
ಕಾರ್ಕಳ : ಹಣದಾಸೆಗೆ ನವಜಾತ ಶಿಶುವನ್ನು ಮಾರಿದ ಹೆತ್ತವರು
ಎರಡು ದಿನದ ಮಗುವನ್ನು ಹಣದಾಸೆಗಾಗಿ ಹೆತ್ತ ತಾಯಿಯೇ ಮಾರಾಟ ಮಾಡಿದ ಘಟನೆ ಚಿಕ್ಕಮಗಳೂರಿನ ನರಸಿಂಹಪುರ ತಾಲೂಕಿನ ಹರಾವರಿ ಗ್ರಾಮದಲ್ಲಿ ನಡೆದಿದೆ. ಒಂದು ಲಕ್ಷಕ್ಕಾಗಿ ಮಗುವನ್ನು ಕಾರ್ಕಳದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ.
ಮಗುವಿನ ತಾಯಿಯನ್ನು ರತ್ನಾ ಎಂದು ಗುರುತಿಸಲಾಗಿದ್ದು, ಈಕೆಯೊಬ್ಬಳೇ ಅಲ್ಲದೇ, ಈ ಕುಕೃತ್ಯಕ್ಕೆ ಪತಿ ಸದಾನಂದ ಮತ್ತು ನಿವೃತ್ತ ನರ್ಸ್ ಕುಸುಮ ಎಂಬವರೂ ಭಾಗಿಯಾಗಿರುವುದು ತಿಳಿದು ಬಂದಿದೆ.
ಮೇ 22 ರಂದು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ರತ್ನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ವಾತಾವರಣ ಸ್ಪರ್ಶಿಸಿ ಮೂರು ದಿನಗಳಾಗುವ ಮೊದಲೇ ನಿವೃತ್ತ ನರ್ಸ್ ಕುಸುಮಳ ಮೂಲಕ ಕಾರ್ಕಳದ ರಾಘವೇಂದ್ರ ಎಂಬ ವ್ಯಕ್ತಿಗೆ ಮಗುವನ್ನು ಮಾರಾಟ ಮಾಡಲಾಗಿದೆ. ಈ ಸುದ್ದಿ ತಿಳಿದ ನರಸಿಂಹರಾಜಪುರ ಠಾಣೆಯ ಇನ್ಸ್ಪೆಕ್ಟರ್ ನಿರಂಜನ ಗೌಡ ಮತ್ತು ಅವರ ತಂಡ ತಕ್ಷಣ ಎಚ್ಚೆತ್ತು, ಕಾರ್ಕಳಕ್ಕೆ ಧಾವಿಸಿ, ಆ ಪುಟ್ಟ ಜೀವವನ್ನು ರಕ್ಷಿಸಿದ್ದಾರೆ. ಸದ್ಯ, ಅನಾಥವಾಗಿರುವ ಮಗು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿದೆ.
ರತ್ನಾ ಸದಾನಂದ ದಂಪತಿಗೆ ಈಗಾಗಲೇ ಮೂರು ಮಕ್ಕಳಿದ್ದು, ಅವರಲ್ಲಿಬ್ಬರನ್ನು ಈ ಹಿಂದೆಯೇ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣವನ್ನು ಕೊಪ್ಪ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ತನಿಖೆ ಮುಂದುವರೆದಿದೆ.












