ಇನ್ನು ಹಳೆಯ ಚಿನ್ನವನ್ನು ಮಾರಾಟ ಮಾಡುವುದು ಇನ್ನಷ್ಟು ಕಠಿಣ,ಕೇಂದ್ರ ಸರ್ಕಾರದ ಹೊಸ ರೂಲ್ಸ್!
ದೇಶದಲ್ಲಿ 2023ರ ಏ.1ರಿಂದ ಮಾರಾಟ ಮಾಡುವ ಎಲ್ಲ ಚಿನ್ನಾಭರಣ ಮತ್ತು ಚಿನ್ನದ ಕಲಾಕೃತಿಗಳು ಆರು ಅಂಕಿಗಳ ಹಾಲ್‌ಮಾರ್ಕ್ (ಎಚ್ ಯುಐಡಿ) ಕೋಡ್ ಹೊಂದಿರೋದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.ಎಚ್ ಯುಐಡಿ ಸಂಖ್ಯೆ ಪ್ರತಿ ಚಿನ್ನದ ವಸ್ತುವಿಗೆ ವಿಶಿಷ್ಟ ಗುರುತು ನೀಡುತ್ತದೆ. ಹಾಗೆಯೇ ಭರವಸೆ ನೀಡಿರುವ ಪರಿಶುದ್ಧತೆಯನ್ನು ಕೂಡ ಖಚಿತಪಡಿಸುತ್ತದೆ. ಇದರ ಹೊರತಾಗಿ ಚಿನ್ನದ ಕಲಾಕೃತಿಗಳು ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಬಿಐಎಸ್) ಲೋಗೋ ಹಾಗೂ ಪರಿಶುದ್ಧತೆ ಮಾರ್ಕ್ ಅನ್ನು ಕೂಡ ಹೊಂದಿರೋದು ಅಗತ್ಯ. ಚಿನ್ನವನ್ನು ಅತ್ಯಂತ ಸುರಕ್ಷಿತ ಹೂಡಿಕೆ ಎಂದು ಭಾವಿಸಿರುವ ದೇಶದಲ್ಲಿ ಈ ಹೊಸ ನಿಯಮಗಳು ಚಿನ್ನದ ಆಭರಣಗಳು ಹಾಗೂ ಚಿನ್ನದ ಕಲಾಕೃತಿಗಳ ಖರೀದಿಯಲ್ಲಿ ಹೆಚ್ಚಿನ ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ಗ್ರಾಹಕರ ಆತ್ಮವಿಶ್ವಾಸ ಹೆಚ್ಚಿಸುವ ಸಾಧ್ಯತೆ ಇದೆ. ಆದರೆ, ನಿಮ್ಮ ಬಳಿಯಿರುವ ಹಳೆಯ, ಹಾಲ್ ಮಾರ್ಕ್ ಇಲ್ಲದ ಚಿನ್ನದ ಆಭರಣಗಳನ್ನು ಈಗ ಹೊಸ ವಿನ್ಯಾಸಗಳಿಗೆ ವಿನಿಮಯ ಮಾಡಲು ಸಾಧ್ಯವಿಲ್ಲ. ಆದರೆ, ಹಳೆಯ ಚಿನ್ನಗಳಿಗೆ ಹಾಲ್ ಮಾರ್ಕ್ ಮಾಡಿಸಿದ್ರೆ ಇದನ್ನು ನೀಡಿ ಹೊಸ ವಿನ್ಯಾಸ ಆಭರಣಗಳನ್ನು ಖರೀದಿಸಬಹುದು.ಬಿಐಎಸ್ ಪ್ರಕಾರ ಹಾಲ್ ಮಾರ್ಕ್ ಹೊಂದಿರದ ಚಿನ್ನಾಭರಣಗಳನ್ನು ಹೊಂದಿರುವ ಗ್ರಾಹಕರು ಅವುಗಳನ್ನು ಮಾರಾಟ ಅಥವಾ ಹೊಸ ವಿನ್ಯಾಸಗಳಿಗೆ ವಿನಿಮಯ ಮಾಡುವ ಮುನ್ನ ಹಾಲ್ ಮಾರ್ಕ್ ಮಾಡಿಸೋದು ಕಡ್ಡಾಯ.
