Thursday, June 25, 2026
Google search engine
Homeಕಾರ್ಕಳಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಯಂ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ವೈದ್ಯರ ನೇಮಕಾತಿಗೆ ಕಾರ್ಕಳ...

ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಯಂ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ವೈದ್ಯರ ನೇಮಕಾತಿಗೆ ಕಾರ್ಕಳ ಮಹಿಳಾ ಮೋರ್ಚಾ ಆಗ್ರಹ

ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಕೀಳು ಮಟ್ಟದ ರಾಜಕೀಯ ನಾಟಕವಾಡುತ್ತಿರುವ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಕಾರ್ಕಳ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸಿದೆ. ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರ ಹುದ್ದೆಗೆ ಕೇವಲ ಗುತ್ತಿಗೆ ಆಧಾರದ ತಾತ್ಕಾಲಿಕ ನೇಮಕಾತಿ ಮಾಡಿಸಿ, ಅದನ್ನೇ ದೊಡ್ಡ ಸಾಧನೆ ಎಂದು ಬಿಟ್ಟಿ ಪ್ರಚಾರ ಪಡೆಯುತ್ತಿರುವ ಕಾಂಗ್ರೆಸ್‌ಗೆ ಮಹಿಳಾ ಮೋರ್ಚಾ ಖಡಕ್ ತಿರುಗೇಟು ನೀಡಿದೆ.

ರಾಜ್ಯದಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿದೆ ಎಂಬ ಹಮ್ಮಿನಿಂದ ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಒಳ್ಳೆಯ ಕೆಲಸಕ್ಕೂ “ನಾನೇ ಕಾರಣ” ಎಂದು ಬೆನ್ನು ತಟ್ಟಿಕೊಳ್ಳುವ ಮನಸ್ತಿತಿ ಕಾಂಗ್ರೆಸ್ ನಾಯಕರಲ್ಲಿದೆ. ಇದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಹಿಂದೆ ನಿಯೋಜನೆಗೊಂಡಿದ್ದ ಸ್ತ್ರೀರೋಗ ತಜ್ಞರ ಆದೇಶವನ್ನು ರದ್ದುಪಡಿಸಿ ಗರ್ಭಿಣಿಯರನ್ನು ಹಾಗೂ ಮಹಿಳೆಯರನ್ನು ಸಂಕಷ್ಟಕ್ಕೆ ದೂಡಿದಾಗ ಇವರ ಬಾಯಿ ಬಂದ್ ಆಗಿತ್ತೇ? ಆಗ ಮಹಿಳೆಯರ ಪರವಾಗಿ ಧ್ವನಿ ಎತ್ತದ ಕಾರ್ಕಳ ಕಾಂಗ್ರೆಸ್, ಈಗ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (NHM) ನಿಯಮಾನುಸಾರ ನಡೆದಿರುವ ಗುತ್ತಿಗೆ ನೇಮಕಾತಿಯನ್ನು ತನ್ನದೇ ಸಾಧನೆ ಎಂದು ಬಿಂಬಿಸುತ್ತಿರುವುದು ನಾಚಿಕೆಗೇಡು. ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಕಾಂಗ್ರೆಸ್ ಕೀಳು ರಾಜಕೀಯ ಮಾಡುವುದನ್ನು ನಿಲ್ಲಿಸಲಿ ಎಂದಿದ್ದಾರೆ.

ಇಂದು ಕಾರ್ಕಳದಲ್ಲಿ ತಲೆಎತ್ತಿ ನಿಂತಿರುವ ಸುಸಜ್ಜಿತ ತಾಲೂಕು ಸಾರ್ವಜನಿಕ ಆಸ್ಪತ್ರೆಯು ಕ್ಷೇತ್ರದ ಶಾಸಕರ ದೂರದರ್ಶಿತ್ವ ಮತ್ತು ಅಭಿವೃದ್ಧಿ ಸಂಕಲ್ಪಕ್ಕೆ ಹಿಡಿದ ಕನ್ನಡಿಯಾಗಿದೆ. ಆಸ್ಪತ್ರೆಯ ಮೂಲಸೌಕರ್ಯದಿಂದ ಹಿಡಿದು ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳವರೆಗೆ ಶಾಸಕರ ಕೊಡುಗೆ ಅಪಾರವಾಗಿದೆ ಎಂಬುದನ್ನು ಕಾರ್ಕಳ ಕಾಂಗ್ರೆಸ್ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಮೋರ್ಚಾ ನೆನಪಿಸಿದೆ.

ನಿರಂತರ ಪ್ರಯತ್ನ: ಆಸ್ಪತ್ರೆಯಲ್ಲಿ ಖಾಲಿ ಇರುವ ಸ್ತ್ರೀರೋಗ ತಜ್ಞರ ಹುದ್ದೆಗಳ ಭರ್ತಿಗಾಗಿ ಜಿಲ್ಲಾ ಕೆಡಿಪಿ (KDP) ಸಭೆ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕರು ನಿರಂತರವಾಗಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದಿದ್ದಾರೆ. ಶಾಸಕರ ಈ ಸುದೀರ್ಘ ಹೋರಾಟದ ಫಲವಾಗಿ ಈಗ ಕನಿಷ್ಠ ಪಕ್ಷ ಗುತ್ತಿಗೆ ಆಧಾರದ ನೇಮಕಾತಿಯಾದರೂ ಆಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಕೇವಲ ಕಣ್ಣೊರೆಸುವ ತಂತ್ರವಾಗಿ ತಾತ್ಕಾಲಿಕ ನೇಮಕಾತಿ ಮಾಡಿದೆ. 2023ರಿಂದಲೂ ಇಂತಹ ನಾಟಕ ನಡೆಯುತ್ತಿದ್ದು, ನೇಮಕವಾದ ಕೆಲವೇ ದಿನಗಳಲ್ಲಿ ರದ್ದಾಗುವುದರಿಂದ ಗರ್ಭಿಣಿಯರು ಮತ್ತು ಮಹಿಳೆಯರ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದೆ.

ಹಿಂದಿನ ನಮ್ಮ ಬಿಜೆಪಿ ಸರಕಾರದ ಅವಧಿಯಲ್ಲಿ ಇಬ್ಬರು ಸ್ತ್ರೀ ರೋಗ ತಜ್ಞರು ಖಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ತಿಂಗಳಿಗೆ 100 ಕ್ಕೂ ಅಧಿಕ ಹೆರಿಗೆ ಪ್ರಕರಣಗಳು ದಾಖಲಾಗುತ್ತಿದ್ದವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಕಳ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞರ ಹುದ್ದೆಗೆ ಸರಿಯಾದ ನೇಮಕಾತಿ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಆಗುತ್ತಿದ್ದ ಹೆರಿಗೆ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದ್ದು, ಕೆಲವೊಂದು ತಿಂಗಳುಗಳಲ್ಲಿ ಶೂನ್ಯ ಹೆರಿಗೆ ಪ್ರಕರಣಗಳಿವೆ. ಸ್ತ್ರೀ ರೋಗ ತಜ್ಞರ ಹುದ್ದೆಗೆ ನೇಮಕಾತಿಗೆ ಸಂಬಂದಿಸಿದಂತೆ ಈ ಹಿಂದಿನ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಸಲ್ಲಿಸದರೂ, ನೇಮಕಾತಿ ಕುರಿತು ಚಕಾರ ಎತ್ತದ ಕಾರ್ಕಳ ಕಾಂಗ್ರೆಸ್ ಆ ಸಂದರ್ಭಗಳಲ್ಲಿ ವೈದ್ಯರ ನೇಮಕಾತಿಯ ಬಗ್ಗೆ ಗಮನ ಹರಿಸಲಿಲ್ಲ.

ಹಾಗಾಗಿ, ಶಾಸಕರ ಶ್ರಮಕ್ಕೆ ಕನ್ನ ಹಾಕುವ ಪ್ರಯತ್ನವನ್ನು ಬಿಟ್ಟು, ಆಸ್ಪತ್ರೆಗೆ ತಕ್ಷಣವೇ ಎರಡು ಖಾಯಂ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಬೇಕು. ಶಾಶ್ವತ ನೇಮಕಾತಿಯಿಂದ ಮಾತ್ರ ಮಹಿಳೆಯರಲ್ಲಿ ಸರ್ಕಾರಿ ಆಸ್ಪತ್ರೆಯ ಬಗ್ಗೆ ನಂಬಿಕೆ ಮೂಡಿಸಲು ಸಾಧ್ಯ.

ಪ್ರಸ್ತುತ ನಮ್ಮದೇ ಅವಿಭಜಿತ ಜಿಲ್ಲೆಯ ಆರೋಗ್ಯ ಸಚಿವರು ಇದ್ದಾರೆ, ಅವರ ಹಿಂದೆ ಸುತ್ತಾಡಿ ಪೋಟೋಗೆ ಪೋಸ್ ಕೊಡುವ ಬದಲು ಕಾರ್ಕಳ ಆಸ್ಪತ್ರೆಯಲ್ಲಿ ಖಾಲಿ ಇರುವ ಎರಡು ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ವೈದ್ಯರ ಹುದ್ದೆಗೆ ಖಾಯಂ ನೇಮಕಾತಿ ಮಾಡಿ ಕಾರ್ಕಳ ಜನತೆಗೆ ಉತ್ತಮ ಸೇವೆ ನೀಡುವ ಕಡೆ ಗಮನ ಹರಿಸಿ ಎಂದು ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ವಿನಯ ಡಿ ಬಂಗೇರಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments