‘ಹಲವಾರು ದೇಶಭಕ್ತರ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸಂವಿಧಾನ ನಮಗೆ ಹಕ್ಕುಗಳೊಂದಿಗೆ ಕರ್ತವ್ಯಗಳನ್ನೂ ಕೊಟ್ಟಿದೆ. ಆದರೆ, ನಾವು ಕರ್ತವ್ಯಗಳನ್ನು ಮರೆತಿದ್ದೇವೆ. ಕಾನೂನುಗಳನ್ನು ಮುರಿಯುವ ಕೆಲಸ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಲೈಸನ್ಸ್ ಇಲ್ಲದೆ, ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸಿ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ನಾವು ಬದುಕಿ ಇತರರನ್ನು ಗೌವರವಿಸಿ ಬದುಕುವುದೇ ನಿಜವಾದ ಸ್ವಾತಂತ್ರ್ಯ’ ಎಂದು ಸರಕಾರಿ ಪ್ರೌಢಶಾಲೆಯ ವಿಶ್ರಾಂತ ಮುಖ್ಯೋಪಾಧ್ಯಾಯಿನಿ ಶ್ರೀದೇವಿ ಭಾಯಿ ಕೆ. ಎಮ್. ಎ. ಎಸ್ ಸಂಸ್ಥೆ ಏರ್ಪಡಿಸಿದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದರು.
ಬಳಿಕ ಮಾತನಾಡಿದ ಪ್ರಾಂಶುಪಾಲ ಕೆ. ಬಾಲಕೃಷ್ಣ ರಾವ್ ‘ವಿದ್ಯಾರ್ಥಿಗಳು ಸ್ವಾತಂತ್ರಕ್ಕೆ ಹೋರಾಡಿದ ಭಗತ್ ಸಿಂಗ್, ಸುಭಾಸಚಂದ್ರ ಬೋಸ್, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಮಂಗಲ್ ಪಾಂಡೆ, ಬಿಪಿನ್ ಚಂದ್ರ ಪಾಲ್, ಬಾಲಗಂಗಾಧರ್ ತಿಲಕ್, ಜಾನ್ಸಿರಾಣಿ ಲಕ್ಶ್ಮೀಬಾಯಿ, ತುಳುನಾಡಿನ ರಾಣಿ ಅಬ್ಬಕ್ಕ ಇತ್ಯಾದಿ ಸ್ವಾತಂತ್ರ್ಯ ಸೇನಾನಿಗಳನ್ನು ಮರೆಯಬಾರದು. ಭಾರತ ಎಲ್ಲಾ ಜಾತಿ ಮತ ಧರ್ಮಗಳನ್ನು ಹೊಂದಿರುವ ಏಕೈಕ ಜಾತ್ಯತೀತ ವಿಶೇಷ ದೇಶ. ನಮ್ಮ ದೇಶದ ಮೇಲೆ ವೈರಿಗಳು ಆಕ್ರಮಣ ಮಾಡಿದಾಗ ನಾವು ಜಾತಿ ಮತ ಬೇಧವಿಲ್ಲದೆ ಅವರನ್ನು ಸದೆಬಡೆಯುತ್ತೇವೆ. ಆಪರೇಷನ್ ಸಿಂಧೂರವೇ ಇದಕ್ಕೆ ಉದಾಹರಣೆ’ ಎಂದರು.
ಗಾಂಧೀಜಿ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಗಳಿಗೆ ಹೂಗಳನ್ನು ಅರ್ಪಿಸುವುದರ ಮೂಲಕ ಗೌರವರ್ಪಣೆ ನೀಡಲಾಯಿತು. ಮುಖ್ಯ ಅತಿಥಿ ಶ್ರೀದೇವಿ ಭಾಯಿ ರವರಿಗೆ ಪ್ರಾಂಶುಪಾಲರು ಸ್ಮರಣಿಕೆ ನೀಡಿ ಗೌರವಿಸಿದರು.
