ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುನಿಯಾಲಿನಲ್ಲಿ ವೃತ್ತಿ ಮಾಗ೯ದಶ೯ನ ತರಬೇತಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುನಿಯಾಲು ಇಲ್ಲಿನ ಉದ್ಯೋಗ ಮಾಗ೯ದಶಿ೯ ಕೋಶ ಮತ್ತು ಉನ್ನತಿ ಫೌಂಡೇಶನ್ ಬೆಂಗಳೂರು ಇವರ ವತಿಯಿಂದ 30 ದಿನಗಳ ಕಾಲ ನಡೆಯುವ ಸಾಫ್ಟ್ ಸ್ಕಿಲ್ಸ್ ಮತ್ತು ಇಂಗ್ಲೀಷ್ ಸಂವಾದ ತರಬೇತಿಕಾರ್ಯಕ್ರಮ ದಿನಾಂಕ 22 -05 -2023 ರಂದು ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮದಲ್ಲಿ ಉನ್ನತಿ ಫೌಂಡೇಶನ್ ತರಬೇತುದಾರರಾದ ಶ್ರೀ ಗುರುಪ್ರಸಾದ್ ಭಟ್ ಮಾತನಾಡಿ, ಉನ್ನತಿ ಫೌಂಡೇಶನ್ ಇದರ ತರಬೇತಿ ಕಾರ್ಯಕ್ರಮದ ಉದ್ದೇಶ ಮತ್ತು ಧ್ಯೇಯಗಳನ್ನು ತಿಳಿಸುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯೂ ಪದವಿಯನ್ನು ಪಡೆಯುವುದರ ಜೊತೆಗೆ ಔದ್ಯೋಗಿಕ ಕ್ಷೇತ್ರಕ್ಕೆ ಬೇಕಾಗುವ ಕೌಶಲ್ಯ ಮತ್ತು ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಮೂಡಿಸುವಂತಹ ತರಬೇತಿಯನ್ನು ಸಂಸ್ಥೆಯು ನೀಡುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಂಜುನಾಥ ಆಚಾರಿಯವರು, ಪದವಿ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಳ್ಳಲು ಬೇಕಾಗಿರುವ ಎಲ್ಲಾ ಸಾಮರ್ಥ್ಯ, ಕೌಶಲ್ಯ, ಜ್ಞಾನ, ಆತ್ಮವಿಶ್ವಾಸವನ್ನು ಮೂಡಿಸುವ ಅವಶ್ಯಕತೆಯಿದೆ . ಇಂತಹ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪದವಿ ಪಡೆದ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಒಳ್ಳೆಯ ಆದಾಯವನ್ನು ನೀಡುವ ಉದ್ಯೋಗವನ್ನು ಪಡೆಯಲು ಸಾಧ್ಯವಾಗಿ, ಕಲಿಸಿದ ಸಂಸ್ಥೆಗೂ ಮತ್ತು ಕಾಲೇಜಿಗೆ ಕಳುಹಿಸಿದ ಪಾಲಕರಿಗೆ ಒಂದು ಸಾರ್ಥಕ್ಯ ಭಾವವನ್ನು ನೀಡುವುದು ಎಂದರು. ವಿದ್ಯಾರ್ಥಿಕ್ಷೇಮಪಾಲನ ಅಧಿಕಾರಿ ಶ್ರೀ ವಿಶ್ವೇಶ್ವರ್ ಎನ್ ಗಾಂವ್ಕಾರ್ ತರಬೇತಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರಾದ ಶ್ರೀ ಉಮೇಶ್ ಬಿ.ಎಂ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಸುಮಾರು 40 ವಿದ್ಯಾರ್ಥಿಗಳು ಈ ತರಬೇತಿಯ ಪ್ರಯೋಜನ ಪಡೆಯಲಿದ್ದಾರೆ.