ಸಮುದಾಯದ ಅಭಿವೃದ್ಧಿಗೆ ಶ್ರಮವಹಿಸುವೆ : ಮುದ್ರಾಡಿ ಮಂಜುನಾಥ ಪೂಜಾರಿ
ಹಿಂದುಳಿದ ವರ್ಗಗಳು ಸಮಾಜದಲ್ಲಿ ಮುಂದೆ ಬರಬೇಕು ಎಂಬ ಮಹತ್ವದ ಉದ್ದೇಶವಿಟ್ಟು ಸಿದ್ಧರಾಮಯ್ಯ ಸರ್ಕಾರ ಕೆಲಸ ಮಾಡುತ್ತಿದೆ. ಅದಕ್ಕಾಗಿ ಎಲ್ಲರ ಸಹಕಾರದಲ್ಲಿ ನಾರಾಯಣಗುರು ಅಭಿವೃದ್ಧಿ ನಿಗಮದ ಮೂಲಕ ಸಮುದಾಯದ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಸಮುದಾಯದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಸಮಾಜದ ಮುಖಂಡರಾದ ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ವತಿಯಿಂದ ಸಂಘದ ವತಿಯಿಂದ ಸಂಘದ ವಠಾರದಲ್ಲಿ ಶನಿವಾರ ಹೆಬ್ರಿ ಬೈದರಬೆಟ್ಟು ವಸಂತಿ ಪೂಜಾರಿ ವೇದಿಕೆಯಲ್ಲಿ ನಡೆದ ಸಾಧಕರ ಸನ್ಮಾನ ಮತ್ತು ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಿಲ್ಲವ ಸಮಾಜದ ನಾವು ಸಮಾಜಮುಖಿಯಾಗಿ ಸಹಬಾಳ್ವೆಯಿಂದ ಎಲ್ಲರೊಂದಿಗೂ ಹೆಜ್ಜೆ ಹಾಕಿ ಜೀವನ ನಡೆಸಬೇಕು, ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡು ಸದೃಡವಾಗಿ ಜೀವನ ನಡೆಸಬೇಕು, ಎಲ್ಲರೂ ಶಿಕ್ಷಣ ಪಡೆದು ಉದ್ಯಮಗಳನ್ನು ಸ್ಥಾಪಿಸಿ ಉದ್ಯೋಗದಾತರಾಗಬೇಕು. ಆ ಮೂಲಕ ಸಮಾಜವನ್ನು ಮುನ್ನಡೆಸಬೇಕು. ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಮಂಜುನಾಥ ಪೂಜಾರಿ ತಿಳಿಸಿದರು.
ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ ಹೆಬ್ರಿಯ ನಾರಾಯಣಗುರು ಸೇವಾ ಸಂಘವು ನಿರಂತರವಾಗಿ ಸಮುದಾಯದ ಮತ್ತು ಬಡವರ ಸೇವೆಯನ್ನು ಮಾಡುತ್ತ ಬಂದಿದೆ. ಬೇಳಂಜೆ ಹರೀಶ ಪೂಜಾರಿ ನೇತ್ರತ್ವದಲ್ಲಿ ಸಂಘದ ಮೂಲಕ ಮನುಕುಲದ ಸೇವೆ ನಡೆಯಲಿ. ಹೆಬ್ರಿ ಸಂಘದ ಮೂಲಕ ಸಹಕಾರಿ ಸಂಘ ಸ್ಥಾಪನೆ ಅತ್ಯುತ್ತಮ ಕಾರ್ಯ. ಶಿಕ್ಷಣಕ್ಕೆ ಒತ್ತು ನೀಡುವ ಕಾರ್ಯ ನಡೆಯಲಿ. ಮೆಡಿಕಲ್ ಕಾಲೇಜು ಸೇರಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಕಾರ್ಯ ಬಿಲ್ಲವ ಸಮಾಜದಿಂದ ನಡೆಯಲಿ ಎಂದು ಆಶಿಸಿ ಸಂಘಕ್ಕೆ ಸರ್ಕಾರ ನೆರವು ದೊರೆಯಲು ಸಹಕಾರ ನೀಡುವುದಾಗಿ ತಿಳಿಸಿದರು.