ಪ್ರೌಢಶಾಲಾ ಮುಖ್ಯಸ್ಥೆ ಶ್ರೀಮತಿ, ಪ್ರಾಥಮಿಕ ಶಾಲಾ ಮುಖ್ಯಸ್ಥೆ ಲೋಲಿಟಾ ಡಿ’ಸಿಲ್ವಾ, ಕಾಲೇಜಿನ ಎಲ್ಲಾ ಉಪನ್ಯಾಸಕರು, ಆಧ್ಯಾಪಕರು, ಕಚೇರಿ ಸಿಬ್ಬಂದಿ, ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೌಢಶಾಲಾ ಅಧ್ಯಾಪಕಿ ಹಿಲ್ಡಾ ಸ್ವಾಗತಿಸಿದರೆ, ಪ್ರಾಥಮಿಕ ಶಾಲಾ ಶಿಕ್ಷಕಿ ಸುಪ್ರಿಯಾ ಧನ್ಯವಾದ ಸಮರ್ಪಿಸಿದರು. ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ಗುರುಕುಮಾರ್ ಕೆ. ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಹಾಗೂ ಕಾರ್ಯಕಾರಿಣಿ ಸಭೆ
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕಾರ್ಯಕಾರಿಣಿ ಸಭೆಯು ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಕಾಂಗ್ರೆಸ್ ಮುಖಂಡರಾದ ಉದಯ ಶೆಟ್ಟಿ ಮುನಿಯಾಲು ಅವರು ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಪಕ್ಷ ಕಾಂಗ್ರೆಸ್, ನಾವು ಕಾಂಗ್ರೆಸ್ ಪಕ್ಷದ ಸದಸ್ಯರು ಎನ್ನಲು ಹೆಮ್ಮೆಯಾಗುತ್ತದೆ, ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಸ್ವಾತಂತ್ರ್ಯ ಸೇನಾನಿಗಳ ಹೋರಾಟದ ಫಲವಾಗಿ ನಾವಿಂದು ಸ್ವಾತಂತ್ರ್ಯದ ಸವಿಯನ್ನು ಅನುಭವಿಸುವಂತಾಗಿದೆ, ನಮಗಾಗಿ ತ್ಯಾಗ ಬಲಿದಾನಗೈದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಈ ಸಂದರ್ಭದಲ್ಲಿ ನೆನೆಯಬೇಕು ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಬಿಪಿನ್ ಚಂದ್ರ ಪಾಲ್ ನಕ್ರೆಯವರು ಮಾತನಾಡಿ ಬ್ರಿಟೀಷರು ದೇಶದ ಎಲ್ಲಾ ಸಂಪತ್ತನ್ನು ಕೊಳ್ಳೆ ಹೊಡೆದು ದುರ್ಬಲ ಭಾರತವನ್ನು ಕಾಂಗ್ರೆಸ್ ಕೈಗಿತ್ತು ಹೋದರು, ಎಲ್ಲಾ ಕ್ಷೇತ್ರದಲ್ಲಿಯು ಹಿಂದುಳಿದಿದ್ದ ಭಾರತವನ್ನು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಮತ್ತೆ ಜಗತ್ತಿನೆದುರು ಸಶಕ್ತಿಶಾಲಿ ರಾಷ್ಟ್ರವಾಗಿ ನಿರ್ಮಾಣ ಮಾಡಲಾಯಿತು, ಸಾರ್ವಭೌಮ ರಾಷ್ಟ್ರ ನಿರ್ಮಾಣದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ ಎಂದು ಸ್ವಾತಂತ್ರ್ಯದ ಸಂದೇಶವನ್ನು ಸಾರಿದರು.
ಹಿರಿಯ ಮುಖಂಡ ನ್ಯಾಯವಾದಿಗಳಾದ ಶೇಖರ ಮಡಿವಾಳ ಅವರು ಮಾತನಾಡಿ ಕಾರ್ಕಳದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಶಾಸಕರು ಸಜ್ಜನ ರಾಜಕಾರಣಿ ದಿ. ಗೋಪಾಲ ಭಂಡಾರಿಯವರ ಪುತ್ಥಳಿ ನಿರ್ಮಾಣದ ಕುರಿತು ಪ್ರಸ್ತಾವನೆಗೈದರು. ಹಿರಿಯ ಕಾಂಗ್ರೆಸ್ ಮುಖಂಡರಾದ ಮಂಜುನಾಥ ಪೂಜಾರಿ ಮುದ್ರಾಡಿ ಹಾಗೂ ಕೆಪಿಸಿಸಿ ಸದಸ್ಯರಾದ ಸುರೇಂದ್ರ ಶೆಟ್ಟಿಯವರು ಸಂದರ್ಭೋಚಿತವಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಅಧ್ಯಕ್ಷ ಶುಭದ ರಾವ್ ಮಾತನಾಡಿ ಅತಿ ಶೀಘ್ರದಲ್ಲಿ ಕಾರ್ಕಳದಲ್ಲಿ ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ಥಳಿ ನಿರ್ಮಾಣದ ಕಾರ್ಯವನ್ನು ಸರ್ವರ ಸಹಕಾರದೊಂದಿಗೆ ಕೈಗೊಳ್ಳಲಾಗುವುದು ಎಂದರು. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಪಕ್ಷ ಕಾಂಗ್ರೆಸ್, ಇಂದು ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷನಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅತ್ಯಂತ ಹೆಮ್ಮೆಯಾಗುತ್ತದೆ ಎಂದರು, ಹಾಗೂ ಕಾರ್ಕಳ ಬ್ಲಾಕ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಅತ್ಯಂತ ಬಲಿಷ್ಠವಾಗುತ್ತಿದೆ ಎಂದರು.
