ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ಪ್ರಕರಣದ ತನಿಖೆಗೆ ರಚಿಸಲಾದ SIT ತಂಡದ ಮುಖ್ಯಸ್ಥ ಪ್ರಣವ್ ಮೊಹಾಂತಿ ನೇಮಕವನ್ನು ರದ್ದುಗೊಳಿಸಬೇಕು ಎಂದು ಮಾಜಿ DYSP ಅನುಪಮಾ ಶೆಣೈ ಒತ್ತಾಯಿಸಿದ್ದಾರೆ.
ಸೋಮವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಣವ್ ಮೊಹಾಂತಿ ಸೈಬರ್ ಅಪರಾಧದಲ್ಲಿ ನೈಪುಣ್ಯತೆಯನ್ನು ಹೊಂದಿದ್ದಾರೆಯೇ ಹೊರತು, ಅತ್ಯಾಚಾರ ಮತ್ತು ನರಹತ್ಯೆ ಕುರಿತಾದ ತನಿಖೆಗೆ ಸೂಕ್ತ ವ್ಯಕ್ತಿಯಲ್ಲ. ಈ ಹಿಂದೆ DYSP ಎಂ.ಪಿ. ಗಣಪತಿಯವರು ಸಚಿವ ಕೆ.ಜೆ.ಜಾರ್ಜ್ ಅವರಿಂದಾಗಿ ಬಹಳಷ್ಟು ಕಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವಾಗ ಕೆ.ಜೆ.ಜಾರ್ಜ್ ಜತೆ IPS ಅಧಿಕಾರಿಗಳಾದ ಎ.ಎಂ.ಪ್ರಸಾದ್ ಮತ್ತು ಪ್ರಣವ್ ಮೊಹಾಂತಿ ಅವರ ಹೆಸರನ್ನೂ ಉಲ್ಲೇಖಿಸಿದ್ದರು ಎಂದು ಹೇಳಿದ್ದಾರೆ.
ಹಾಗಾಗಿ SIT ಮುಖ್ಯಸ್ಥರಾಗಿ ಮೊಹಾಂತಿಯವರ ನೇಮಕದಲ್ಲಿ ಕೆ.ಜೆ.ಜಾರ್ಜ್ ರಾವ್ ರವರ ಕೈವಾಡವಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಸರ್ಕಾರ ಕೂಡಲೇ ಪೋಲೀಸರ ಭಾವನೆಗೆ ಗೌರವ ಕೊಟ್ಟು ಪ್ರಣವ್ ಮೊಹಾಂತಿ ನೇಮಕವನ್ನು ರದ್ದುಗೊಳಿಸಿ ಡಾ| ಕೆ. ರಾಮಚಂದ್ರ ರಾವ್ ಅಥವಾ ದಯಾನಂದ್ ಅವರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಅಣ್ಣಪ್ಪಸ್ವಾಮಿ ದುರ್ಬುದ್ಧಿ ನೀಡುವುದಿಲ್ಲ
ಈ ಪ್ರಕರಣದಲ್ಲಿ ಪ್ರಶ್ನೆ ಎದ್ದಿರುವುದು ಅಣ್ಣಪ್ಪ ಸ್ವಾಮಿಯ ಬಗ್ಗೆ. ಅಣ್ಣಪ್ಪಸ್ವಾಮಿ ಧರ್ಮಸ್ಥಳದ ಕ್ಷೇತ್ರಪಾಲ, ಕ್ಷೇತ್ರರಕ್ಷಕ. ಅಣ್ಣಪ್ಪಸ್ವಾಮಿ ಸತ್ಯಧರ್ಮದ ಪ್ರತೀಕ. ಅಣ್ಣಪ್ಪಸ್ವಾಮಿ ಪೊಲೀಸರಿಗೆ ದುರ್ಬುದ್ಧಿ ನೀಡುವುದಿಲ್ಲ ಎಂದರು.