವರ್ಟೈನ್ಸ್ ಕಾರ್ಯನಿರ್ವಹಿಸುವ ಬಗೆಗೆ ಹ್ಯಾಂಡ್ಸ್ ಆನ್ ತರಬೇತಿ ಸಿಗಲಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಶ್ರೀ ಎನ್. ವಿನಯ ಹೆಗ್ಡೆ ಅವರು ‘ಇಂತಹ ಸೆಂಟರ್ ಆಫ್ ಎಕ್ಸಲೆನ್ಸ್ ನಿಂದ ಸಂಸ್ಥೆಯ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯಗಳನ್ನು ವೃದ್ದಿಸಲು ಉತ್ತಮ ವೇದಿಕೆ ಸಿಗಲಿದೆ. ವಿದ್ಯಾರ್ಥಿಗಳು ಉದ್ಯೋಗಾರ್ಹವಾಗುವ ನಿಟ್ಟಿನಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ಈ ರೀತಿಯ ಸೆಂಟರ್ ಗಳಲ್ಲಿ ಬೆಳೆಸಿಕೊಳ್ಳಬೇಕು. ಇದರಿಂದ ವಿದ್ಯಾಸಂಸ್ಥೆಯ ಪಠ್ಯಕ್ರಮ ಹಾಗೂ ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯಗಳ ನಡುವಿನ ಅಂತರವನ್ನು ಕಡಿತಗೊಳಿಸಬಹುದಾಗಿದೆ’ ಎಂದರು.
ಈ ಸಂದರ್ಭದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಸಂಸ್ಥೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ರೋಶನ್ ಆರ್, ಡೆಪ್ಯೂಟಿ ಮ್ಯಾನೇಜರ್ ಶಶಿಕಿರಣ್ ಕೆ.ಬಿ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಪ್ರೊ- ವೈಸ್ ಚಾನ್ಸಲರ್ ಡಾ.ಎಂ.ಎಸ್ ಮೂಡಿತ್ತಾಯ, ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಘೋಂಡಿದ್ದರು. ಇದೇ ಸಂದರ್ಭದಲ್ಲಿ ನಿಟ್ಟೆ ಮತ್ತು ಟೊಯೋಟಾ ಸಂಸ್ಥೆಗಳ ನಡುವೆ ಆಗಿರುವ ಒಪ್ಪಂದದ ಪ್ರತಿಗಳನ್ನು ಪರಸ್ಪರ ಹಸ್ತಾಂತರಿಸಲಾಯಿತು.
ಈ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಟೊಯೋಟಾ ಕಂಪೆನಿಯ ವಿವಿಧ ಕಾರುಗಳ ಇಂಜಿನ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಈ ಇಂಜಿನ್ ಗಳ ಕಾರ್ಯಚಟುವಟಿಕೆಗಳನ್ನು ಹ್ಯಾಂಡ್ಸ್ ಆನ್ ತರಬೇತಿಗಳ ಮೂಲಕ ವಿದ್ಯಾರ್ಥಿಗಳು ಅರಿತುಕೊಳ್ಳಲಿರುವರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ಲೇಸ್ಮೆಂಟ್ & ಟ್ರೈನಿಂಗ್ ವಿಭಾಗದ ಮುಖ್ಯಸ್ಥ ಭರತ್ ಜಿ ಕುಮಾರ್ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಫ್ಳೂಣ್ಕರ್ ಸಂಸ್ಥೆಯ ಬಗೆಗೆ ವಿವರಿಸಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಪೈ ವಂದಿಸಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಹಾಗೂ ನಿಟ್ಟೆ- ಟೊಯೋಟಾ ಸೆಂಟರ್ ಆಫ್ ಎಕ್ಸಲೆನ್ಸ್ ನ ಸಂಯೋಜಕ ಡಾ.ಗ್ರೈನಲ್ ಡಿಮೆಲ್ಲೊ ಕಾರ್ಯಕ್ರಮವನ್ನು ಸಂಯೋಜಿಸಿದರು.


