Home Blog Page 25

ಕ್ರೈಸ್ಟ್ ಕಿಂಗ್: ಸಂಭ್ರಮ ಸಡಗರದ ಶಿಕ್ಷಕರ ದಿನಾಚರಣೆ

0

ಮಾನವೀಯ ಮೌಲ್ಯಗಳ ಅಧಃಪತನದಿಂದಾಗಿ ಗುರು-ಶಿಷ್ಯ ಸಂಬಂಧವೂ ಕುಸಿಯುತ್ತಿದೆ: ಎಸ್.ಎಲ್. ಭೋಜೆಗೌಡ

ಶ್ರೀಮತಿ ಸ್ವರ್ಣಲತಾ ಕೆ ಅವರಿಗೆ ‘ಕ್ರೈಸ್ಟ್ ಕಿಂಗ್ ಶಿಕ್ಷಕ ರತ್ನ’ ಮತ್ತು ಶ್ರೀ ಫ್ರೆಡ್ರಿಕ್ ರೆಬೆಲ್ಲೊ ಅವರಿಗೆ ಕ್ರೈಸ್ಟ್ ಕಿಂಗ್ ಕ್ರೀಡಾ ಶಿಕ್ಷಕ ಶ್ರೀ’ ಪ್ರಶಸ್ತಿ ಪ್ರದಾನ

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕ ರಕ್ಷಕ ಸಂಘದ ಆಶ್ರಯದಲ್ಲಿ ಸಂಸ್ಥೆಯ ನೂತನ ಕಾಲೇಜು ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್ ಎಲ್ ಭೋಜೆಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ಪ್ರಸ್ತುತ ಸಮಾಜ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು ಇದರಿಂದಾಗಿ ಗುರು ಶಿಷ್ಯ ಸಂಬಂಧದ ಮೌಲ್ಯ ಕೂಡಾ ಕುಸಿಯುತ್ತಿದೆ. ಇಂದು ಸಂಬಂಧಗಳನ್ನು ಹಣದ ಮೂಲಕ ಅಳೆಯುತ್ತಿರುವುದು ಖೇದಕರ ವಿಷಯ, ಶಿಕ್ಷಕರು ಈ ಸಮಾಜದ ಕಣ್ಮಣಿಗಳು, ಅವರಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ, ಈ ಪ್ರಪಂಚದಲ್ಲಿ ಸರ್ವಶ್ರೇಷ್ಟ ನಾಯಕರನ್ನು ತಯಾರು ಮಾಡುವವರು ಯಾರಾದರೂ ಇದ್ದರೆ ಅದು ಶಿಕ್ಷಕರು ಮಾತ್ರ” ಎಂದು ಹೇಳಿದರು.

ಇನ್ನೋರ್ವ ಅತಿಥಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯಗುರು ಸಂಜೀವ ದೇವಾಡಿಗ ಅವರು ಮಾತನಾಡಿ “ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಶಿಕ್ಷಕರು ತಮ್ಮ ವೃತ್ತಿಯ ಬಗ್ಗೆ ಪ್ರೀತಿ ಅಭಿಮಾನಗಳನ್ನು ಬೆಳಿಸಿಕೊಳ್ಳಬೇಕು” ಎಂದು ಹೇಳಿದರು. ಸರಕಾರಿ ಪ್ರೌಢಶಾಲೆ ರೆಂಜಾಳ ಇಲ್ಲಿನ ಮುಖ್ಯ ಶಿಕ್ಷಕಿ ಶ್ರೀಮತಿ ಸ್ವರ್ಣಲತಾ ಕೆ ಅವರಿಗೆ ‘ಕ್ರೈಸ್ಟ್ ಕಿಂಗ್ ಶಿಕ್ಷಕ ರತ್ನ’ ಮತ್ತು ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಫ್ರೆಡ್ರಿಕ್ ರೆಬೆಲ್ಲೊ ಅವರಿಗೆ ‘ಕ್ರೈಸ್ಟ್ ಕಿಂಗ್ ಕ್ರೀಡಾ ಶಿಕ್ಷಕಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಸ್ವರ್ಣಲತಾ ಅವರು “ಉಳಿಪೆಟ್ಟನ್ನು ತಿಂದ ಕಲ್ಲು ಉತ್ತಮ ಮೂರ್ತಿಯಾಗುತ್ತದೆ, ಅದೇ ರೀತಿ ಕಷ್ಟವನ್ನುಂಡು ಬೆಳೆದರೆ ಉತ್ತಮ ವ್ಯಕ್ತಿತ್ವ ಮೂಡಿಬರುತ್ತದೆ” ಎಂದು ಹೇಳಿದರು. ಶ್ರೀ ಫ್ರೆಡ್ರಿಕ್ ರೆಬೆಲ್ಲೊ ಅವರು ಮಾತನಾಡಿ “ವಿದ್ಯಾರ್ಥಿಗಳು ಧೈರ್ಯ-ಸ್ಥೈರ್ಯಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು, ನಮ್ಮ ನಮ್ಮ ಪ್ರತಿಭೆಗಳನ್ನು ನಾವು ನಾವೇ ಗುರುತಿಸಿ, ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಶಿಕ್ಷಕರು ಮಕ್ಕಳನ್ನು ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳಬೇಕು, ನಮ್ಮ ದೇಶಕ್ಕಾಗಿ ಕಾಯಾ ವಾಚಾ ಮನಸಾ ದುಡಿಯುವುದೇ ನಿಜವಾದ ದೇಶಪ್ರೇಮ. ಭಾರತದ ಭವಿಷ್ಯ ನಿರ್ಮಾಣವಾಗುವುದು ತರಗತಿ ಕೊಠಡಿಗಳಲ್ಲಿ, ಅಲ್ಲಿ ಮಕ್ಕಳಿಗೆ ಸರಿಯಾದ ಮೌಲ್ಯಯುತ ಶಿಕ್ಷಣ ದೊರೆತಾಗ ಭಾರತ ವಿಶ್ವನಾಯಕನಾಗುತ್ತದೆ” ಎಂದು ಹೇಳಿದರು.