ಸಭೆಯಲ್ಲಿ ಬ್ಲಾಕ್ ಸಮಿತಿಯ ಪರಿಶಿಷ್ಟ ಜಾತಿ ಘಟಕದ ನೂತನ ಅಧ್ಯಕ್ಷರಾಗಿ ನೇಮಕವಾದ ದೇವದಾಸ್.ಕೆ ಅವರಿಗೆ ಆದೇಶ ಪತ್ರವನ್ನು ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾದ್ಯಕ್ಷರಾದ ಸುಧಾಕರ ಕೋಟ್ಯಾನ್, ಇಂಟೆಕ್ ಅಧ್ಯಕ್ಷ ಕಿರಣ್ ಹೆಗ್ಡೆ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಬ್ಲಾಕ್ ಉಪಾಧ್ಯಕ್ಷರಾದ ಜಾರ್ಜ್ ಕ್ಯಾಸ್ಟಲಿನೊ, ಕೆಪಿಸಿಸಿ ರೈತ ಘಟಕದ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಕುಕ್ಕುಂದೂರು, ಕೋಶಾಧಿಕಾರಿ ಉಮೇಶ್ ರಾವ್ ಬಜಗೋಳಿ, ಕುಕ್ಕುಂದೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಉಷಾ.ಕೆ, ಸೊಸೈಟಿ ಅಧ್ಯಕ್ಷರಾದ ಸಿರಿಯಣ್ಣ ಶೆಟ್ಟಿ, ಜಾನ್ ಡಿ’ಸಿಲ್ವಾ, ಮಾಜಿ ಬ್ಲಾಕ್ ಅದ್ಯಕ್ಷ ಸದಾಶಿವ ದೇವಾಡಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ಸೇವಾದಳದ ಅಬ್ದುಲ್ ಸಾಣೂರು, ಕಾನೂನು ಘಟಕದ ರೆಹಮತ್ತುಲ್ಲಾ, ಪ.ಪಂ ಅದ್ಯಕ್ಷ ಕಿರಣ್ ನಾಯ್ಕ, ಮೀನುಗಾರ ಘಟಕದ ಮುರಳಿ ರಾಣೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಘಟಕಗಳ ಅಧ್ಯಕ್ಷರು, ಚುನಾಯಿತ ಜನಪ್ರತಿನಿಧಿಗಳು, ನಾಮನಿರ್ದೇಶಿತ ಸದಸ್ಯರು, ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಬ್ಲಾಕ್ ಪಧಾದಿಕಾರಿಗಳು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ರಮೇಶ್ ನಿಟ್ಟೆ ಅವರು ದೇಶಭಕ್ತಿ ಗೀತೆಯನ್ನು ಹಾಡಿದರು, ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಅನಿಲ್ ಪೂಜಾರಿ ನೆಲ್ಲಿಗುಡ್ಡೆ ಸ್ವಾಗತಿಸಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಇನ್ನಾ ವಂದನಾರ್ಪಣೆಗೈದರು, ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಕ್ಲಬ್ ಕಾರ್ಕಳ ಇವರು ಮಾಡುವ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯ. ಕಾರ್ಕಳದಲ್ಲಿ ಶೈಕ್ಷಣಿಕ ಆರೋಗ್ಯ ಮತ್ತು ಸಮುದಾಯ ಸೇವೆಗಳನ್ನು ಮಾಡಿಕೊಂಡು ಬರುತ್ತಿರುವ ರೋಟರಿ ಸಂಸ್ಥೆಯು ಎಲ್ಲರಿಗೂ ಮಾದರಿಯಾಗಿದೆ ಎಂದು ಕಾರ್ಕಳ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ಹೇಳಿದರು.ಅವರು ಕಾರ್ಕಳ ಮುಖ್ಯ ಬಸ್ಸು ನಿಲ್ದಾಣದಲ್ಲಿ ನಿರ್ಮಿಸಿದ ವಕೀಲ ವಾಸುದೇವ ಕಾಮತ್ ರೋಟರಿವೃತ್ತವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ತಮ್ಮ ತಂದೆ ವಕೀಲ ವಾಸುದೇವ ಕಾಮತ್ ರವರ ಹೆಸರಿನ ವೃತ್ತದ ನಿರ್ಮಾಣದಲ್ಲಿ ಸಹಕರಿಸಿದ ದಾನಿಗಳಾದ ಕೆ. ಕಮಲಾಕ್ಷ ಕಾಮತ್ ಲೆಕ್ಕಪರಿಶೋಧಕರು ಮಾತನಾಡುತ್ತಾ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಕೆಲಸ ಕಾರ್ಯಗಳು ಪ್ರಶಂಸಣೀಯವಾಗಿದ್ದು, ಸಮಾಜಕ್ಕೆ ಇನ್ನು ಹೆಚ್ಚಿನ ಸೇವೆಯು ಲಭಿಸುವಂತಾಗಲಿ ಎಂದರು.
