ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಗುಡುಗಿದ್ದಾರೆ.
ನಿನ್ನೆಯ ಫಲಿತಾಂಶ ಆಘಾತಕಾರಿಯಾಗಿದೆ ಎಂದ ವಿಜಯೇಂದ್ರ, ನಿನ್ನೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಆರೇಳು ಜನ ಹಾಗೂ ಬಿಜೆಪಿಯಿಂದ ನಾಲ್ಕೈದು ಜನ ಅಡ್ಡ ಮತದಾನ ಮಾಡಿದ್ದಾರೆ. ಈ ಘಟನೆ ನಿಜಕ್ಕೂ ಆಗಬಾರದಿತ್ತು, ದುರಾದೃಷ್ಟವಶಾತ್ ನಡೆದುಹೋಗಿದೆ. ಯಾರ್ಯಾರು ಬೆನ್ನಿಗೆ ಇರಿದು ಆಟ ಆಡಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಸದ್ಯ ನಮ್ಮ ಬಳಿ ಇದೆ. ಇವತ್ತು ಅಥವಾ ನಾಳೆಯೊಳಗೆ ಇದರ ಸಂಪೂರ್ಣ ಚಿತ್ರಣ ನಮಗೆ ಸಿಗಲಿದೆ ಎಂದು ಹೇಳಿದರು.
ಈ ಕ್ರಾಸ್ ವೋಟಿಂಗ್‌ನಿಂದಾಗಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತೀವ್ರ ಬೇಸರ ಮತ್ತು ನೋವಾಗಿದೆ. ನಮಗೂ ಕೂಡ ಅಷ್ಟೇ ನೋವುಂಟಾಗಿದೆ. ನಾವಿಬ್ಬರೂ ಈ ರಾಜಕೀಯ ದ್ರೋಹವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ನಾನು ಈಗಾಗಲೇ ಪಕ್ಷದ ರಾಷ್ಟ್ರೀಯ ನಾಯಕರ ಭೇಟಿಗೆ ಸಮಯ ಕೇಳಿದ್ದೇನೆ.ಇವತ್ತು ಅಥವಾ ಸೋಮವಾರ, ನಾಯಕರು ಯಾವಾಗ ಸಮಯ ನೀಡುತ್ತಾರೋ ಅಂದೇ ದೆಹಲಿಗೆ ತೆರಳಿ ಭೇಟಿ ಮಾಡಲಿದ್ದೇನೆ. ಪಕ್ಷದಲ್ಲಿದ್ದುಕೊಂಡೇ ದ್ರೋಹ ಬಗೆದಿರುವ ‘ಮೀರ್ ಸಾದಿಕ್’ಗಳ ಕುರಿತು ಹೈಕಮಾಂಡ್‌ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇನೆ. ಪ್ರಸ್ತುತ ರಾಜಕೀಯ ವಿದ್ಯಮಾನ ಹಾಗೂ ಅಡ್ಡ ಮತದಾನದ ಕುರಿತು ವರಿಷ್ಠರ ಜೊತೆ ಚರ್ಚಿಸಿ, ದ್ರೋಹಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಮೂರನೇ ಅಭ್ಯರ್ಥಿಯನ್ನು ಹಾಕಿದ ಬಗ್ಗೆ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾರು ಎಂಟತ್ತು ದಿನಗಳ ಹಿಂದೆಯಷ್ಟೇ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ನನಗೆ ಕರೆ ಮಾಡಿದ್ದರು. ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಅವರು ಸುದೀರ್ಘವಾಗಿ ಚರ್ಚಿಸಿದ್ದರು. ನೀವಾದರೂ ಮೂರನೇ ಅಭ್ಯರ್ಥಿ ಹಾಕಿ ಅಥವಾ ನಾವಾದರೂ ಹಾಕುತ್ತೇವೆ. ಒಟ್ಟಾಗಿ ಫೈಟ್ ಮಾಡೋಣ ಎಂದು ಕುಮಾರಸ್ವಾಮಿ ಹೇಳಿದ್ದರು. ಅದಕ್ಕೆ ನಾನು ನೀವೇ ಅಭ್ಯರ್ಥಿಯನ್ನು ಹಾಕಿ ಎಂದು ತಿಳಿಸಿದ್ದೆ. ಎರಡೂ ಪಕ್ಷಗಳು ಒಟ್ಟಾಗಿಯೇ ಚುನಾವಣೆಯನ್ನು ಎದುರಿಸಿದ್ದೆವು ಎಂದರು.



















