ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಸೋಲಿನ ನಂತರ ಕೇಂದ್ರ ಸಚಿವ ಹೆಚ್ಡಿ ಮಾರಸ್ವಾಮಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ನಾಲ್ವರು ಅಡ್ಡ ಮತದಾನ ಮಾಡಿದ್ದಾರೆ. ಅವರು ಯಾರು ಅಂತಲೂ ಗೊತ್ತಿದೆ. ಈಗಾಗಲೇ ಅವರು ಪಕ್ಷ ಬಿಡುವ ಚರ್ಚೆಯನ್ನೂ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ಭವಿಷ್ಯದ ಕುರಿತು ಮಾತನಾಡಿದ ಕುಮಾರಸ್ವಾಮಿ, ಇನ್ನು ಮುಂದೆ ಯುವಕರು ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ನಿರ್ಧಾರ ಮಾಡಿರುವುದಾಗಿ ಘೋಷಿಸಿದರು. ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸಲು ನಿರಾಕರಿಸಿದ ಅವರು, ಮಾಧ್ಯಮ ಪ್ರತಿನಿಧಿಗಳು ಜಿಟಿ ದೇವೇಗೌಡ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ‘ಅವರ ಹೆಸರು ಎತ್ತಬೇಡಿ’ ಎಂದು ಪುನರುಚ್ಚರಿಸಿದರು. ಕಳೆದ ಒಂದೂವರೆ ವರ್ಷದಿಂದಲೂ ಅವರ ಬಗ್ಗೆ ಮಾತನಾಡಿಲ್ಲ, ಇತ್ತೀಚೆಗೆ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲೂ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದಲ್ಲಿ ಅಂತಿಮ ನಿರ್ಧಾರವನ್ನು ತಾವೇ ಕೈಗೊಳ್ಳುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಕಾರ್ಯಕರ್ತರ ಅಭಿಪ್ರಾಯಗಳನ್ನು ಆಧರಿಸಿ ತಮ್ಮ ನಿರ್ಣಯಗಳನ್ನು ಮಾಡುವುದಾಗಿ ತಿಳಿಸಿದರು. ಇದು ಪಕ್ಷದ ಆಂತರಿಕ ವಿಚಾರಗಳಲ್ಲಿ ತಮ್ಮದೇ ಅಂತಿಮ ಮಾತು ಎಂಬ ಸಂದೇಶವನ್ನು ರವಾನಿಸಿದೆ.
ಗುರುವಾರ ನಡೆದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐವರೂ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಬಿಜೆಪಿಯ ಇಬ್ಬರು ಅಬ್ಯರ್ಥಿಗಳು ಮೇಲ್ಮನೆ ಪ್ರವೇಶಿಸಿದ್ದರೆ, ಜೆಡಿಎಸ್‌ನ ಗೋವಿಂದ ರಾಜುಗೆ ಸೋಲಾಗಿದೆ. ಜೆಡಿಎಸ್ ಶಾಸಕರ ಅಡ್ಡಮತದಾನವೇ ಇದಕ್ಕೆ ಕಾರಣವಾಯಿತು.



