ಹಳೆಯ ಚಿನ್ನಾಭರಣಗಳಿಗೆ ಎರಡು ವಿಧಾನಗಳ ಮೂಲಕ ಹಾಲ್ ಮಾರ್ಕ್ ಮಾಡಿಸಬಹುದು. ಒಂದು ಬಿಐಎಸ್ ನೋಂದಣಿಯಾಗಿರುವ ಜ್ಯುವೆಲ್ಲರ್ ಮೂಲಕ. ಇವರು ಹಾಲ್ ಮಾರ್ಕ್ ಇರದ ಚಿನ್ನದ ಕಲಾಕೃತಿಗಳನ್ನು ಬಿಐಎಸ್ ಹಾಲ್‌ಮಾರ್ಕಿಂಗ್ ಕೇಂದ್ರಗಳಿಂದ (AHCs) ತೆಗೆದುಕೊಂಡು ಹೋಗಿ ಹಾಲ್ ಮಾರ್ಕ್ ಹಾಕಿಸುತ್ತಾರೆ.ಇದಕ್ಕೆ ಗ್ರಾಹಕರು ಪ್ರತಿ ಚಿನ್ನದ ಕಲಾಕೃತಿ ಮೇಲೆ 45ರೂ. ಪಾವತಿಸಬೇಕು. ಇನ್ನು ಎರಡನೇ ಮಾರ್ಗವೆಂದರೆ ಗ್ರಾಹಕರು ಸ್ವತಃ ಬಿಐಎಸ್ ಅಂಗೀಕೃತ ಹಾಲ್ ಮಾರ್ಕಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಚಿನ್ನದ ಆಭರಣಗಳ ಪರಿಶುದ್ಧತೆ ಪರೀಕ್ಷಿಸಬಹುದು. ಐದು ಅಥವಾ ಅದಕ್ಕಿಂತ ಹೆಚ್ಚಿನ ಕಲಾಕೃತಿಗಳಿದ್ದರೆ ಪ್ರತಿಯೊಂದರ ಮೇಲೆ 45ರೂ. ವಿಧಿಸಲಾಗುತ್ತದೆ. ಒಂದು ವೇಳೆ ನಾಲ್ಕು ಚಿನ್ನದ ಕಲಾಕೃತಿಗಳಿದ್ದರೆ 200ರೂ. ಪಾವತಿಸಬೇಕು.
ಹಳೆಯ ಹಾಗೂ ಹಾಲ್ ಮಾರ್ಕ್ ಇಲ್ಲದ ಚಿನ್ನದ ಚಿನ್ನದ ಆಭರಣಗಳನ್ನು ಪರೀಕ್ಷಿಸಲು ಬಿಐಎಸ್ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಬಿಐಎಸ್ ನೋಂಧಾಯಿತ ಹಾಲ್ ಮಾರ್ಕಿಂಗ್ ಕೇಂದ್ರ ಪರಿಶುದ್ಧತೆಯ ಪ್ರಮಾಣಪತ್ರವನ್ನು ನೀಡುತ್ತದೆ. ಗ್ರಾಹಕರು ಈ ಪ್ರಮಾಣಪತ್ರದೊಂದಿಗೆ ಯಾವುದೇ ಚಿನ್ನದ ಆಭರಣ ಮಳಿಗೆಗೆ ತೆರಳಿ ಹಾಲ್ ಮಾರ್ಕ್ ಹೊಂದಿರದ ಹಳೆಯ ಚಿನ್ನವನ್ನು ಮಾರಾಟ ಮಾಡಬಹುದು.
ಒಂದು ವೇಳೆ ಗ್ರಾಹಕರು ಹಳೆಯ ಅಥವಾ ಈ ಹಿಂದಿನ ಹಾಲ್ ಮಾರ್ಕ್ ಸಹಿ ಹೊಂದಿರುವ ಚಿನ್ನದ ಆಭರಣಗಳನ್ನು ಹೊಂದಿದ್ದರೆ ಅದನ್ನು ಈಗಲು ಕೂಡ ಹಾಲ್ ಮಾರ್ಕ್ ಹೊಂದಿರುವ ಆಭರಣ ಎಂದೇ ಪರಿಗಣಿಸಲಾಗುತ್ತದೆ. ಹಳೆಯ ಸಹಿಯೊಂದಿಗೆ ಹಾಲ್ ಮಾರ್ಕ್ ಆಗಿರುವ ಚಿನ್ನದ ಆಭರಣಗಳನ್ನು ಎಚ್ ಯುಐಡಿ ಸಂಖ್ಯೆ (HUID number) ಜೊತೆಗೆ ಮತ್ತೆ ಪುನಃ ಹಾಲ್ ಮಾರ್ಕ್ ಹಾಕಿಸಬೇಕಾದ ಅಗತ್ಯವಿಲ್ಲ. ಇಂಥ ಹಾಲ್ ಮಾರ್ಕ್ ಹೊಂದಿರುವ ಆಭರಣಗಳನ್ನು ಸುಲಭವಾಗಿ ಮಾರಾಟ ಮಾಡಬಹುದು ಅಥವಾ ಹೊಸ ವಿನ್ಯಾಸದ ಆಭರಣಗಳಿಗೆ ಬದಲಾಯಿಸಬಹುದು.
ಎಚ್ ಯುಐಡಿ ವಿವರಣೆಗೆ ಜ್ಯುವೆಲ್ಲರಿ ಒಳಪಡದಿದ್ದರೆ ಚಿನ್ನದ ಹಾಲ್ ಮಾರ್ಕ್ ನಿಯಮಗಳು ಗ್ರಾಹಕರಿಗೆ ಸುರಕ್ಷತೆ ಒದಗಿಸುತ್ತವೆ. ಬಿಐಎಸ್ ನಿಯಮ 49ರ ಅಡಿಯಲ್ಲಿ ಚಿನ್ನದ ಪರಿಶುದ್ಧತೆಯಲ್ಲಿ ವ್ಯತ್ಯಸ ಕಂಡುಬಂದರೆ ಅದರ ಮೌಲ್ಯದ ವ್ಯತ್ಯಾಸದ ಎರಡು ಪಟ್ಟು ಪರಿಹಾರ ಪಡೆಯಬಹುದು.