ಶಿಕ್ಷಕ-ರಕ್ಷಕ ಸಂಘದ ಪದವಿಪೂರ್ವ ವಿಭಾಗದ ಅಧ್ಯಕ್ಷರಾದ ದಯಾನಂದ ಮಲೆಬೆಟ್ಟು ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಪದವಿಪೂರ್ವ ವಿಭಾಗದ ಪ್ರಾಚಾರ್ಯರಾದ ಲಕ್ಷ್ಮಿ ನಾರಾಯಣ ಕಾಮತ್ ಪ್ರಸ್ತಾವನೆಗೈದರೆ ಕನ್ನಡ ಉಪನ್ಯಾಸಕ ಉಮೆಶ್ ಬೆಳ್ಳಿಪ್ಪಾಡಿ ಪ್ರಶಸ್ತಿಗಳ ಪರಿಚಯಗೈದರು. ಸಂಸ್ಥೆಯ ಗಣಿತಶಾಸ್ತ್ರ ಉಪನ್ಯಾಸಕ ಅರುಣ್ ಸಂದೀಪ್ ಡಿ’ಸೋಜ, ಕಚೇರಿ ಸಹಾಯಕಿ ಶ್ರೀಮತಿ ಪೃಥ್ವಿ ಶೆಟ್ಟಿ ಮತ್ತು ಗ್ರಂಥಪಾಲಕಿ ಶ್ರೀಮತಿ ರೇಷ್ಮಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ಎಲ್ಲಾ ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ವೃಂದದವರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಕಾರ್ಯದರ್ಶಿ ಆವೆಲಿನ್ ಲೂಯಿಸ್, ಸಂಸ್ಥೆಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಿಂದ ಹಾಗೂ ಪೋಷಕರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

ಶಕೀಲಾ ಜಿ ಶೆಟ್ಟಿ, ವಿದ್ಯಾ, ಮಮತಾ, ವಿಶ್ವಾನಾಥ ಪುಜಾರಿ, ಕಿಶನ್, ಪ್ರಕಾಶ್ ಡಿಸೋಜ, ಸುನಿಲ್ ಡಿಸೋಜ, ಜಾನ್ ತಾವ್ರೋ, ವನಿತಾ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ – ರಕ್ಷಕ ಸಂಘದ ಪ್ರಾಥಮಿಕ ವಿಭಾಗದ ಅಧ್ಯಕ್ಷ ಉದಯರವಿ ಸ್ವಾಗತಿಸಿ ಪ್ರೌಢಶಾಲಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಶರಿಟಾ ನೊರೋನ್ಹ ವಂದಿಸಿದರು. ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಹೇಮಲತಾ ಮತ್ತು ಯಶಸ್ವಿನಿ ರಾವ್ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕರು ವಿದ್ಯಾರ್ಥಿಗಳ ದಾರಿದೀಪ : ಎನ್. ಸಿ. ಸಿ ಕಮಾಂಡಿಂಗ್ ಆಫೀಸರ್ ಎಸ್. ಜಿ. ಪ್ರಭು

0

 

‘ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಒಬ್ಬರು ಅಪ್ರತಿಮ ಶಿಕ್ಷಕರಾಗಿದ್ದರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷರಾಗಿದ್ದರು. ವಾಗ್ಮಿಯೂ, ತತ್ವಶಾಸ್ತ್ರಜ್ಞರಾಗಿದ್ದು, ಆಕ್ಸಫರ್ಡ್ ಯೂನಿವರ್ಸಿಟಿಯ ವಿಸಿಟಿಂಗ್ ಪ್ರೊಫೆಸರ್ ಆಗಿದ್ದು, ಮುಂದಕ್ಕೆ ಭಾರತದ ರಾಷ್ಟ್ರಪತಿಯಾದರು. ಅವರ ಆದರ್ಶವನ್ನು ಎಲ್ಲಾ ಶಿಕ್ಷಕರು ಇಂದು ಪಾಲಿಸುವ ಅವಶ್ಯಕತೆಯಿದೆ. ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಯಾವುದನ್ನೂ ಸಾಧಿಸಬಹುದು. ವಿದ್ಯಾರ್ಥಿದೆಸೆಯಲ್ಲಿ ಕಷ್ಟಪಟ್ಟರೆ ಮುಂದಿನ ಜೀವನ ಸುಖಮಯವಾಗುವುದರಲ್ಲಿ ಸಂದೇಹವಿಲ್ಲ. ಕೆ. ಎಮ್. ಎಸ್. ವಿದ್ಯಾಸಂಸ್ಥೆಯವರು ನನ್ನನ್ನು ಸನ್ಮಾನಿಸಿದ್ಫು ನನಗೆ ಅತೀವ ಸಂತೋಷವನ್ನು ತಂದುಕೊಟ್ಟಿದೆ.’ ಎಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್. ಜಿ. ಪ್ರಭುರವರು ಹೇಳಿದರು.

ಪ್ರೌಢಶಾಲಾ ಮುಖ್ಯಸ್ಥೆ ಶ್ರೀಮತಿ ಪ್ರಾಸ್ತವಿಕ ಭಾಷಣ ಮಾಡಿದರು. ಪ್ರಾಥಮಿಕ ಶಾಲಾ ಮುಖ್ಯಸ್ತೆ ಮಾತನಾಡಿ “ಎಸ್. ಜಿ. ಪ್ರಭುರವರು ನನ್ನ ಗುರುಗಳು ಎಂದು ಹೇಳಲು ನನಗೆ ಹೆಮ್ಮೆಯನಿಸುತಿದೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು ‘ ಎಂದರು.

