ಉಡುಪಿ ಜಿಲ್ಲಾದ್ಯಂತ ನಾಳೆ ಶಾಲೆಗಳಿಗೆ ರಜೆ

0

ಉಡುಪಿ ಜಿಲ್ಲಾದ್ಯಂತ ನಾಳೆ ಶಾಲೆಗಳಿಗೆ ರಜೆ

ಕಳೆದ ಎರಡು ದಿನಗಳಿಂದ ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ನೆರೆ, ಗುಡ್ಡ ಕುಸಿತ ಸಂಭವಿಸುತ್ತಿದೆ. ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸೂಚಿಸಿದೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ (ಸೋಮವಾರ) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಆದೇಶಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಗಾಳಿ, ಮಳೆ ಅಬ್ಬರ ಮುಂದುವರೆದಿದ್ದು, ಧಾರಾಕಾರ ಗಾಳಿ, ಮಳೆಗೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿi) ತಾಲೂಕಿನ ನೆಮ್ಮಾರು ಗ್ರಾಮದ ಬಳಿ ನಡೆದಿದೆ.

ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿರುವ ಪರಿಣಾಮ ಶೃಂಗೇರಿ-ಮಂಗಳೂರು ಸಂಚಾರ ಕೂಡ ಸಂಪೂರ್ಣ ಸ್ಥಗಿತಗೊಂಡಿದೆ. ಪೊಲೀಸ್, ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯರು ಸುರಿಯುತ್ತಿರುವ ಮಳೆ ಮಧ್ಯೆಯೇ ರಸ್ತೆಗೆ ಉರುಳಿರುವ ಮಣ್ಣಿನ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿಯದಂತೆ ರಸ್ತೆ ಬದಿಗೆ ಕಟ್ಟಿದ್ದ ಕಬ್ಬಿಣದ ತಡೆಗೋಡೆಗಳು ಕುಸಿದು ಬಿದ್ದಿದೆ.

ಮಳೆ ಜೊತೆ ಗಾಳಿ ಕೂಡ ವೇಗವಾಗಿ ಬೀಸುತ್ತಿರುವುದರಿಂದ ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ರಾತ್ರಿ ಇಡೀ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಶೃಂಗೇರಿಯಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿವೆ.

ಈ ವರ್ಷ ಜನವರಿಯಿಂದಲೂ ನಿರಂತರವಾಗಿ ಮಳೆಯಾಗಿದ್ದು, ಭೂಮಿಯ ತೇವಾಂಶ ಕೂಡ ಹೆಚ್ಚಾಗಿದೆ. ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಇನ್ನಷ್ಟು ಭೂಮಿ ಕುಸಿಯುವ ಆತಂಕ ಎದುರಾಗಿದ್ದು, ವಾಹನ ಚಾಲಕರು ಬದಲಿ ಮಾರ್ಗವನ್ನು ಬಳಸಬೇಕಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಮುಂದುವರೆದಿದೆ.

ಶನಿವಾರ ಕೂಡ ಚಂದ್ರದ್ರೋಣ ಪರ್ವತ ಶ್ರೇಣಿಯ ಕವಿಕಲ್ ಗಂಡಿ ಬಳಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಮಳೆ ನಿರಂತರವಾಗಿದ್ದು, ಮತ್ತಷ್ಟು ಅನಾಹುತ ಸಂಭವಿಸುವ ಆತಂಕ ಸ್ಥಳೀಯರನ್ನ ಕಾಡುತ್ತಿದೆ.

LEAVE A REPLY

Please enter your comment!
Please enter your name here