ಕಾರ್ಕಳ:ಕಾರು ಬೈಕ್ ಸ್ಕೂಟರ್ ನಡುವೆ ಸರಣಿ ಅಪಘಾತ: ದಂಪತಿ ಮಕ್ಕಳು ಸೇರಿ 6 ಜನರಿಗೆ ಗಾಯ
ಕಾರ್ಕಳ:ಮರ್ಣೆ ಗ್ರಾಮ ಕಾಡುಹೊಳೆ ಸೇತುವೆಯ ಬಳಿಯ ಅಪಾಯಕಾರಿ ತಿರುವಿನಲ್ಲಿ ಅತಿವೇಗವಾಗಿ ಬಂದ ಕಾರೊಂದು ಬೈಕ್ ಹಾಗೂ ಸ್ಕೂಟರಿಗೆ ಡಿಕ್ಕಿಯಾಗಿ ಮಕ್ಕಳು ಸಹಿತ 6 ಜನರಿಗೆ ಗಾಯಗಳಾದ ಘಟನೆ ಜೂನ್ 4ರಂದು ಭಾನುವಾರ ಸಂಜೆ ಸಂಭವಿಸಿದೆ.
ಕಾರು ಚಾಲಕಿಯ ಅವಾಂತರದಿಂದ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಹಠಾತ್ ಬಲಕ್ಕೆ ತಿರುಗಿದ ಪರಿಣಾಮ ಎದುರಿನಿಂದ ಬರುತ್ತಿದ್ದ ಬೈಕ್ ಹಾಗೂ ಸ್ಕೂಟರಿಗೆ ಅಪ್ಪಳಿಸಿ ಮಕ್ಕಳಿಬ್ಬರು ಸೇರಿದಂತೆ 6 ಜನರಿಗೆ ಗಾಯಗಳಾಗಿದ್ದು ಈ ಪೈಕಿ ಓರ್ವ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ.
ಈ ಅಪಘಾತದಿಂದ ಮುದ್ರಾಡಿಯ ನಿವಾಸಿ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಮನೋಹರ ಪ್ರಸಾದ್(37) ಹಾಗೂ ಅವರ ಪತ್ನಿಗೆ ತೀವ್ರ ಗಾಯಗಳಾಗಿವೆ. ಅವರು ಮದುವೆ ಕಾರ್ಯಕ್ರಮಕ್ಕೆ ತೆರಳಿ ಮುದ್ರಾಡಿಗೆ ವಾಪಾಸು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅವರ ಹಿಂದಿನಿಂದ ಸ್ಕೂಟರಿಗೆ ಡಿಕ್ಕಿ ಹೊಡೆದು ಸ್ಕೂಟರ್ ಚಲಾಯಿಸುತ್ತಿದ್ದ ಮುದ್ರಾಡಿ ನಿವಾಸಿ ಶರತ್ ಶೆಟ್ಟಿಗಾರ್ (46) ಹಾಗೂ ಅವರ ಪತ್ನಿ ಮಕ್ಕಳಿಬ್ಬರಿಗೆ ಗಾಯಗಳಾಗಿವೆ.
ಕಾರನ್ನು ಅಜೆಕಾರು ಬಂಡಸಾಲೆಯ ನಿವಾಸಿ ಕುಸುಮಾಂಜರಿ ಎಂಬವರು ಚಲಾಯಿಸುತ್ತಿದ್ದರು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು ಚಾಲಕಿಯ ನಿರ್ಲಕ್ಷ್ಯದಿಂದ ಅಮಾಯಕರು ಆಸ್ಪತ್ರೆ ಸೇರುವಂತಾಗಿರುವುದೇ ದುರಂತ.ಘಟನಾಸ್ಥಳಕ್ಕೆ ಅಜೆಕಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.