ಕಾಲೇಜಿನ ಪ್ರಾಂಶುಪಾಲ ಕೆ. ಬಾಲಕೃಷ್ಣ ರಾವ್ ರವರು ಮಾತನಾಡಿ “ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅಪಾರ ದೇಶ ಭಕ್ತರಾಗಿದ್ದು, ಭಾರತದ ಶಿಕ್ಷಣದ ರಾಯಭಾರಿಯಾಗಿದ್ದರು. ಮೈಸೂರು ಬಿಟ್ಟು ಹೋದಾಗ, ಅವರನ್ನು ಮೈಸೂರಿನಿಂದ ರೈಲ್ವೆ ಸ್ಟೇಷನ್ನವರೆಗೆ ಸಾರೋಟ್ ನಲ್ಲಿ ಕುಳ್ಳಿರಿಸಿ, ವಿದ್ಯಾರ್ಥಿಗಳು ಸ್ವತಃ ತಾವೇ ಅವರು ಕೂತುಕೊಂಡಿದ್ದ ಸಾರೋಟನ್ನು ಎಳೆದುಕೊಂಡು ರೈಲ್ವೆ ಸ್ಟೇಷನ್ ರವರೆಗೆ ಹೋಗಿ ತಲುಪುವಂತೆ ಮಾಡಿದರು. ಇದು ವಿದ್ಯಾರ್ಥಿಗಳಿಗೆ ಅವರ ಮೇಲೆ ಇದ್ದ ಪ್ರೀತಿ, ವಿಶ್ವಾಸವನ್ನು ಗೌರವವನ್ನೂ ಸೂಚಿಸುತ್ತದೆ ‘ಎಂದರು.

ವಿಶ್ರಾಂತ ಪ್ರಾಂಶುಪಾಲ ಎಸ್. ಜಿ. ಪ್ರಭುರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು ಮತ್ತು ಅವರಿಗೆ ಸ್ಮರಣಿಕೆಯನ್ನು ನೀಡಲಾಯಿತು.

ದೀಕ್ಷಾ ಸ್ವಾಗತಿಸಿದರೆ ಅಕ್ಷತಾ ಧನ್ಯವಾದ ಸಮರ್ಪಣೆಗೈದರು.ಶೈಫಾ ಮತ್ತು ಅನಿಶ್ ಕಾರ್ಯಕ್ರಮ ನಿರ್ವಹಿಸಿದರು. ಎಲ್ಲಾ ಉಪನ್ಯಾಸಕರು, ಶಿಕ್ಷಕರು, ಕಚೇರಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ರೈಸ್ಟ್ ಕಿಂಗ್: ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ

0

ಸಾರ್ವಜನಿಕ ಶಿಕ್ಷಣ ಇಲಾಖೆ(ಪದವಿ ಪೂರ್ವ), ಕರ್ನಾಟಕ ಸರ್ಕಾರ ಹಾಗೂ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು ಇವುಗಳ ಆಶ್ರಯದಲ್ಲಿ ಪದವಿಪೂರ್ವ ವಿಭಾಗದ ಕಾರ್ಕಳ ತಾಲೂಕು ಮಟ್ಟದ ಹುಡುಗರ ಮತ್ತು ಹುಡುಗಿಯರ ವಿಭಾಗಗಳ ಫುಟ್ಬಾಲ್ ಪಂದ್ಯಾಟ ಗಾಂಧೀ ಮೈದಾನದಲ್ಲಿ ನಡೆಯಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಕಳ ಪುರಸಭೆಯ ಅಧ್ಯಕ್ಷರಾದ ಯೋಗೀಶ ದೇವಾಡಿಗ ಇವರು ದೀಪಬೆಳಗಿ ಪಂದ್ಯಾಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಚಾರ್ಯ ಲಕ್ಷ್ಮಿ ನಾರಾಯಣ ಕಾಮತ್ ಅವರು ಮಾತನಾಡಿ ‘ಕಲಿಕೆಯ ಜೊತೆಗೆ ಕ್ರೀಡಾ ಚಟುವಟಿಕೆಗಳ ಕಡೆಗೂ ಮಕ್ಕಳು ಮಹತ್ವ ನೀಡಬೇಕು, ಸೋತಾಗ ಕುಗ್ಗದೆ ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು’ ಎಂದು ಹೇಳಿದರು. ಅತಿಥಿಗಳಾಗಿದ್ದ ರಾಷ್ಟ್ರಮಟ್ಟದ ದೇಹದಾರ್ಡ್ಯ ಪಟು ಕಾರ್ಕಳದ ಪ್ರವೀಣ್ ದೇವಾಡಿಗ ಕ್ರೀಡಾಳುಗಳಿಗೆ ಶುಭ ಹಾರೈಸಿದರು.

ಸಂಸ್ಥೆಯ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ, ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ದಯಾನಂದ ಮಲೆಬೆಟ್ಟು, ಕೆಎಂಇಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್ಚಂದ್ರ ಹೆಗ್ಡೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಪ್ರಕಾಶ್ ನಾಯ್ಕ್ ಸ್ವಾಗತಿಸಿ ಲಾವಣ್ಯ ವಂದಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ದೀಪಕ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ರಸಾದ್ ಪಂದ್ಯಾಟ ಸಂಘಟಿಸಿದ್ದರು.

ಕಾರ್ಕಳ: ಕ್ರಿಯೇಟಿವ್ ಕಾಲೇಜಿನಲ್ಲಿ ಗುರುದೇವೋಭವ ಕಾರ್ಯಕ್ರಮ

0

 

ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ‘ಕ್ರಿಯೇಟಿವ್ ಗುರುದೇವೋಭವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜ್ಞಾನ ಜ್ಯೋತಿಯನ್ನು ಬೆಳಗಿ, ಡಾ. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.

ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ‘ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರ ಪಾತ್ರ ಇನ್ನಷ್ಟು ಮಹತ್ತರವಾಗಿದೆ. ವಿದ್ಯಾರ್ಥಿಗಳಲ್ಲಿ ಮೌಲ್ಯಗಳು, ಸಂಸ್ಕಾರ, ಶಿಸ್ತು ಹಾಗೂ ಮಾನವೀಯತೆ ಬೆಳೆಸುವುದು ಶಿಕ್ಷಕರ ಮಹತ್ತರ ಜವಾಬ್ದಾರಿ’ ಎಂದು ನುಡಿದರು.

ಗುರುವಂದನೆಯನ್ನು ಸ್ವೀಕರಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಲಾಯಿ ಬಾಕ್ಯಾರು, ತೆಳ್ಳಾರುವಿನ ಶಿಕ್ಷಕ ಕೆ. ಯೋಗೀಶ್ ಕಿಣಿ ಯವರು ಮಾತನಾಡಿ ‘ ಇಂದಿನ ಪೀಳಿಗೆಗೆ ಶಿಕ್ಷಕರು ಕೇವಲ ಪಾಠ ಬೋಧಕರು ಮಾತ್ರವಲ್ಲ, ಬಾಳಿನ ದಾರಿ ತೋರಿಸುವ ದೀಪಸ್ತಂಭರೂ ಆಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅನನ್ಯ’ ಎಂದು ಹೇಳಿದರು.

‘ಅಮ್ಮನ ನೆರವು ‘ ಚಾರಿಟೇಬಲ್ ಟ್ರಸ್ಟ್ (ರಿ) ಕಾರ್ಕಳ ಇಲ್ಲಿನ ಅಧ್ಯಕ್ಷರಾದ ಅವಿನಾಶ್ ಜಿ. ಶೆಟ್ಟಿಯವರು ‘ ಶಿಕ್ಷಕರ ಸೇವೆ ಶಾಶ್ವತ. ಅವರು ಬಿತ್ತುವ ಜ್ಞಾನ ಬೀಜ ಯಾವಾಗಲೂ ಫಲವನ್ನು ನೀಡುತ್ತದೆ. ಸಮಾಜದ ಪ್ರಗತಿಗೆ ಶಿಕ್ಷಕರು ಅವಿಭಾಜ್ಯ ಅಂಗ ‘ಎಂದು ಗುರುಗಳ ಸಮರ್ಪಣೆಯನ್ನು ಹೊಗಳಿದರು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಅಂಗಸಂಸ್ಥೆಯಾದ ತ್ರಿಶಾ ಪದವಿ ಪೂರ್ವ ಕಾಲೇಜು, ಕಲ್ಯಾಣಪುರ, ಉಡುಪಿಯ ಪ್ರಾಂಶುಪಾಲರಾಗಿರುವ ರಾಮಕೃಷ್ಣ ಹೆಗಡೆ, ಕಾಲೇಜಿನ ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಲೋಹಿತ್ ಎಸ್.ಕೆ, ರಸಾಯನಶಾಸ್ತ್ರ ಉಪನ್ಯಾಸಕರಾದ ಮಲ್ಲಿಕಾರ್ಜುನ ಜಿ. ರಾವ್, ಕನ್ನಡ ವಿಭಾಗ ಮುಖ್ಯಸ್ಥರಾದ ಶಿವಕುಮಾರ್ ರವರನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ‘ ಗುರುಗಳ ಗೌರವವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಅವರ ಮಾರ್ಗದರ್ಶನದಲ್ಲಿ ಕಲಿತು, ಸಮಾಜದ ಉತ್ತಮ ನಾಗರಿಕರಾಗಬೇಕು ‘ ಎಂಬ ಸಂದೇಶವನ್ನು ನೀಡಿದರು.

ಎಲ್ಲಾ ಉಪನ್ಯಾಸಕ ವರ್ಗದವರಿಗೆ ಸಂಸ್ಥೆಯ ವತಿಯಿಂದ ಸವಿನೆನಪಿನ ಉಡುಗೊರೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಸಪ್ತ ಸಂಸ್ಥಾಪಕರು, ಬೋಧಕ- ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಹಿಂದಿ ಭಾಷಾ ಉಪನ್ಯಾಸಕಿ ವೃಂದಾದಾತೆ ಯವರು ಉಪನ್ಯಾಸಕರ ಯಾದಿಯನ್ನು ಓದಿದರು. ಹಿಂದಿ ಭಾಷಾ ಮುಖ್ಯಸ್ಥ ವಿನಾಯಕ ಜೋಗ್ ರವರು ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಕಳ ಜ್ಞಾನಸುಧಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

0

 

ಇಂದಿನ ಬದುಕು ಒತ್ತಡದಲ್ಲಿರಲು ಕಾರಣ ಮನುಷ್ಯನಿಗೆ ತೃಪ್ತಿ ಇಲ್ಲದಿರುವುದೇ ಆಗಿದೆ. ನೆಮ್ಮದಿಯನ್ನು ಕಳಕೊಂಡ ಮನುಜ ತಾಳ್ಮೆ, ಸಹನೆಯ ಮನೋಭಾವವನ್ನು ಇಟ್ಟುಕೊಳ್ಳುವುದು ಮುಖ್ಯ. ವಿದ್ಯಾರ್ಥಿ ಜೀವನದಲ್ಲಿಯೇ ಸಾವಧಾನದ ಮನಸ್ಥಿತಿಯನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಗೌರವದ ಉಪಸ್ಥಿತಿಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯ ಎಂದು ಪಳ್ಳಿ ಸ.ಪ.ಪೂ.ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಸಂತ ಆಚಾರ್ ನುಡಿದರು.

