ಹೈಕೋರ್ಟ್ ನಲ್ಲಿ ಕಂಚಿನದೇ ಮೂರ್ತಿ ಎಂದು ಒಪ್ಪಿಕೊಳ್ಳುವ ಕಾಂಗ್ರೆಸ್ಸಿಗರೇ ಇಲ್ಲಿ ಫೈಬರ್ ಮೂರ್ತಿ ಎಂದು ಸುಳ್ಳು ಹೇಳುವ ನೀವು ಕಾರ್ಕಳದ ಜನತೆಯ ಬಳಿ ಬೇಶರತ್ ಕ್ಷಮೆ ಕೇಳಬೇಕು-ಉದಯ ಎಸ್. ಕೋಟ್ಯಾನ್
ಕಾರ್ಕಳ:ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣ ಹಂತದಲ್ಲಿರುವ ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಬಗ್ಗೆ ಕಾರ್ಕಳದ ಜನತೆಗೆ ದಿನಕ್ಕೊಂದು ಸುಳ್ಳು ಹೇಳುತ್ತಿರುವ ಕಾರ್ಕಳ ಕಾಂಗ್ರೆಸ್‌ನ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಕಾರ್ಕಳದ ಸಮಸ್ತ ಜನತೆಯ ಬೇಶರತ್ ಕ್ಷಮೆ ಕೇಳಬೇಕು ಎಂದು ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಕಾರ್ಯದರ್ಶಿ ಉದಯ್ ಎಸ್. ಕೋಟ್ಯಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಥೀಂ ಪಾರ್ಕ್ ಕಾಮಗಾರಿಗಳಲ್ಲಿ ಒಂದು ಭಾಗವಾಗಿರುವ ಪರಶುರಾಮನ ಕಂಚಿನ ಮೂರ್ತಿಯನ್ನು ಮರುವಿನ್ಯಾಸಗೊಳಿಸುವ ಬಗ್ಗೆ ಕಾನೂನಾತ್ಮಕವಾಗಿಯೇ ತೆಗೆಯುವ ಸಂದರ್ಭದಲ್ಲಿ ಸರ್ಕಾರದ ಮೂಲಕ ಒತ್ತಡ ಹೇರಿ ಅರ್ಧ ಭಾಗ ತೆಗೆಯುವ ಸಂದರ್ಭ ಕಾಮಗಾರಿಗೆ ತಡೆಯನ್ನು ತಂದಿರುತ್ತೀರಿ. ಪೊಲೀಸು ರಕ್ಷಣೆಯಲ್ಲಿಯೇ ಮೂರ್ತಿ ಭಾಗಗಳನ್ನು ತೆಗೆದಿದ್ದರೂ ಕೂಡ ಮೂರ್ತಿ ಕಳವು ಆಗಿದೆ ಎಂದು ದೂರು ಕೊಟ್ಟಿರುತ್ತೀರಿ ಹಾಗೂ ಮಾಧ್ಯಮಗಳಿಗೆ ಮೂರ್ತಿ ಕಳವು ಆಗಿದೆ ಎಂದು ತಪ್ಪು ಮಾಹಿತಿ ನೀಡಿದಿರಿ.
ಉಳಿದ ಮೂರ್ತಿಯ ಭಾಗಗಳನ್ನು ತೆಗೆಯುವಾಗ, ಕೋರ್ಟ್ ಆದೇಶ ಇದ್ದರೂ ಕೂಡ ರಾತ್ರೋರಾತ್ರಿ ಬೆಟ್ಟಕ್ಕೆ ಹೋಗುವ ಏಕೈಕ ರಸ್ತೆಗೆ ಮಣ್ಣು ತಂದು ರಾಶಿ ಹಾಕಿದಿರಿ ಹಾಗೂ ನಿಮ್ಮ ಪ್ರಭಾವ ಬಳಸಿ ಪೊಲೀಸ್ ರಕ್ಷಣೆಯನ್ನು ಹಿಂಪಡೆದಿರಿ. ಈ ಮೂಲಕ ಮತ್ತೆ ಕಾಮಗಾರಿಗೆ ತಡೆಯೊಡ್ಡಿದಿರಿ. ರಾಜ್ಯದಲ್ಲಿಯೇ ಪ್ರಥಮ ಎಂಬಂತೆ ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ರಾಜ್ಯದ ರಾಜ್ಯಧಾನಿಯಲ್ಲಿ ಪ್ರತಿಭಟನೆ ಮಾಡಿಸಿ ಇಡೀ ರಾಜ್ಯದ ಜನರಿಗೆ ಸುಳ್ಳು ಹೇಳಿಸಿದಿರಿ….ಈ ಮೂಲಕ ಕಾರ್ಕಳಕ್ಕೆ ಕಳಂಕ ತಂದಿರಿ. ಮೂರ್ತಿ ಕಳಪೆ ಹಾಗೂ ಫೈಬರ್ ಮೂರ್ತಿ ಎಂದು ಬಿಂಬಿಸುತ್ತಾ ಕೋರ್ಟಿಗೆ ಹೋದಿರಿ.
