ಕಾರ್ಕಳ:ಕ್ರೈಸ್ಟ್ ಕಿಂಗ್ ನಲ್ಲಿ ರಾಷ್ಟ್ರೀಯ ಹಿಂದಿ ದಿನಾಚರಣೆ
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯಡ್ಕ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿಂದಿ ಶಿಕ್ಷಕ ಡಾ. ರವೀಂದ್ರ ಕುಮಾರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಈ ದೇಶದಲ್ಲಿ ಎಲ್ಲಾ ಭಾಷೆಗಳು ಶ್ರೇಷ್ಟವೇ, ಆದ್ದರಿಂದ ಭಾಷೆಗಳನ್ನು ದ್ವೇಷಿಸದೆ ಪ್ರೀತಿಸಬೇಕು. ಹಿಂದಿ ದೇಶದ ಪ್ರಮುಖ ಭಾಷೆಯಾದ ಕಾರಣ ಅದರ ಕಲಿಕೆಯ ಕಡೆಗೂ ಒತ್ತನ್ನು ನೀಡಬೇಕು” ಎಂದು ಹೇಳಿ ಹಿಂದಿ ಭಾಷೆ ಹುಟ್ಟಿ ಬೆಳೆದು ಬಂದ ರೀತಿ, ಹಿಂದಿಯ ಪ್ರಾಮುಖ್ಯತೆ, ಜೀವನದಲ್ಲಿ ಹಿಂದಿ ಭಾಷೆ ಅಳವಡಿಕೆಯ ಅಗತ್ಯತೆಗಳ ಕುರಿತು ತಿಳಿ ಹೇಳಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಹಿಂದಿ ಉಪನ್ಯಾಸಕಿ ಶ್ರೀಮತಿ ಶಾಹಿನಾ ಬಾನು ಅತಿಥಿಗಳನ್ನು ಪರಿಚಯಿಸಿದರೆ ಹಿಂದಿ ಶಿಕ್ಷಕಿ ಶಮೀನಾ ಅಮೀರ್ ಸ್ವಾಗತಿಸಿದರು. ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಲೆನಿಷಾ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿ, ಝುಬೇದ ವಂದಿಸಿದರು.