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.

ಜ್ಞಾನಸುಧಾ ಒತ್ತಡರಹಿತವಾಗಿ ವಿದ್ಯಾರ್ಥಿಗಳ ಏಳಿಗೆಗೆ ತನ್ನ ಯೋಜನಾ ಬದ್ಧವಾದ ಶೈಕ್ಷಣಿಕ ಚಟುವಟಿಕೆಯನ್ನು ರೂಪಿಸಿಕೊಂಡು, ಮೌಲಿಕವಾದ ವಿಚಾರಧಾರೆಯನ್ನು ಪಸರಿಸುವ ಸಾಮಾಜಿಕ ಕಾರ್ಯಕ್ರಮಗಳ ಮುಖೇನ ಶೈಕ್ಷಣಿಕ ಕ್ಷೇತ್ರದಲ್ಲಿ ನಾಡಿನಲ್ಲಿ ಮಾದರಿಯಾಗಿ ನಿಂತಿದೆ ಎಂದರು.

ನಿವೃತ್ತರಾದ ಬೋಳಾದ ಶ್ರೀ ರಾಮಕೃಷ್ಣ ಅನುದಾನಿಕ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ಕೆಮ್ಮಣ್ಣು, ಬೆಳ್ಮಣ್ಣುವಿನ ಸ.ಪ್ರೌ.ಶಾಲೆಯ ಮುಖ್ಯ ಶಿಕ್ಷಕಿ ಸುಶೀಲಾ ಎನ್, ಎರ್ಲಪ್ಪಾಡಿಯ ಅನಂತಮತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎನ್. ವಿಷ್ಣುಮೂರ್ತಿ ಭಟ್, ತೆಳ್ಳಾರಿನ ಸ.ಪ್ರೌ.ಶಾಲೆಯ ಶಿಕ್ಷಕಿ ಅನುಪಮ ಚಿಪ್ಲೂಣಕರ್ ಹಾಗೂ ನಿಟ್ಟೆಯ ಎನ್.ಎಸ್.ಎ.ಎಂ ಆಂಗ್ಲಮಾಧ್ಯಮ ಪ್ರೌಢಶಾಲೆಯ ಗ್ರೆಟ್ಟಾ ಸಲ್ಡಾನ್ಹರವರನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಗೌರವಿಸಲಾಯಿತು.

ಗೌರವ ಸ್ವೀಕರಿಸಿದವರ ಪರವಾಗಿ ಬೋಳಾದ ಶ್ರೀ ರಾಮಕೃಷ್ಣ ಅನುದಾನಿಕ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ಕೆಮ್ಮಣ್ಣು ಹಾಗೂ ತೆಳ್ಳಾರಿನ ಸ.ಪ್ರೌ.ಶಾಲೆಯ ಶಿಕ್ಷಕಿ ಅನುಪಮ ಚಿಪ್ಲೂಣಕರ್ ಮಾತನಾಡಿದರು.

ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಮುಖ್ಯ ಅಭ್ಯಾಗತರಾದ ವಸಂತ್ ಆಚಾರ್‌ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರ್, ಉಪಪ್ರಾಂಶುಪಾಲರಾದ ಸಾಹಿತ್ಯ, ಉಷಾರಾವ್ ಯು, ಸಂಸ್ಥೆಯ ಹಿತೈಶಿಯಾದ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಸಾಹಿತ್ಯ ಸ್ವಾಗತಿಸಿ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್ ನಿರೂಪಿಸಿ ವಂದಿಸಿದರು.

ಕಾರ್ಕಳ‌ ಕಾಂಗ್ರೆಸ್ ಆಶ್ರಯದಲ್ಲಿ ನಾರಾಯಣಗುರು ಜಯಂತಿ

0

 

ಸಮಾಜದ ಶೋಷಿತ ವರ್ಗಗಳ ಬದುಕಿನ ಹೊಸ ಜೀವನೋತ್ಸಾಹದ ಮಾರ್ಗಾನ್ವೇಷಣೆಯೇ ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕಿನ ಹೋರಾಟದ ಗುರಿಯಾಗಿತ್ತುಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ ಚಂದ್ರಪಾಲ್ ನಕ್ರೆ ಅವರು ಬ್ಲಾಕ್ ಕಾಂಗ್ರೆಸ್ ಸಹಯೋಗದಲ್ಲಿ ಪಳ್ಳಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಳಿಕ ಮುಂದುವರಿಸಿ, ಆ ಹೋರಾಟದಲ್ಲಿ ಅಂಧ ಶ್ರದ್ಧೆಗಳ ನಿವಾರಣೆ, ಶೈಕ್ಷಣಿಕ ಸಾಮಾಜಿಕ ಸ್ವಾತಂತ್ರ್ಯ, ಬದುಕಿನ ಸ್ವಾಯತ್ತತೆ ಅಡಗಿತ್ತು. ಆ ನೆಲೆಯಲ್ಲಿ 1924 ರಲ್ಲಿ ಗುರುಗಳ ನೇತೃತ್ವದಲ್ಲಿ ನಡೆದ ವೈಖಂ ಚಳವಳಿ ಮಹಾತ್ಮ ಗಾಂಧೀಜಿಯವರ ಮನಗೆದ್ದದ್ದಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷ ಈ ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಂತೆ ಮಾಡಿತ್ತು. ಸ್ವಾತಂತ್ರ್ಯ ಹೋರಾಟದ ಕ್ವಿಟ್ ಇಂಡಿಯಾ ಚಳವಳಿಗೆ ಇದು ಸ್ಪೂರ್ತಿ ನೀಡಿತ್ತು ಎಂದರು.

ಹಿರಿಯ ನ್ಯಾಯವಾದಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ ಮಡಿವಾಳ ಮಾತನಾಡಿ ಜನಾಂಗೀಯ ಸಂಕುಚಿತತೆ, ದ್ವೇಷ, ಮತೀಯತೆ, ಅಸೂಯೆಗಳನ್ನು ಬದಿಗಿಟ್ಟು ಶೈಕ್ಷಣಿಕ ಔಧ್ಯೋಗಿಕ ಸಾಮಾಜಿಕ ಕ್ರಾಂತಿಯ ಮೂಲಕ ಸಮ ಸಮಾಜವನ್ನು ಕಟ್ಟಬೇಕೆನ್ನುವುದು ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯವಾಗಿತ್ತು. ಬಹು:ಶ ಕಾಂಗ್ರೆಸ್ ಪಕ್ಷ ತನ್ನ ಆಡಳಿತದಲ್ಲಿ ಗುರುಗಳ ಆಶಯವನ್ನು ಈಡೇರಿಸುತ್ತ ಬಂದಿರುವ ದೇಶದ ಏಕಮೇವ ಪಕ್ಷ ಎನ್ನುವುದು ಉಲ್ಲೇಖನೀಯ. ಬಡವರಿಗೆ ಕೊಡಮಾಡುವ ನಿವೇಶನ ಆಶ್ರಯ ಮನೆಗಳು, ವೃದ್ದಾಪ್ಯ, ವಿಧವಾ ವೇತನಗಳು, ಅನ್ನಭಾಗ್ಯ, ಪಂಚ ಗ್ಯಾರಂಟಿ ಯೋಜನೆಗಳು ನಾರಾಯಣ ಗುರುಗಳ ಮನದಾಶಯದ ಯೋಜನೆಗಳು. ಇವುಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಬಲಪಡಿಸೋಣ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದಾ ರಾವ್ ಬ್ರಹ್ಮಶ್ರೀ ನಾರಾಯಣ ಗುರುಗಳು ಸರ್ವ ಜನಾಂಗದ ಗುರು. ಅಜ್ಞಾನದ ಅಂಧಕಾರದಲ್ಲಿ ಮುಳುಗಿ ಹುಚ್ಚರ ಆಸ್ಪತ್ರೆಯಂತಿದ್ದ ಕೇರಳವನ್ನು ಇದೀಗ ದೇಶದಲ್ಲಿಯೇ ಅತೀ ಮುಂದುವರಿದ ಶೈಕ್ಷಣಿಕ ಕೇಂದ್ರವನ್ನಾಗಿ ಪರಿವರ್ತಿಸಿದ ನಾರಾಯಣ ಗುರುಗಳು ಶೈಕ್ಷಣಿಕ ಕ್ರಾಂತಿಯ ಹರಿಕಾರ. ಅವರು ಹಾಕಿಹೋದ ಮನುಕುಲದ ಅಭ್ಯುದಯದ ದಾರಿಯಲ್ಲಿ ನಡೆಯುವುದು ನಮ್ಮ ಕರ್ತವ್ಯ. ಆ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅವರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳನ್ನು ತನ್ನ ಆಡಳಿತದ ಜನಪರ ಚಿಂತನೆಯ ರಾಜಧರ್ಮವನ್ನಾಗಿ ಮಾಡಿಕೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ಹೇಳಿದರು.

ತಾಲೂಕು ಗ್ಯಾರಂಟಿ ‌ಸಮಿತಿ‌ ಅದ್ಯಕ್ಷ‌ ಅಜಿತ್ ಹೆಗ್ಡೆ ‌ಅವರು ಶ್ರೀ ನಾರಾಯಣ ಗುರುಗಳ ಬಗ್ಗೆ ಕೆಲ ಹಿತವಚನಗಳನ್ನು ನುಡಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಕೋಟ್ಯನ್, ರಾಜ್ಯ ಕೃಷಿ ಘಟಕದ ಕಾರ್ಯದರ್ಶಿ ಗ್ರಾಮ ಉಸ್ತುವಾರಿ ಉದಯ ಶೆಟ್ಟಿ ಕುಕ್ಕುಂದೂರು, ಮಹಿಳಾ ಕಾಂ ಅದ್ಯಕ್ಷೆ ಭಾನು ಬಾಸ್ಕರ ಪೂಜಾರಿ ಸಂಧರ್ಭೋಚಿತ ಮಾತಾಡಿದರು.ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು ವಿಶ್ವನಾಥ ಭಂಡಾರಿ ನಿಂಜೂರು, ಕಾರ್ಕಳ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಸೂರಜ್ ಶೆಟ್ಟಿ ನಕ್ರೆ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೋಗಿ, ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿಲ್ಸನ್ ಲೋಬೊ ಹಿರಿಯ ಕಾಂಗ್ರೆಸ್ಸಿಗ ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್ ಕೃಷಿ ಘಟಕದ ಅಧ್ಯಕ್ಷ ಸುಬ್ಬಯ್ಯ ಶೆಟ್ಟಿ ನಿಂಜೂರು, ಗ್ಯಾರಂಟಿ ಸಮಿತಿ ಸದಸ್ಯರಾದ ಸಂತೋಷ ಶೆಟ್ಟಿ ನಿಂಜೂರು, ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಆಚಾರ್ಯ ಪಳ್ಳಿ, ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸುಜೀತ್ ಪೂಜಾರಿ ನಿಂಜೂರು, ಪಳ್ಳಿ- ನಿಂಜೂರು ಬೂತ್ ಅಧ್ಯಕ್ಷರು, ಮಹಿಳಾ ಬೂತ್ ಅಧ್ಯಕ್ಷರು, ಯುವ ಬೂತ್ ಅಧ್ಯಕ್ಷರು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಪಳ್ಳಿ ಪಂಚಾಯತ್ ಸದಸ್ಯರಾದ ವಿಜಯ ಎಮ್ ಶೆಟ್ಟಿ ಪಳ್ಳಿ ಸ್ವಾಗತಿಸಿದರು, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ದಿನಕರ ಶೆಟ್ಟಿ ಧನ್ಯವಾದವಿತ್ತರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾರ್ಕಳ ಬ್ಲಾಕ್ ಮಾಜಿ ಅಧ್ಯಕ್ಷ ರಘುಶ್ಚಂದ್ರನಾಥ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಕಾರ್ಕಳ : ಫುಟ್ಬಾಲ್ ನಲ್ಲಿ ಜ್ಞಾನಸುಧಾ ತಂಡ ಜಿಲ್ಲಾಮಟ್ಟಕ್ಕೆ