ವೇದಿಕೆಯಲ್ಲಿ ಕಾರ್ಕಳ ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ, ಪುರಸಭೆಯ ಸ್ಥಳೀಯ ಸದಸ್ಯೆ ಸುಮಾ ಕೇಶವ್, ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ಭರತೇಶ್ ಆದಿರಾಜ್, ವಲಯ ಸೇನಾನಿ ಜಾನ್ ಆರ್ ಡಿ’ಸಿಲ್ವ, ಮೇಜರ್ ಡೋನರ್ ಸುವರ್ಣ ನಾಯಕ್, ಅರುಣ್ ಪುರಾಣಿಕ್, ಕಾರ್ಯದರ್ಶಿ ಚೇತನ್ ನಾಯಕ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕ್ಲಬ್ ನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಕ್ಲಬ್ ನ ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ. ನಿರೂಪಿಸಿದರು. ನಿಕಟ ಪೂರ್ವ ಅಧ್ಯಕ್ಷ ಇಕ್ಬಾಲ್ ಅಹಮದ್ ವಂದಿಸಿದರು.
ಬಿಹಾರದಲ್ಲಿ ಆಗಸ್ಟ್ 1ರಂದು ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ‘ಸತ್ತೋಗಿದ್ದಾರೆ’ ಎಂದು ಚುನಾವಣಾ ಆಯೋಗ ಘೋಷಿಸಿರುವ ಏಳು ಜನರ ಗುಂಪೊಂದು ಆ.13 ರಂದು ರಾಹುಲ್ ಗಾಂಧಿ ದೆಹಲಿಯಲ್ಲಿ ಭೇಟಿಯಾಗಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರುದ್ದದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲೇ, ಏಳು ಜನರ ಗುಂಪು ಬಿಹಾರದಿಂದ ದೆಹಲಿಗೆ ಪ್ರಯಾಣಿಸಿ ರಾಹುಲ್ ಗಾಂಧಿಯನ್ನು ಭೇಟಿಯಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, “ಜೀವನದಲ್ಲಿ ಅನೇಕ ಆಸಕ್ತಿದಾಯಕ ಅನುಭವಗಳು ಆಗಿವೆ. ಆದರೆ, ‘ಸತ್ತ ಜನರೊಂದಿಗೆ’ ಟೀ ಕುಡಿಯುವ ಅವಕಾಶ ಎಂದಿಗೂ ಸಿಕ್ಕಿರಲಿಲ್ಲ. ಈ ವಿಶಿಷ್ಟ ಅನುಭವಕ್ಕಾಗಿ ಚುನಾವಣಾ ಆಯೋಗಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಜತ ಮಹೋತ್ಸವ ಸಭಾಂಗಣದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಜರಗಿತು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದವರು ಜಗತ್ತಿನಲ್ಲಿ ಸ್ವಾರ್ಥರಹಿತ ಸಂಬಂಧವೆಂದರೆ ಅದು ಅಣ್ಣ ತಂಗಿಯರ ಸಂಬಂಧ ಹೀಗಾಗಿ ಶ್ರಾವಣ ಹುಣ್ಣಿಮೆಯ ವಿಶೇಷ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸುತ್ತಾರೆ ಎಂದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮಾತನಾಡಿ ಭಾರತ ದೇಶದ ಧಾರ್ಮಿಕ ಹಬ್ಬವಾಗಿರುವ ಈ ಹಬ್ಬದಲ್ಲಿ ಸಹೋದರಿಯರಿಂದ ರಾಖಿ ಕಟ್ಟಿಸಿಕೊಂಡ ಸಹೋದರರು ಸದಾ ನಿಮ್ಮ ರಕ್ಷಣೆ ನಮ್ಮ ಹೊಣೆ ಎಂಬ ಮಾತನ್ನು ಪಾಲಿಸಿಕೊಂಡು ಹೋಗುವ ಸಂಪ್ರದಾಯಕ್ಕೆ ಈ ಹಬ್ಬ ಸಾಕ್ಷಿಯಾಗಿದೆ ಎಂದರು.
