ಕರ್ನಾಟಕದ ನೂತನ ರಾಜಕೀಯ ಅಧ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದ ಮೊದಲ ದರ್ಜೆಯ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ಬುಧವಾರ ಸಂಜೆ 4.05ಕ್ಕೆ ರಾಜಭವನದ ಗ್ಲಾಸ್ ಹೌಸ್‌ನಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಸಿಎಂ ಜೊತೆಗೆ ಮೊದಲ ಹಂತದಲ್ಲಿ 10 ರಿಂದ 12 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಶಾಸಕರ ಅಂತಿಮ ಪಟ್ಟಿ ಇಂದು (ಮಂಗಳವಾರ) ಹೊರಬೀಳುವ ಸಾಧ್ಯತೆಯಿದೆ.
ದೆಹಲಿಯಲ್ಲಿಂದು ನಡೆಯಲಿರುವ ಹೈಕಮಾಂಡ್ ನಾಯಕರ ಹೈವೋಲ್ಟೇಜ್ ಸಭೆಯಲ್ಲಿ ಸಚಿವರ ಹೆಸರುಗಳು ಫೈನಲ್ ಆಗಲಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಪಟ್ಟಿಗೆ ಅಂತಿಮ ಮುದ್ರೆ ಒತ್ತಲಿದ್ದಾರೆ.
ರಾಹುಲ್ ತಡವಾಗಿ ಬಂದಿದ್ದಕ್ಕೆ ಸಭೆ ಮುಂದೂಡಿಕೆ
ವಾಸ್ತವವಾಗಿ ಈ ಪ್ರಮುಖ ಸಭೆಯು ಸೋಮವಾರ ಸಂಜೆಯೇ ನಡೆಯಬೇಕಿತ್ತು. ಆದರೆ ಜೈಪುರ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಅವರು ದೆಹಲಿ ತಲುಪುವುದು ತಡವಾದ ಹಿನ್ನೆಲೆಯಲ್ಲಿ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಹೈಕಮಾಂಡ್ ನಾಯಕರ ಈ ದಿಢೀರ್ ನಿರ್ಧಾರದಿಂದಾಗಿ ಸಚಿವ ಸ್ಥಾನದ ರೇಸ್‌ನಲ್ಲಿರುವ ರಾಜ್ಯದ ಕೈ ಶಾಸಕರಲ್ಲಿ ಧಡಧಡ ಹೆಚ್ಚಾಗಿದ್ದು, ಕುತೂಹಲದ ಮುಖಭಾವ ಮೂಡಿದೆ. ಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಚರ್ಚೆ ರಾಜಕೀಯ ಕಾರಿಡಾರ್‌ನಲ್ಲಿ ಜೋರಾಗಿದೆ.
ಸಚಿವ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರುವವರು
ಹೊಸ ಸಚಿವ ಸಂಪುಟ ಸೇರಲು ಹಲವು ನಾಯಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಸದ್ಯದ ಮೂಲಗಳ ಪ್ರಕಾರ ಯತೀಂದ್ರ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಎಚ್.ಸಿ. ಮಹದೇವಪ್ಪ, ಸಂತೋಷ್ ಲಾಡ್ ಹಾಗೂ ಜಮೀರ್ ಅಹಮದ್ ಖಾನ್ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ.
ಪಕ್ಷದ ಆಂತರಿಕ ಮೂಲಗಳ ಪ್ರಕಾರ, ನೂತನ ಸಚಿವ ಸಂಪುಟದಲ್ಲಿ ಹಿರಿಯರ ಅನುಭವ ಹಾಗೂ ಯುವಕರ ಉತ್ಸಾಹಕ್ಕೆ ಆದ್ಯತೆ ನೀಡಲಾಗುತ್ತಿದೆ. ಜಾತಿ ಸಮೀಕರಣ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಜೊತೆಗೆ ಹಂಗಾಮಿ ಸಿಎಂ ಸಿದ್ದರಾಮಯ್ಯ ಬಣದ ನಿಷ್ಠಾವಂತ ನಾಯಕರಿಗೆ ಮಣೆ ಹಾಕಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.

