0

 

ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದೆ.

ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಶ್ರೀ ನಾರಾಯಣಗುರು ಜಯಂತಿ ಆಚರಣೆ

0

 

ಕಾರ್ಕಳದ ಬಿಜೆಪಿ ಕಚೇರಿಯಲ್ಲಿ ಶ್ರೀ ನಾರಾಯಣ ಗುರು ಜಯಂತಿಯನ್ನು ಭಕ್ತಿ ಮತ್ತು ಗೌರವದಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ನವೀನ್ ನಾಯಕ್, ಉಪಾಧ್ಯಕ್ಷ ಅನಂತಕೃಷ್ಣ ಶೆಣೈ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಪ್ರಸಾದ್ ಐಸಿರ, ನಿರಂಜನ್ ಜೈನ್, ಪ್ರಶಾಂತ್ ಕೋಟ್ಯಾನ್, ಅಶೋಕ್ ಸುವರ್ಣ, ರಾಮಚಂದ್ರ ನಾಯಕ್, ರವೀಂದ್ರ ಮೊಯಿಲಿ, ಪ್ರಕಾಶ್ ರಾವ್, ಸುರೇಶ್ ಕಾಬೆಟ್ಟು, ಭಾರತಿ ಅಮೀನ್, ಮೀನಾಕ್ಷಿ ಗಂಗಾಧರ್, ನಗರ ಮಹಿಳಾ ಮೋರ್ಚಾದ ಅಧ್ಯಕ್ಷರು ಮತ್ತಿತರ ಪಕ್ಷದ ಪ್ರಮುಖರು,ಕಾರ್ಯಕರ್ತರು ಮತ್ತು ಸ್ಥಳೀಯರು ಭಾಗವಹಿಸಿ ಗುರುವರ್ಯರ ಸಾಮಾಜಿಕ ಸುಧಾರಣೆ ಹಾಗೂ ಸಮಾನತೆಗಾಗಿ ನೀಡಿದ ಅಮೂಲ್ಯ ಸೇವೆಯನ್ನು ಪುಷ್ಪಾರ್ಚನೆ ಗೈದು ಸ್ಮರಿಸಿದರು.

ಸಾಮಾಜಿಕ ಸುಧಾರಕ, ತತ್ವಜ್ಞಾನಿ ಹಾಗೂ ಧಾರ್ಮಿಕ ನಾಯಕರೆಂದು ಪ್ರಸಿದ್ಧರಾದ ಶ್ರೀ ನಾರಾಯಣ ಗುರುಗಳು, ವರ್ಣ ವ್ಯವಸ್ಥೆಯಿಂದ ಉಂಟಾದ ಅಸಮಾನತೆಗಳನ್ನು ವಿರೋಧಿಸಿ, ಹಿಂದುಳಿದ ಸಮುದಾಯಗಳ ಉದ್ಧಾರಕ್ಕಾಗಿ ಅವರು ಶ್ರಮಿಸಿದರು. “ಒಂದು ಜಾತಿ, ಒಂದು ಧರ್ಮ, ಒಂದು ದೇವರು ಎಲ್ಲರಿಗೂ” ಮಾನವೀಯ ಏಕತೆ ಹಾಗೂ ಸಾಮರಸ್ಯದ ಸಂದೇಶವನ್ನು ಸಾರಿದ್ದರು. ಅವರು ಎಲ್ಲರಿಗೂ ಪ್ರವೇಶಿಸಬಹುದಾದ ದೇವಾಲಯಗಳನ್ನು ಸ್ಥಾಪಿಸಿದರು ಹಾಗೂ ಶಿಕ್ಷಣದ ಮೂಲಕ ಸಮುದಾಯದ ಶಕ್ತಿಯನ್ನು ಹೆಚ್ಚಿಸಲು ಕಾರ್ಯನಿರ್ವಹಿಸಿದರು. ಅವರ ಸೇವೆ ಇಂದು ಕೂಡ ಸಾಮಾಜಿಕ ನ್ಯಾಯದ ಚಳವಳಿಗಳಿಗೆ ಮಾರ್ಗದರ್ಶಿಯಾಗಿದೆ.

