ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆ ಅಡಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಹಾಲಿ ಇರುವ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಪೈಪ್ ಲೈನ್ ಅಳವಡಿಕೆಗಾಗಿ ಕಾರ್ಕಳ ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಅಗೆದು ಪೈಪ್ ಲೈನ್ ಕಾಮಗಾರಿಯನ್ನು ನಡೆಸಲಾಗಿತ್ತು. ಸದರಿ ಪೈಪ್ ಲೈನ್ ಅಳವಡಿಕೆ ಕಾಮಗಾರಿಯಿಂದ ಕಾರ್ಕಳಪೇಟೆಯ ಅನಂತಶಯನ ತಳ್ಳಾರು ರಸ್ತೆ, ಮುಖ್ಯ ರಸ್ತೆ, ಕೋರ್ಟ್ ರಸ್ತೆ, ಬಂಡಿಮಠ, ಪೆರ್ವಾಜೆಯ ರಸ್ತೆಗಳು ಸೇರಿದಂತೆ ಪ್ರಮುಖ ಭಾಗಗಳಲ್ಲಿ ರಸ್ತೆ ಹಾಳಾಗಿದ್ದು ಸಾರ್ವಜನಿಕ ಸಂಚಾರಕ್ಕೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತುಂಬಾ ತೊಂದರೆಯಾಗಿದ್ದು, ಪೈಪ್ ಲೈನ್ ಅಳವಡಿಕೆ ಕಾಮಗಾರಿ ಮುಗಿದಿರುವುದರಿಂದ ಕೂಡಲೇ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಹಾಳಾಗಿರುವ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಇಂದು ನಡೆದ ಸಭೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಅವರಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಇಲಾಖಾ ಅಧಿಕಾರಿಗಳು ಪ್ರಸ್ತುತ ರಾಮಸಮುದ್ರ ರಸ್ತೆ ಕಾಮಗಾರಿ ಚಾಲ್ತಿಯಲ್ಲಿದ್ದು, ಆ ಕಾಮಗಾರಿ ಮುಗಿದ ತಕ್ಷಣ ಅನಂತಶಯನ ತೆಳ್ಳಾರು ರಸ್ತೆ ಕಾಮಗಾರಿಯನ್ನು ಇನ್ನು ಎರಡು ದಿನಗಳಲ್ಲಿ ಆರಂಭಿಸಲಾಗುವುದು ಹಾಗೂ ಉಳಿದ ರಸ್ತೆ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ಆರಂಭಿಸಿ ಆದಷ್ಟು ಶೀಘ್ರವಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ, ಕಾರ್ಕಳ ಪುರಸಭೆಯ ಅಧಿಕಾರಿಗಳು ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






