ನಿಟ್ಟೆ ಗ್ರಾಮದ ದಿನೇಶ್ ಶೆಟ್ಟಿಗಾರ್ ಅವರ ತೋಟದಿಂದ 4 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರಗಳನ್ನು ಕದ್ದೊಯ್ದ ಮೂವರು ಆರೋಪಿಗಳನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕಳವಾಗಿದ್ದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕುಕ್ಕುಂದೂರು ಅಯ್ಯಪ್ಪ ನಗರದ ಗಣೇಶ್ (44), ಮರ್ಣೆ ಗ್ರಾಮದ ಎಣ್ಣೆಹೊಳೆ ನಿವಾಸಿ ಸಂತೋಷ್ (35), ಮತ್ತು ಬಂಟ್ವಾಳ ಬಾಳೆಪುಣಿ ನಿವಾಸಿ ಮೊಯ್ದೀನ್ ಅಲಿಯಾಸ್ ಮೊಯಿದು ಕುಂಞ (60) ಬಂಧಿತ ಆರೋಪಿಗಳು.
ಆರೋಪಿಗಳು ಈ ಹಿಂದೆ ಶಿರ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಶ್ರೀಗಂಧ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಜೂ.16 ರಂದು ಕಳ್ಳತನ ನಡೆದಿತ್ತು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಕಾರ್ಕಳ ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ! ಹರ್ಷ ಪ್ರಿಯಂವದ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಗ್ರಾಮಾಂತರ ಠಾಣೆ ಪಿಎಸ್‌ಐ ಪ್ರಸನ್ನ ಎಂ.ಎಸ್, ಸುಂದರ್, ಎ.ಎಸ್.ಐ ಪ್ರಕಾಶ್, ಎ.ಎಸ್.ಐ ಸುಂದರ ಗೌಡ, ರುದ್ರೇಶ್, ಚಂದ್ರಶೇಖರ್, ಸುಮಿತ್ರ, ಮಹಾಂತೇಶ್, ಸೋಮಶೇಖರ ಎಸ್.ಜಿ, ರವೀಂದ್ರ, ಆನಂದ, ಮತ್ತು ಶಶಿಕಲಾ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



