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಮಹಿಳಾ ಸದಸ್ಯರು ಸಂಘದ ಸಹೋದರ ಸದಸ್ಯರಿಗೆ ಆರತಿ ಬೆಳಗಿ, ಕುಂಕುಮ ಹಚ್ಚಿ, ಸಿಹಿ ತಿನ್ನಿಸಿ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕಾಸ್ರಬೈಲು, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸತೀಶ್ ಪೂಜಾರಿ, ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಲೀಲಾ ಪೂಜಾರಿ, ಕಾರ್ಯಕ್ರಮದ ನಿರ್ದೇಶಕರು ಆರತಿ, ಸದಸ್ಯರಾದ ಸುರೇಶ್ ಅಬ್ಬನಡ್ಕ, ಸುದರ್ಶನ್ ಕುಂದರ್, ಪ್ರದೀಪ್ ಸುವರ್ಣ, ಹರಿಣಿ ಪೂಜಾರಿ, ವೀಣಾ ಪೂಜಾರಿ, ಸುಲೋಚನಾ ಕೋಟ್ಯಾನ್, ವೀಣಾ ಆಚಾರ್ಯ, ಪದ್ಮಶ್ರೀ ಪೂಜಾರಿ, ಪುಷ್ಪ ಕುಲಾಲ್ ಮೊದಲಾದವರಿದ್ದರು.
ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಉಪನಿರ್ದೇಶಕರ ಕಛೇರಿ ಜಿಲ್ಲಾ ಪಂಚಾಯತ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ 14/17 ರ ವಯೋಮಿತಿಯ ಕುಸ್ತಿ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಎಂಟನೇ ತರಗತಿಯ ದ್ರುವೀತ್ ಹಾಗೂ ಬಾಲಕಿಯರ ವಿಭಾಗದಲ್ಲಿ ಎಂಟನೇ ತರಗತಿಯ ಸುದೀಕ್ಷಾ ಚಿನ್ನದ ಪದಕಗಳನ್ನು ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಏಳನೇ ತರಗತಿಯ ಮೊಹಮ್ಮದ್ ಹಿಶಾಮ್ ಖಾನ್ ಮತ್ತು ಸಾದ್ವಿ ನಾಯಕ್, ಹತ್ತನೇ ತರಗತಿಯ ರೇಚಲ್ಡಿ ’ಸೋಜ ಮತ್ತು ಲೆನಿಷಾ ಮೆಂಡೋನ್ಸಾ ಬೆಳ್ಳಿ ಪದಕ, ಆರನೇ ತರಗತಿಯ ಮೊಹಮ್ಮದ್ ಅತಿಫ್ ಮತ್ತು ಪ್ರೀತಿ ಪೂಜಾರಿ, ಏಳನೇ ತರಗತಿಯ ಮಾನಸ್, ಒಂಬತ್ತನೇ ತರಗತಿಯ ಸಾನ್ವಿ ಎಂ. ನಾಯಕ್ ಕಂಚಿನ ಪದಕಗಳನ್ನು ಪಡೆದಿದ್ದಾರೆ.
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಜತ ಮಹೋತ್ಸವ ಸಭಾಂಗಣದಲ್ಲಿ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸುರೇಶ್ ಕಾಸರಬೈಲು ಅವರ ಅಧ್ಯಕ್ಷತೆಯಲ್ಲಿ 19ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೊತ್ಸವ ಸಂಭ್ರಮದ ಪೂರ್ವಭಾವಿ ಸಭೆ ಜರಗಿತು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಪೂರ್ವಾಧ್ಯಕ್ಷ ಆನಂದ ಪೂಜಾರಿ, ಸತೀಶ್ ಪೂಜಾರಿ, ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಲೀಲಾ ಪೂಜಾರಿ, ಕಾರ್ಯಕ್ರಮದ ನಿರ್ದೇಶಕರು ಆರತಿ, ಸದಸ್ಯರಾದ ಸುರೇಶ್ ಅಬ್ಬನಡ್ಕ, ಸುದರ್ಶನ್ ಕುಂದರ್, ಪ್ರದೀಪ್ ಸುವರ್ಣ, ಹರಿಣಿ ಪೂಜಾರಿ, ವೀಣಾ ಪೂಜಾರಿ, ಸುಲೋಚನಾ ಕೋಟ್ಯಾನ್, ವೀಣಾ ಆಚಾರ್ಯ, ಪದ್ಮಶ್ರೀ ಪೂಜಾರಿ, ಪುಷ್ಪ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜತೆ ಪವಿತ್ರಾ ಸೇರಿ 7 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ಆದೇಶ ಇಂದು ಹೊರಬಿದ್ದಿದೆ. ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ, ಜಸ್ಟೀಸ್ ಮಹದೇವನ್ ಪೀಠವು ಈ ಮಹತ್ವದ ತೀರ್ಪು ನೀಡಿದೆ.
ಈ ಕೊಲೆ ಪ್ರಕರಣದಲ್ಲಿ ಎ1 ಪವಿತ್ರಾಗೌಡ, ಎ2 ದರ್ಶನ್, ಎ6 ಜಗದೀಶ್ ಅಲಿಯಾಸ್ ಜಗ್ಗ, ಎ7 ಅನುಕುಮಾರ್ ಅಲಿಯಾಸ್ ಅನು, ಎ14 ಪ್ರದೋಶ್ , ಎ11 ನಾಗರಾಜು ಅಲಿಯಾಸ್ ನಾಗ, ಎ12 ಲಕ್ಷ್ಮಣ್ ಜಾಮೀನು ರದ್ದು ಪಡಿಸಲಾಗಿದೆ.