ಈ ಕಾರ್ಯಕ್ರಮವು ಸಾಮಾಜಿಕ ಸಮಾನತೆ, ಒಗ್ಗಟ್ಟು ಹಾಗೂ ಸಹಿಷ್ಣುತೆಯನ್ನು ಪ್ರತಿಬಿಂಬಿಸಿತು. ಶ್ರೀ ನಾರಾಯಣ ಗುರುವರ್ಯರ ಜೀವನ ಸಂದೇಶವನ್ನು ಮುಂದುವರಿಸಲು ಎಲ್ಲರಿಗೂ ಪ್ರೇರಣೆ ನೀಡುವಂತಾಯಿತು ಎಂದು ಕಾರ್ಕಳ ಬಿಜೆಪಿ ಕಚೇರಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಕಳ:’ಹೋಟೆಲ್ ಕಾರ್ಕಳ ಇನ್’ ಬಾರ್ ಅಂಡ್ ರೆಸ್ಟೋರೆಂಟ್ ಶುಭಾರಂಭ

0

ಕಾರ್ಕಳ:’ಹೋಟೆಲ್ ಕಾರ್ಕಳ ಇನ್’ ಬಾರ್ ಅಂಡ್ ರೆಸ್ಟೋರೆಂಟ್ ಶುಭಾರಂಭ

ಕಾರ್ಕಳ:ಕಾರ್ಕಳದ ಪುಲ್ಕೇರಿ ಬೈಪಾಸ್ ಜಂಕ್ಷನ್ ನಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ‘ಹೋಟೆಲ್ ಕಾರ್ಕಳ ಇನ್’ ಬಾರ್ ಅಂಡ್ ರೆಸ್ಟೋರೆಂಟ್ ಸೆ.6ರಂದು ಶುಭಾರಂಭಗೊಳ್ಳಲಿದೆ.

ಅತ್ಯುತ್ತಮವಾದ ಸೇವೆ ಹಾಗೂ ಖಾದ್ಯದ ಮೂಲಕ ಗ್ರಾಹಕರ ಸೇವೆಗೆ ತಯಾರಾಗಿರುವ ಅನಘ ಗ್ರಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ.

ಕ್ಯಾಬಿನ್,ಹವಾನಿಯಂತ್ರಿತ ಕ್ಯಾಬಿನ್,ಫ್ಯಾಮಿಲಿ ಕ್ಯಾಬಿನ್ ಪ್ರತ್ಯೇಕ ವ್ಯವಸ್ಥೆ ಹಾಗೂ ಸಭೆ ಸಮಾರಂಭ ಮತ್ತು ಪಾರ್ಟಿಯ ವ್ಯವಸ್ಥೆಗೆ ಪಾರ್ಟಿ ಹಾಲ್ ಹಾಗೂ ಓಪನ್ ಗಾರ್ಡನ್ ಸೌಲಭ್ಯವಿರುತ್ತದೆ. ಲಿಫ್ಟ್ ಹಾಗೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ
ಕೆಳ ಅಂತಸ್ತಿನಲ್ಲಿ ಬಾರ್ ಕೌಂಟರ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪುತ್ತೂರು: ಅತ್ಯಾಚಾರ, ವಂಚನೆ ಪ್ರಕರಣ: ಬಿಜೆಪಿ ನಾಯಕನ ಪುತ್ರನಿಗೆ ಹೈಕೋರ್ಟ್‌‌ನಿಂದ ಜಾಮೀನು

0

ಪುತ್ತೂರು: ಅತ್ಯಾಚಾರ, ವಂಚನೆ ಪ್ರಕರಣ: ಬಿಜೆಪಿ ನಾಯಕನ ಪುತ್ರನಿಗೆ ಹೈಕೋರ್ಟ್‌‌ನಿಂದ ಜಾಮೀನು

ನಂಬಿಸಿ, ಅಕ್ರಮ ದೈಹಿಕ ಸಂಬಂಧ ಬೆಳೆಸಿ ಸಹಪಾಠಿ ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿ ಮಾಡಿ ಮದುವೆಯಾಗಲು ನಿರಾಕರಿಸಿ ವಂಚಿಸಿರುವ ಆರೋಪದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಬಪ್ಪಳಿಗೆಯ 21 ವರ್ಷದ ಶ್ರೀಕೃಷ್ಣ ಜೆ ರಾವ್‌ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ನ್ಯಾಯಾಲಯದಲ್ಲಿ ಜಾಮೀನಿಗೆ ಸಂಬಂಧಿಸಿದ ಭದ್ರತೆ ಮತ್ತಿತರ ಪ್ರಕ್ರಿಯೆಗಳನ್ನು ಸೆ.4ರಂದು ಪೂರ್ಣಗೊಂಡ ನಂತರ ಗುರುವಾರ ಶ್ರೀಕೃಷ್ಣ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಪೊಲೀಸರ ಪ್ರಕಾರ, ಬಿಜೆಪಿ ನಾಯಕ ಜಗನ್ನಿವಾಸ ರಾವ್ ಅವರ ಮಗನಾಗಿರುವ ಆರೋಪಿ, 21 ವರ್ಷದ ಮಹಿಳೆಗೆ ಮದುವೆ ಭರವಸೆ ನೀಡಿದ ನಂತರ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ. ಆಕೆ ಗರ್ಭಿಣಿಯಾದಾಗ, ಆಕೆಯನ್ನು ಮದುವೆಯಾಗಲು ಅವನು ನಿರಾಕರಿಸಿದನೆಂದು ಆರೋಪಿಸಲಾಗಿದೆ.

ಇದರ ನಂತರ, ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಅವನ ವಿರುದ್ಧ ಅತ್ಯಾಚಾರ ಮತ್ತು ವಿಶ್ವಾಸ ದ್ರೋಹದ ಪ್ರಕರಣ ದಾಖಲಾಗಿತ್ತು.