ಖುರ್ಚಿ ಉಳಿಸಿಕೊಳ್ಳುವ ಭರದಲ್ಲಿ ಜನರ ಸಮಸ್ಯೆ ಹಾಗೂ ಅಭಿವೃದ್ಧಿಯನ್ನು ರಾಜ್ಯ ಸರ್ಕಾರ ಮರೆತುಬಿಟ್ಟಿದೆ-ರೇಷ್ಮಾ ಉದಯ್ ಶೆಟ್ಟಿ
ಕಾರ್ಕಳ:ಉಡುಪಿಯಲ್ಲಿ ಈ ಬಾರಿ ಧಾರಾಕಾರಾಗಿ ಸುರಿದ ಮಳೆಗೆ ಜಿಲ್ಲಾಧ್ಯಂತ ಅಪಾರ ಹಾನಿಯಾಗಿದ್ದು, ಜಿಲ್ಲೆಯ ಹೆದ್ದಾರಿಗಳು ಸೇರಿದಂತೆ ನಗರ ಮತ್ತು ಗ್ರಾಮಾಂತರದ ರಸ್ತೆಗಳು ಹಾಳಾಗಿದೆ. ಅಂಗನವಾಡಿ ಶಾಲಾ ಕಟ್ಟಡಗಳು, ಕಾಲುಸಂಕ, ತಡೆಗೋಡೆ, ವಿದ್ಯುತ್ ಕಂಬಗಳಿಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದು, ಸುಮಾರು 234 ಕೋಟಿ ರೂಪಾಯಿಗಳಷ್ಟು ಮೌಲ್ಯದ ಹಾನಿಯ ವರದಿಯನ್ನು ಜಿಲ್ಲಾಡಳಿತವು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದರೂ, ಇದುವರೆಗೂ ನಯಾ ಪೈಸೆ ಪರಿಹಾರ ಬಿಡುಗಡೆಯಾಗದೇ ಇರುವುದು ಖಂಡನೀಯ ಎಂದು ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೀಗ ತುರ್ತು ಮರು ದುರಸ್ತಿ ಅವಶ್ಯಕತೆ ಇರುವ ಕಾಮಗಾರಿಗಳಿಗೆ ಅನುದಾನವಿಲ್ಲದೆ ವಿದ್ಯಾರ್ಥಿಗಳಿಗೆ, ರೈತರಿಗೆ, ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರು ಉಡುಪಿಯ ಕಡೆ ತಲೆಹಾಕಿಯೂ ಮಲಗುತ್ತಿಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವ ತಂತ್ರಗಾರಿಕೆಯಲ್ಲಿ ಮಗ್ನರಾಗಿದ್ದರೆ. ಇತರ ಸಚಿವರು ಮುಖ್ಯಮಂತ್ರಿಗಳ ತೆರವಾಗಲಿರುವ ಕುರ್ಚಿಗೆ ಟವೆಲ್ ಹಿಡಿದು ಕಾಯುತ್ತಿದ್ದಾರೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರದಲ್ಲಿ ಈ ರೀತಿ ಮಳೆ ಹಾನಿಯಾಗಿದ್ದಾಗ ನ್ಯಾಯಯುತವಾದ ಪರಿಹಾರ ದೊರಕಿರುವುದನ್ನು ಇಂದು ಜನ ಸ್ಮರಿಸುತ್ತಿದ್ದಾರೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅಸ್ಥಿತ್ವಕ್ಕೆ ಬಂದು 16 ತಿಂಗಳು ಕಳೆದರೂ ಅಭಿವೃದ್ಧಿಯ ಮಾತು ಆರಂಭವೇ ಆಗಿಲ್ಲ. ಹೀಗೆಯೇ ಮುಂದುವರಿದರೆ ಮಳೆ ಪರಿಹಾರ, ಅಭಿವೃದ್ಧಿ ಹಣ ಬಿಡುಗಡೆಗಾಗಿ ಕರಾವಳಿಯ ಜನರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಬರಬಹುದು ಎಂದು ಅವರು ತಿಳಿಸಿದ್ದಾರೆ