ಉಡುಪಿ ಪುತ್ತೂರಿನಲ್ಲಿ ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ವಿನಯ್ ದೇವಾಡಿಗ (35) ಎಂಬ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಮತ್ತೆ ರಕ್ತ ಹರಿದಿದೆ. ಉಡುಪಿಯ ಪುತ್ತೂರಿನಲ್ಲಿ ತಡರಾತ್ರಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಸುಮಾರು 11 ಗಂಟೆಗೆ ವಿನಯ್ ಎಂಬಾತನ ಮನೆಗೆ ಮೂವರು ದುಷ್ಕರ್ಮಿಗಳು ನುಗ್ಗಿ, ಮನೆಯವರ ಮುಂದೆಯೇ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ ಬಾಗಿಲು ಬಡಿದ ದುಷ್ಕರ್ಮಿಗಳು ಮೊದಲು ಮನೆಯಲ್ಲಿ ವಿನಯ್ ಇದ್ದಾನಾ ಎಂದು ವಿಚಾರಿಸಿದ್ದಾರೆ. ಸ್ನೇಹಿತರು ಇರಬಹುದು ಎಂದು ಮನೆಯವರು ಒಳಗೆ ಕರೆದುಕೊಂಡಿದ್ದಾರೆ. ಬಳಿಕ ಒಳಗೆ ಬಂದವರೇ ಏಕಾಏಕಿ ವಿನಯ್ ರೂಮಿಗೆ ನುಗ್ಗಿದ್ದಾರೆ.
ಮನೆಯಲ್ಲಿ ಹೆಂಡತಿ ಮತ್ತು ಮಗುವಿನ ಜೊತೆ ಮಲಗಿದ್ದ ವಿನಯ್ ರೂಮಿಗೆ ಮೂವರು ನುಗ್ಗಿದ್ದಾರೆ. ಕೈಯಲ್ಲಿ ಹಿಡಿದಿದ್ದ ತಲವಾರ್ ಬೀಸಿದ್ದಾರೆ. ಎಲ್ಲೆಂದರಲ್ಲಿ ಇರಿದು ಕೊಚ್ಚಿ ವಿನಯ್ ನನ್ನು ಹತ್ಯೆಗೈದಿದ್ದಾರೆ ಎನ್ನಲಾಗಿದೆ.
ಪತಿಯ ಪ್ರಾಣ ಉಳಿಸಿಕೊಳ್ಳಲು ದುಷ್ಕರ್ಮಿಗಳ ಜೊತೆ ವಿನಯ್ ಪತ್ನಿ ಹೋರಾಡಿದ್ದಾರೆ. ಈ ವೇಳೆ ಆಕೆಗೂ ಗಂಭೀರ ಗಾಯಗಳಾಗಿವೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
• 22 ಕೃತಿಗಳ ಅನಾವರಣ.
• ಸಾಹಿತ್ಯವೆಂಬುದು ಮನಸ್ಸಿನ ಆಳದಿಂದ ಹೊರಹೊಮ್ಮುವ ಭಾವಧಾರೆ – ಡಾ. ನಾಗತಿಹಳ್ಳಿ .
• ಪುಸ್ತಕಧಾರೆಯು ಓದುವ ಅಭ್ಯಾಸವನ್ನು ಪುನರುಜ್ಜೀವನಗೊಳಿಸುವಂತ ಕಾರ್ಯಕ್ರಮ – ಡಾ. ಕೆ. ಚಿನ್ನಪ್ಪ ಗೌಡ.
ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್ 13ರಂದು ‘ಕ್ರಿಯೇಟಿವ್ ಪುಸ್ತಕ ಧಾರೆ – ೨೦೨೫’ ಮುಂಗಾರಿನ ಹನಿಗಳ ಜೊತೆಗೆ ಪುಟಗಳ ಪಯಣ… ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಪುಸ್ತಕಮನೆ ಪ್ರಕಾಶನದ ವತಿಯಿಂದ 22 ಕೃತಿಗಳ ಅನಾವರಣ ಕಾರ್ಯಕ್ರಮ ನಡೆಯಿತು.
