ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಪಡಿತರ ಚೀಟಿ ಪಡೆಯಲು ನಿಗದಿಪಡಿಸಿರುವ 1.20ಲಕ್ಷ ರೂ.ವಾರ್ಷಿಕ ಆದಾಯದ ಮಿತಿಯನ್ನು ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ 3 ಲಕ್ಷ ರೂ.ಗಳಿಗೆ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಶುಕ್ರವಾರ ನಗರದ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಜೊತೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಕೇಂದ್ರ ಸರಕಾರದ ಮಾನದಂಡಗಳ ಅನ್ವಯ ಪಡಿತರ ಚೀಟಿಗಳ ಪರಿಶೀಲನೆ ನಡೆಯುತ್ತಿದ್ದು, ನಾವು ಯಾವ ಪಡಿತರ ಚೀಟಿಯನ್ನು ರದ್ದು ಮಾಡುವುದಿಲ್ಲ. ಬಿಪಿಎಲ್‍ಗೆ ಅನರ್ಹವಾಗಿರುವ ಪಡಿತರ ಚೀಟಿಗಳನ್ನು ಎಪಿಎಲ್‍ಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಮುನಿಯಪ್ಪ ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅನ್ನಭಾಗ್ಯ ಯೋಜನೆಯ ಮೂಲಕ ರಾಜ್ಯದ ಸುಮಾರು 4.42 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 10 ಕೆಜಿ ಪಡಿತರ ವಿತರಣೆ ಮಾಡುತ್ತಿದೆ. ಇದರ ಮೂಲಕ ನಮ್ಮ ಸರಕಾರವು ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಇಂದಿರಾ ಕಿಟ್ ಬಹಳ ದೊಡ್ಡಮಟ್ಟದ ಯೋಜನೆ ಸುಮಾರು 6000 ಕೋಟಿ ರೂ.ಗಳು ವೆಚ್ಚವಾಗಲಿದ್ದು ಬಹಳ ಸೂಕ್ಷ್ಮವಾಗಿ ನಡೆಸಬೇಕಾಗಿರುವುದರಿಂದ ಸ್ವಲ್ಪ ವಿಳಂಬವಾಗುತ್ತಿದೆ. ಆದಷ್ಟು ಬೇಗ ಈ ಪ್ರಕ್ರಿಯೆಯು ಅಂತಿಮವಾಗಲಿದೆ ಎಂದು ಹೇಳಿದರು.
ನ್ಯಾಯಬೆಲೆ ಅಂಗಡಿಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೂ ತೆರೆದು ಪಡಿತರ ವಿತರಿಸಲು ಸೂಚಿಸಲಾಗಿದ್ದು, ತಪ್ಪಿದ್ದಲ್ಲಿ ಇಲಾಖೆಯ ಸಹಾಯವಾಣಿ ಸಂಖ್ಯೆ 1967 ಸಹಾಯವಾಣಿಗೆ ಕರೆ ಮಾಡಿ ದೂರು ನೀಡುವಂತೆ ಮುನಿಯಪ್ಪ ತಿಳಿಸಿದರು.


















