Tuesday, February 3, 2026
Google search engine
Homeಕಾರ್ಕಳನಿಟ್ಟೆ: ಡಾ.ಎನ್.ಎಸ್.ಎ.ಎಮ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಘಾಟನೆಗೊಂಡ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನ

ನಿಟ್ಟೆ: ಡಾ.ಎನ್.ಎಸ್.ಎ.ಎಮ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಘಾಟನೆಗೊಂಡ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನ

ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಸೆ.10 ರಂದು ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವು ವಿದ್ಯಾರ್ಥಿಗಳಲ್ಲಿನ ಹೊಸತನದ ಹುಡುಕಾಟದ ಪುಟ್ಟ ಹೆಜ್ಜೆ, ಏಕೆಂದರೆ ಈ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಮತ್ತು ಯುವಜನರಲ್ಲಿ ದೇಶವನ್ನು ಪುನರ್ ನಿರ್ಮಿಸುವ ಜವಬ್ದಾರಿ ಇದೆ. ಪುನರ್ ನಿರ್ಮಿಸುವುದು ಅಂದರೆ ಸ್ವಾತಂತ್ರ್ಯ ಪೂರ್ವದ ಹೋರಾಟವಲ್ಲ, ಬದಲಿಗೆ ಕರ್ತೃತ್ವ ಶಕ್ತಿಯ ಮೂಲಕ ಮರು ನಿರ್ಮಾಣ. ಹಾಗಾಗಿ ನಮ್ಮ ನೆಲೆಯಲ್ಲಿ ಸಣ್ಣ ಕೆಲಸಗಳ ಮೂಲಕ ಯುವಜನಾಂಗ ಈ ದೇಶಕ್ಕಾಗಿ ಬದುಕಬೇಕು. ಅದಕ್ಕೆ ಪೂರಕ ಶಿಕ್ಷಣ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದಿನೇಶ್ ಎಂ ಕೊಡವೂರು ಮಾತನಾಡಿ ವಿದ್ಯಾರ್ಥಿಗಳು ನಿರ್ಧಿಷ್ಟವಾದ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವತ್ತರಾಗಬೇಕು, ಅಂಕಗಳಿಕೆಗೆ ಸೀಮಿತವಾಗದ ಕಲಿಕೆಗೆ ನಾವು ಗಮನಕೊಡುತ್ತ ಸಮಗ್ರ ಅಭ್ಯೂದಯದ ಕಡೆಗೆ ಗಮನಹರಿಸಬೇಕು. ಪರೀಕ್ಷೆಯ ಅಂಕಗಳು ವಿದ್ಯಾರ್ಥಿಯ ಕಾರ್ಯಕ್ಷಮತೆ, ಶ್ರದ್ಧೆ, ಏಕಾಗ್ರತೆಗಳನ್ನು ಪ್ರತಿನಿಧಿಸುತ್ತದೆ. ಆದರೆ ಅಂಕಗಳೇ ಒಬ್ಬ ವ್ಯಕ್ತಿಯನ್ನು ಅಳೆಯುವ ಅಂತಿಮ ಮಾನದಂಡವಲ್ಲ. ಹೀಗಾಗಿ ಕೌಶಲ್ಯ, ದೇಶಭಕ್ತಿ, ಸಾಮಾಜಿಕ ಜವಾಬ್ದಾರಿಗಳ ಕಡೆಗೂ ಗಮನ ಕೊಡಬೇಕು ಹಾಗೂ ಪ್ರತಿಯೊಬ್ಬರೂ ನಮ್ಮ ದೇಶ, ನಮ್ಮ ಸಮಾಜ ಎನ್ನುವ ಅಭಿಮಾನವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ. ಮಾತನಾಡಿ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವು ನಮ್ಮ ವಿದ್ಯಾರ್ಥಿಗಳಲ್ಲಿನ ಪ್ರಾಯೋಗಿಕ ಕೌಶಲ್ಯವನ್ನು ಬಿಂಬಿಸುವುದಾಗಿದೆ, ಈ ಮೂಲಕ ತರಗತಿಗಳಲ್ಲಿ ಪಡೆದ ಜ್ಞಾನವನ್ನು ಹೇಗೆ ಜೀವನದಲ್ಲಿ ಅಳವಡಿಸುತ್ತಾರೆ ಎನ್ನುವುದನ್ನು ತೋರಿಸುವ ಪ್ರಯತ್ನ ಇದಾಗಿದೆ. ಹಾಗೆಯೇ ಈ ರೀತಿಯ ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಹೊಸ ರೀತಿಯ ಆಲೋಚನೆಗಳಿಗೆ ಪ್ರಚೋದಿಸುತ್ತದೆ, ಹಾಗಾಗಿ ನಮ್ಮ ಶಿಕ್ಷಣ ಸಂಸ್ಥೆ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಎರಡು ದಿನಗಳ ಈ ಪ್ರದರ್ಶನದಲ್ಲಿ ಉಡುಪಿ ಜಿಲ್ಲೆಯ ಸುಮಾರು 20 ಪದವಿ ಪೂರ್ವ ಕಾಲೇಜುಗಳ 1750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರದರ್ಶನ ವೀಕ್ಷಣೆಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಐಕ್ಯೂಎಸಿ ಸಂಯೋಜಕ ಪ್ರಕಾಶ್ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ನಿಶ್ಮಿತಾ ವಂದಿಸಿದರು. ಉಪನ್ಯಾಸಕಿ ಮೀನಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿದರು.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments