ವಿದ್ಯುತ್ ಬಿಲ್ ಕಟ್ಟದೆ ಅನ್ನದಾತನ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಸರ್ಕಾರ
ಒಂದು ಒಳ್ಳೆಯ ರೈತಪರ ಯೋಜನೆಯನ್ನು ಹಳ್ಳ ಹಿಡಿಸುವ ಷಡ್ಯಂತ್ರ ಇದರ ಹಿಂದೆ ಅಡಗಿದೆ
ಕಡು ಬೇಸಗೆಯ ಈ ಸಂದರ್ಭದಲ್ಲಿ ರೈತರ ಕೈಹಿಡಿಯಬೇಕಾದ ಸರ್ಕಾರ, ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದು ಅತ್ಯಂತ ಕ್ರೂರ ಮತ್ತು ಅಮಾನವೀಯ ಕ್ರಮವಾಗಿದೆ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಹರೀಶ್ ನಾಯಕ್, ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಅವರು ಕಿಡಿಕಾರಿದ್ದಾರೆ.
ಬಿರು ಬಿಸಿಲಿನ ಬೇಗೆಯಿಂದ ಕೃಷಿ ಭೂಮಿ ಒಣಗುತ್ತಿದ್ದು, ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹಗಲಿರುಳು ಹೋರಾಡುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ನೂರಾರು ರೈತ ಕುಟುಂಬಗಳಿಗೆ ಆಸರೆಯಾಗಿದ್ದ ಏತ ನೀರಾವರಿ ಯೋಜನೆಯನ್ನು ಸ್ಥಗಿತಗೊಳಿಸಿರುವುದು ಸರ್ಕಾರದ ರೈತ ವಿರೋಧಿ ನೀತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಮಾರು 2 ಕೋಟಿ ರೂ.ಗೂ ಅಧಿಕ ವಿದ್ಯುತ್ ಬಿಲ್ ಬಾಕಿ ಇದೆ ಎಂಬ ನೆಪವೊಡ್ಡಿ ಮೆಸ್ಕಾಂ ಇಲಾಖೆ ಸಂಪರ್ಕ ಕಡಿತಗೊಳಿಸಿದೆ. ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕೆ ಸಾವಿರಾರು ಕೋಟಿ ರೂ. ಖರ್ಚು ಮಾಡಲು ಹಣವಿದೆ, ಆದರೆ ದೇಶದ ಬೆನ್ನೆಲುಬಾದ ರೈತನ ಬೆಳೆಗೆ ನೀರುಣಿಸುವ ಯೋಜನೆಯ ಬಿಲ್ ಪಾವತಿಸಲು ಹಣವಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ. ಮೆಸ್ಕಾಂ ಅಧಿಕಾರಿಗಳು ಪ್ಯೂಜ್ ಕಿತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೂರು ದಿನಗಳೇ ಕಳೆದಿದ್ದರೂ, ಸರ್ಕಾರವಾಗಲಿ ಅಥವಾ ಸಂಬಂಧಪಟ್ಟ ಸಚಿವರಾಗಲಿ ಈ ಬಗ್ಗೆ ತುಟಿಬಿಚ್ಚದೆ ಮೌನವಾಗಿರುವುದು ಖಂಡನೀಯ. ಇದು ಕೃಷಿಕರ ಬದುಕಿನೊಂದಿಗೆ ಸರ್ಕಾರ ನಡೆಸುತ್ತಿರುವ ಚೆಲ್ಲಾಟವಾಗಿದೆ.
“ಒಂದು ಕೈಯಲ್ಲಿ ಉಚಿತ ಭಾಗ್ಯಗಳ ಆಮಿಷವೊಡ್ಡಿ, ಇನ್ನೊಂದು ಕೈಯಲ್ಲಿ ರೈತರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ರೈತರ ಬೆನ್ನು ಮುರಿಯುವ ಇಂತಹ ನೀತಿಗಳು ದೀರ್ಘಕಾಲ ನಡೆಯುವುದಿಲ್ಲ” ಎಂದು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಅಜೆಕಾರು -ಎಣ್ಣೆಹೊಳೆಯನ್ನು ಕೇಂದ್ರೀಕೃತವಾಗಿಟ್ಟುಕೊಂಡು ಮರ್ಣೆ, ಹೆರ್ಮುಂಡೆ,ಹಿರ್ಗಾನ, ಕಡ್ತಲ ಗ್ರಾಮಗಳ ರೈತರ ಅನೂಕೂಲಕ್ಕಾಗಿ ಮಾಡಿದ ಯೋಜನೆ ಇದಾಗಿದೆ. ಈ ಭಾಗದ ಜನರು ಅವರ ನೂರಾರು ಎಕರೆ ಜಮೀನಿನಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಅಡಿಕೆ ಭತ್ತ ಸೇರಿದಂತೆ ಇತರ ಬೆಳೆಗಳಿಗೆ ಯಾವುದೇ ನೀರಿನ ಕೊರತೆ ಕಾಣದೆ ರೈತರು ಒಳ್ಳೆಯ ಫಸಲು ಪಡೆಯುತ್ತಿದ್ದಾರೆ. ಅದು ಅಲ್ಲದೆ ಕಳೆದೆರಡು ವರ್ಷಗಳಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದ್ದು ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿತ್ತು. ಆದರೆ ಸರ್ಕಾರದ ನಿರಂತರ ವಿದ್ಯುತ್ ಬಿಲ್ ಪಾವತಿ ಮಾಡದ ಕಾರಣ ಇದೀಗ ನೀರಿನ ಅತಿ ಅಗತ್ಯ ಇರುವ ಸಂದರ್ಭದಲ್ಲಿ ಒಮ್ಮೆಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದು ನೋಡಿದರೆ ಒಂದು ಒಳ್ಳೆಯ ರೈತ ಪರ ಯೋಜನೆಯನ್ನು ಹಳ್ಳ ಹಿಡಿಸುವ ಷಡ್ಯಂತ್ರ ಇದರ ಹಿಂದೆ ಅಡಗಿದೆಯೋ ಎಂದು ಸಾರ್ವಜನಿಕ ವಲಯದಲ್ಲಿ ಕೃಷಿಕರಲ್ಲಿ ಅನುಮಾನ ಮೂಡಿದೆ.
“ಅನ್ನದಾತನ ಕಣ್ಣೀರು ಹಾಕಿಸುವುದು ಯಾವುದೇ ಸರ್ಕಾರಕ್ಕೆ ಶೋಭೆಯಲ್ಲ. ಬಾಕಿ ಹಣದ ಹೆಸರಿನಲ್ಲಿ ಕೃಷಿಕರನ್ನು ಸಂಕಷ್ಟಕ್ಕೆ ತಳ್ಳುವ ಬದಲು, ಕೂಡಲೇ ವಿದ್ಯುತ್ ಸಂಪರ್ಕವನ್ನು ಪುನಃಸ್ಥಾಪಿಸಿ ರೈತರ ಬೆಳೆಗಳನ್ನು ಉಳಿಸಿಕೊಡಬೇಕು. ಇಲ್ಲವಾದಲ್ಲಿ ರೈತರನ್ನು ಸಂಘಟಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದವರು ಜಂಟಿ ಪ್ರತಿಕಾ ಪ್ರಕಟಣೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಹರೀಶ್ ನಾಯಕ್, ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಅವರು ಎಚ್ಚರಿಸಿದ್ದಾರೆ.













