ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಉಡುಪಿ ಜಿಲ್ಲಾ ಮಟ್ಟದ 14 ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ 2026-27ನೇ ಸಾಲಿನ ಕರಾಟೆ ಸ್ಪರ್ಧೆಯು ಸೆಪ್ಟೆಂಬರ್ 9 ಬುಧವಾರ ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ಆರಂಭಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಕಳದ ಟಿ.ಪಿ.ಇ.ಒ ಹಾಗೂ ಡಿ.ಪಿ.ಇ.ಒ ಆಗಿರುವ ರವಿಚಂದ್ರ ಕಾರಂತ, ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರಾದ ಅಶ್ವತ್ ಎಸ್. ಎಲ್, ತಹಶೀಲ್ದಾರರಾದ ಪ್ರದೀಪ್ ಕೆ ಆರ್, ಕರ್ನಾಟಕ ರಾಜ್ಯ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉಡುಪಿ ಘಟಕದ ಅಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿ, ಕುಸುಮಾಕರ್ ಶೆಟ್ಟಿ ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ರೋಹಿತಾಕ್ಷ, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ವಾಮನ್ ಪಾಲನ್ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲೆ ಅಕ್ಷತಾ ಶೆಣೈ ಉಪಸ್ಥಿತರಿದ್ದರು.
ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿರುವ ಸುಮಾರು 200ಕ್ಕೂ ಹೆಚ್ಚು ಬಾಲಕ ಬಾಲಕಿಯರು ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ತಮ್ಮ ಸಮರ ಕಲೆಯ ಕೌಶಲ್ಯವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾದ ಕುಸುಮಾಕರ್ ಶೆಟ್ಟಿ ಮಾತನಾಡಿ ಕ್ರಿಯೇಟಿವ್ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಇನ್ನೋರ್ವ ಅತಿಥಿ ಶ್ರೀ ರವಿಚಂದ್ರ ಕಾರಂತ ಇವರು ತಮ್ಮ ಸ್ಪೂರ್ತಿದಾಯಕ ಮಾತುಗಳಿಂದ ಯುವ ಕರಾಟೆ ಪಟುಗಳನ್ನು ಹುರಿದುಂಬಿಸಿದರು.
ದಿನವಿಡೀ ನಡೆದ ರೋಮಾಂಚಕ ಪಂದ್ಯಗಳ ನಂತರ ಜಯಭೇರಿ ಸಾಧಿಸಿದ ಸುಮಾರು ತೊಂಬತ್ತು ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿಗಳು ಹಾಗೂ ಸಂಸ್ಥೆಯ ಇನ್ನೋರ್ವ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.
