ಉದ್ಘಾಟಕರಾಗಿ ಆಗಮಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ‘ಪುಸ್ತಕವೆಂದರೆ ಕೇವಲ ಅಕ್ಷರಗಳ ಸಂಗ್ರಹವಲ್ಲ. ಅದು ಕಾಲ, ಸಮಾಜ ಮತ್ತು ಮಾನವನ ಭಾವನೆಗಳ ಪ್ರತಿಬಿಂಬ. ಇಂತಹ ಕಾರ್ಯಕ್ರಮಗಳು ಓದುವ ಅಭ್ಯಾಸವನ್ನು ಪುನರುಜ್ಜೀವನಗೊಳಿಸುತ್ತವೆ’ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ಸಾಹಿತಿಗಳು ಹಾಗೂ ಚಿತ್ರ ನಿರ್ದೇಶಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ರವರು ‘ಪುಸ್ತಕವೆಂದರೆ ಕೇವಲ ಹಾಳೆಗಳ ಗುಚ್ಛವಲ್ಲ. ಅದು ಕಾಲದ ಸ್ಮರಣೆ, ಸಮಾಜದ ಕನ್ನಡಿ ಮತ್ತು ಮನಸ್ಸಿನ ಆಳದಿಂದ ಹೊರ ಹೊಮ್ಮುವ ಭಾವಧಾರೆ ಮತ್ತು ಮಾನವನ ಮನಸ್ಸಿನ ನಕ್ಷೆಯೇ ಆಗಿದೆ’ ಎಂದರು.
ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು ಸ್ವಾಗತಗೈಯುತ್ತಾ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ‘ಲೇಖಕರು ತಮ್ಮ ವಿಚಾರಧಾರೆಯ ನದಿಗಳನ್ನು ಕೃತಿಗಳಲ್ಲಿ ಹರಿಸಿದ್ದಾರೆ. ಓದುಗರು ಅದರ ತೀರದಲ್ಲಿ ನಿಂತು ಚಿಂತನೆಗಳ ನೀರನ್ನು ಕುಡಿಯುವಂತಿದೆ. ಇಂತಹ ಸಾಹಿತ್ಯವು ಕಾಲವನ್ನು ಮೀರಿ ನೆನಪಿನ ಮಡಿಲಿನಲ್ಲಿ ಉಳಿಯುತ್ತವೆ’ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಸಾಹಿತಿಗಳು ಮತ್ತು ಅಧ್ಯಕ್ಷರು, ಕ.ಸಾ.ಪ ಕಾರ್ಕಳ ತಾಲೂಕು ಇವರು ಮಾತನಾಡಿ ‘ಇಂದಿನ ಯಾಂತ್ರಿಕ ಜೀವನದಲ್ಲಿ ಓದಿನ ಮಹತ್ವವನ್ನು ಮರೆಯುತ್ತಿರುವಾಗ, ಇಂತಹ ಪುಸ್ತಕ ಬಿಡುಗಡೆಗಳು ಸಾಹಿತ್ಯ ಪ್ರೇಮಿಗಳಿಗೆ ಹೊಸ ಚೈತನ್ಯ ತುಂಬುತ್ತವೆ’ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಡಾ. ಪ್ರದೀಪ ಕುಮಾರ ಹೆಬ್ರಿ, ಮಹಾಕಾವ್ಯಗಳ ಲೇಖಕರು, ಮಂಡ್ಯ ಇವರು ಮಾತನಾಡುತ್ತಾ ‘ಪುಸ್ತಕದ ಜೀವನ ಅದರ ಓದುಗರ ಕೈಯಲ್ಲಿ ಪ್ರಾರಂಭವಾಗುತ್ತದೆ. ಉಳಿಸಿ ಬೆಳೆಸಬೇಕಾದದ್ದು ಸಹೃದಯರ ಕರ್ತವ್ಯ’ ಎಂದು ಹೇಳಿದರು. ಕಥೆಗಳ ಮೂಲಕ ಸಭಾಸದರ ಗಮನ ಸೆಳೆದರು.
ಸಭಾಧ್ಯಕ್ಷತೆಯನ್ನು ವಹಿಸಿದ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘ಸಾಹಿತ್ಯವು ಜನರ ಬದುಕಿಗೆ ಕನ್ನಡಿಯಂತೆ. ಓದುಗರು ಪುಸ್ತಕದಿಂದ ಕಥೆಗಳನ್ನು ಮಾತ್ರವಲ್ಲ, ಬದುಕಿನ ಮೌಲ್ಯಗಳನ್ನು, ಸಂಬಂಧಗಳ ಅರ್ಥವನ್ನು, ಮನುಷ್ಯತ್ವದ ಸಾರವನ್ನು ಪಡೆದುಕೊಳ್ಳುತ್ತಾರೆ’ ಎಂದರು.
ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಡಾ. ನಾಗತಿಹಳ್ಳಿ, ಡಾ.ಕೆ.ಚಿನ್ನಪ್ಪ ಗೌಡ ಹಾಗೂ 22 ಕೃತಿಗಳ ಕರ್ತೃಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಅನಾವರಣಗೊಂಡಿರುವ ಕೃತಿಗಳು
• ಯಾತ್ರೆ – ಚಂದ್ರಕಾಂತ ಪೋಕಳೆ
• ವಿಜ್ಞಾನ ಕೌತುಕಗಳ ಮಹಾಯಾನ – ಎಲ್. ಪಿ ಕುಲಕರ್ಣಿ
• ಹರ್ಷ ರಾಗ – ಪೌಝಿಯಾ ಸಲೀಂ
• ಹಿತಶತ್ರು – ಪದ್ಮಲತಾ ಮೋಹನ್
• ಪುಟ್ಟ ದೇವರ ಕಣ್ಣೀರು – ಸದಾಶಿವ ಸೊರಟೂರು
• ಬದುಕು ಮಾಯೆಯ ಮಾಟ – ಕುಮಾರಸ್ವಾಮಿ ತೆಕ್ಕುಂಜ
• ಕಾವ್ಯ ಧ್ಯಾನ – ನಾಗೇಶ್ ಜೆ. ನಾಯಕ
• ನಿನಗೆ ನೀನೇ ಬೆಳಕು – ಪ್ರಜ್ವಲಾ ಶೆಣೈ
• ನಿನ್ನ ಇಚ್ಛೆಯಂತೆ ನಡೆವೆ – ಮನು ಗುರುಸ್ವಾಮಿ
• ಕಣ್ಣ ಬಾಗಿಲಿಗೆ ಬಂದ ನೀರು – ಸಂತೆಬೆನ್ನೂರು ಫೈಜ್ನಟರಾಜ್
• ಸ್ವಾತಿ ಬೊಂಬಾಟ್ – ಎಂ.ಮನೋಹರ ಪೈ
• ಗ್ಯಾಂಗ್ ಸ್ಟರ್ ಮತ್ತು ಅವಳು – ಮಂಜುನಾಥ್ ಕುಂಬಾರ್
• ಇದೊಳ್ಳೆ ವರಸೆ – ಸಂದೇಶ್ ಎಚ್. ನಾಯ್ಕ್
• ಮಾಂಡವ್ಯ ದೀಪ – ಡಾ. ಪ್ರದೀಪ ಕುಮಾರ ಹೆಬ್ರಿ
• ಬೆಳ್ದೀಪ – ಡಾ. ಪ್ರದೀಪ ಕುಮಾರ ಹೆಬ್ರಿ
• ನಿಲುಕದ ನಕ್ಷತ್ರ – ಡಾ. ಸುಮತಿ ಪಿ.
• ಸಿಹಿಜೀವಿ ಕಂಡ ಅಂಡಮಾನ್ – ಸಿಹಿಜೀವಿ ಸಿ.ಜಿ ವೆಂಕಟೇಶ್ವರ
• ಅನುಭವ ದೀಪ್ತಿ – ಶುಭಲಕ್ಷ್ಮಿ ಆರ್. ನಾಯಕ್
• ಈ ಪಯಣದಲ್ಲಿ – ಶ್ಯಾಮಲಾ ಗೋಪಿನಾಥ್
• ಸಂಗೀತ ಶರಧಿ – ರಾಜೇಂದ್ರ ಭಟ್. ಕೆ.
• ಅಸಂಗತ – ಅಕ್ಷತಾ ರಾಜ್ ಪೆರ್ಲ
• ವಿಜ್ಞಾನ ವಿಶಾರದರು – ಎಲ್.ಪಿ ಕುಲಕರ್ಣಿ
ಸಂವಾದ ಕಾರ್ಯಕ್ರಮ
ಅಪರಾಹ್ನ 2. 30 ರಿಂದ ನಾಗತಿಹಳ್ಳಿ ಚಂದ್ರಶೇಖರ ಅವರ ಚಲನಚಿತ್ರಗಳಲ್ಲಿ ಬಳಸಿರುವ ಭಾವಗೀತೆಗಳ ಗಾಯನದ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಿತು. ಖ್ಯಾತ ನಿರೂಪಕರಾದ ಅವಿನಾಶ್ ಕಾಮತ್ ರವರು ಸಂವಾದ ಕಾರ್ಯಕ್ರಮ ನಿರ್ವಹಿಸಿಕೊಟ್ಟರು. ಜೀ ಸರಿಗಮಪ ಮತ್ತು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಖ್ಯಾತಿಯ ಯಶವಂತ್ ಎಂ.ಜಿ ಇವರಿಂದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಸಹ ಸಂಸ್ಥಾಪಕರಾದ ಅಮೃತ್ ರೈ, ಗಣನಾಥ ಶೆಟ್ಟಿ ಬಿ, ಗಣಪತಿ ಭಟ್ ಕೆ.ಎಸ್, ವಿಮಲ್ ರಾಜ್.ಜಿ, ಆದರ್ಶ ಎಂ.ಕೆ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ – ಉಪನ್ಯಾಸಕೇತರ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಲೋಹಿತ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.