ಮೊದಲಿಗೆ ಇಡೀ ಮೂರ್ತಿ ಫೈಬರ್ ಅಂದಿರಿ ಆಮೇಲೆ ಅರ್ಧ ಮೂರ್ತಿ ಫೈಬರ್ ಅಂದಿರಿ ಈಗ ಕರ್ನಾಟಕದ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಮೂರ್ತಿಯ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ ಮೂರ್ತಿ ಕಂಚಿನದೇ, ನಮ್ಮ ತಕರಾರು ಏನಿದ್ದರೂ ಮೂರ್ತಿ ಶಿಲ್ಪಿ ಕೃಷ್ಣನಾಯಕ ಜಿಎಸ್‌ಟಿ ಕಟ್ಟಿಲ್ಲ ಎಂಬುದರ ಬಗ್ಗೆ ಮಾತ್ರ ಎನ್ನುತ್ತೀರಿ.
ಹಾಗಾದರೆ ಕೋರ್ಟ್‌ನಲ್ಲಿ ಸತ್ಯ ಹೇಳುವ ನೀವು ಇಷ್ಟರ ತನಕ ಕಾರ್ಕಳ ಜನತೆಗೆ ಯಾಕೆ ಸುಳ್ಳು ಹೇಳಿದ್ದೀರಿ…? ನೀವು ಪದೇ ಪದೇ ಫೈಬರ್-ಫೈಬರ್ ಎಂದು ಹೇಳಿ ಜನರಿಗೆ ಯಾಕೆ ಮೋಸ ಮಾಡಿದಿರಿ…? ಮೂರ್ತಿ ಕಂಚಿನದೇ ಎಂದು ಗೊತ್ತಿದ್ದರೂ ಕೂಡ ಕಾಮಗಾರಿಗೆ ಪ್ರತಿ ಹಂತದಲ್ಲೂ ತಡೆ ಒಡ್ಡಿದ್ದಿರಿ ಯಾಕೆ…? ಕಾರ್ಕಳವನ್ನು ಒಂದು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡಬೇಕೆಂಬ ಮಾನ್ಯ ಶಾಸಕರಾದ ಸುನಿಲ್ ಕುಮಾರ್ ಅವರ ಪ್ರಯತ್ನಕ್ಕೆ ಯಾಕೆ ಅಡ್ಡಗಾಲು ಹಾಕಿದ್ದೀರಿ…?
ನೀವು ಇಷ್ಟೆಲ್ಲಾ ಸುಳ್ಳು ಹೇಳಿದರೂ ಸಹ ನಾವು ಇದನ್ನೆಲ್ಲಾ ಬಿಟ್ಟು ಬಿಡಲು ತಯಾರಿದ್ದೇವೆ. ಆದರೆ ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸದರಿ ಥೀಂ ಪಾರ್ಕ್ ಕಾಮಗಾರಿಗೆ ರೂ.11.00 ಕೋಟಿ ಅನುದಾನ ಮಂಜೂರಾತಿಯಾಗಿದ್ದು, ರೂ.06.72 ಕೋಟಿ ಅನುದಾನ ಬಿಡುಗಡೆಗೊಂಡಿರುತ್ತದೆ. ನಿಮಗೆ ನಿಜವಾಗಿಯೂ ತಾಕತ್ತಿದ್ದರೆ, ನಿರಂತರವಾಗಿ ಜನರಿಗೆ ಸುಳ್ಳು ಹೇಳುವುದನ್ನು ಬಿಟ್ಟು, ಉಳಿದ ಅನುದಾನ ಬಿಡುಗಡೆಗೊಳಿಸಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಆದಷ್ಟು ಬೇಗ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿ, ನೀವು ಮಾಡುತ್ತಿರುವ ತಪ್ಪನ್ನು ನೀವೇ ಸರಿಪಡಿಸಿಕೊಳ್ಳುವ ಮೂಲಕ ಸಮಸ್ಥ ಕಾರ್ಕಳದ ಜನತೆಯ ಮುಂದೆ ಕ್ಷಮೆ ಕೇಳಿ ಎಂದು ಅವರು ತಿಳಿಸಿದ್ದಾರೆ.