ಕತ್ತಲೆಯನ್ನು ಹೋಗಲಾಡಿಸುವ ದೀಪದ ಬೆಳಕು, ನಿಮ್ಮೆಲ್ಲರ ಬದುಕನ್ನು ಬೆಳಗಲಿ : ಎಚ್ ನಾಗರಾಜ್ ಶೆಟ್ಟಿ
ದೀಪಾವಳಿಯ ಹಬ್ಬವು ನಮ್ಮ ಬದುಕಿನ ವಾರ್ಷಿಕಾವರ್ತನದ ಹಬ್ಬ. ಈ ಸಂಭ್ರಮ ಎಲ್ಲರ ಬಾಳಲ್ಲಿ ಸಂತೋಷ, ನೆಮ್ಮದಿ ತರಲಿ. ಕತ್ತಲೆಯನ್ನು ಹೋಗಲಾಡಿಸುವ ದೀಪದ ಬೆಳಕು ನಿಮ್ಮೆಲ್ಲರ ಬದುಕನ್ನು ಬೆಳಗಲಿ. ದೀಪಾವಳಿಯ ಸಂದರ್ಭದ ವಿಶೇಷ ಸಂಪ್ರದಾಯ, ಆಚರಣೆಗಳನ್ನು ನಮ್ಮ ಕ್ಯಾಂಪಸಿನಲ್ಲಿ ಮಾಡುವ ಮೂಲಕ, ನಮ್ಮ ಸಂಸ್ಕೃತಿಯನ್ನು ಈಗಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ಎಲ್ಲರೂ ಸೇರಿಕೊಂಡು ಮಾಡಿದ್ದೀರಿ. ಎಲ್ಲರಿಗೂ ಶುಭವಾಗಲಿ ಎಂದು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್.ನಾಗರಾಜ್ ಶೆಟ್ಟಿ ಅವರು ಶುಭ ಹಾರೈಸಿದರು.ಇವರು ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ದೀಪಾವಳಿಯ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರಾದ ಸಪ್ನಾ.ಎನ್ ಶೆಟ್ಟಿ, ಎಸ್ .ಆರ್ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲರಾದ ದೀಪಕ್ ಎನ್, ಎಸ್ ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಗೋಪಾಲ್ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೋಓರ್ಡಿನೇಟರ್ಸ್ ಹಾಗೂ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ದೀಪಾವಳಿ ಹಬ್ಬದ ವಿಶೇಷತೆಯನ್ನು ಹಿಂದಿ ಉಪನ್ಯಾಸಕಿ ವನಿತಾ ತೋಳಾರ್ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗದ್ದೆಗೆ ದೀಪ ಇಡುವುದು, ರಾಶಿ ಪೂಜೆ, ಗೋ ಪೂಜೆ, ಬಲೀಂದ್ರ ಪೂಜೆ, ಅವಿಭಕ್ತ ಕುಟುಂಬದ ಮಾದರಿ ವಿಶೇಷ ಆಕರ್ಷಣೆಗಳಾಗಿದ್ದವು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ದೀಕ್ಷಾ ಮತ್ತು ಪ್ರಿಶಾ ನಿರೂಪಿಸಿ, ಸ್ವಾಗತಿಸಿ, ಉಪಪ್ರಾಂಶುಪಾಲ ದೀಪಕ್ ಎನ್ ವಂದಿಸಿದರು.