ಹೆಬ್ರಿಯಲ್ಲಿ ಸಹಕಾರಿ ಸಂಘದ ಸ್ಥಾಪನೆ : ಬೇಳಂಜೆ ಹರೀಶ ಪೂಜಾರಿ
ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಅಧ್ಯಕ್ಷರಾಗುವ ಮೂಲಕ ಸಮುದಾಯದ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಸಂಘಕ್ಕೆ ಹವಾನಿಯಂತ್ರಿತ ಹಾಲ್ ಸೇರಿ ಇನ್ನುಳಿದ ಅವಶ್ಯಕತೆಗಳನ್ನು ಪೂರೈಸುವ ಕಾರ್ಯವನ್ನು ನಡೆಸುತ್ತೇವೆ. ಸಮಗ್ರ ಅಭಿವೃದ್ಧಿಗೆ ಸರ್ವರೂ ನನ್ನೊಂದಿಗೆ ಕೈಜೋಡಿಸಿ ನೆರವು ನೀಡಬೇಕು, ಸರ್ಕಾರ ನೆರವು ಪಡೆಯಲು ಎಲ್ಲಾ ನಾಯಕರು ಸಹಕಾರ ನೀಡಬೇಕು. ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುತ್ತೇವೆ. ಬಡವರ ಸೇವೆಯನ್ನು ಕೂಡ ಮಾಡುತ್ತೇವೆ. ಮಂಜುನಾಥ ಪೂಜಾರಿಯವರು ನಮ್ಮ ಸಮುದಾಯದ ಅಧ್ಯಕ್ಷರಾಗುವ ಮೂಲಕ ನಮ್ಮೂರಿಗೆ ಹೆಮ್ಮೆ ತಂದು ರಾಜ್ಯದ ನಾಯಕರಾಗಿ ಬೆಳೆಯುತ್ತಿರುವುದು ಸಂತೋಷ ತರುತ್ತಿದೆ ಅಭಿನಂದಿಸಿದರು. ಸಂಘದ ಮತ್ತು ಸಮುದಾಯದ ಅಭಿವೃದ್ಧಿಯ ಜೊತೆಗೆ ಹೆಬ್ರಿಯಲ್ಲಿ ಬಿಲ್ಲವ ಸಮಾಜದ ಸಹಕಾರ ಬ್ಯಾಂಕ್ ಸ್ಥಾಪಿಸುವ ಕನಸು ಹೊಂದಿದ್ದೇನೆ ಎಂದು ಬೇಳಂಜೆ ಹರೀಶ ಪೂಜಾರಿ ತಿಳಿಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ವಿಶೇಷ ಸಾಧನೆ ಮಾಡಿ ಪ್ರಥಮ ಸ್ಥಾನ ಪಡೆದ ಬಸ್ ಕಂಡಕ್ಟರ್ ಮಗ ಪ್ರೀತಂ ಜಿ. ಪೂಜಾರಿ ಅವರಿಗೆ ವಿಶೇಷ ಅಭಿನಂದನೆ ನಡೆಯಿತು. ಹೆಬ್ರಿ ಗ್ರಾಮ ಪಂಚಾಯಿತಿ ಪೂರ್ವಾಧ್ಯಕ್ಷ ತಾರನಾಥ ಎಸ್. ಬಂಗೇರ, ಸಮಾಜಸೇವಕ ಕುಚ್ಚೂರು ಶ್ರೀಕಾಂತ್ ಪೂಜಾರಿ ಸೇರಿ ಬಿಲ್ಲವ ಸಮಾಜದ ಹೆಬ್ರಿ ಪರಿಸರದ ೧೮ ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಆರೋಗ್ಯಕ್ಕೆ ಸಹಾಯಧನ ಮತ್ತು ಸೇವಾ ಕಾರ್ಯಕ್ರಮ ನಡೆಯಿತು.
ಬೆದ್ರ ಪಿಂಗಾರ ಕಲಾವಿದರಿಂದ” ಓಂಕಾರ ” ಹಾಸ್ಯಮಯ ತುಳು ನಾಟಕ ಪ್ರದರ್ಶನ ನಡೆಯಿತು. ಸಮುದಾಯದ ಹಿರಿಯರಾದ ಹೆಬ್ರಿಯ ಶೀನ ಪೂಜಾರಿ, ಹೆಬ್ರಿಯ ಉದ್ಯಮಿ ಪ್ರವೀಣ್ ಬಲ್ಲಾಳ್ ಹೆಬ್ರಿ, ಹೆಬ್ರಿ ಗ್ರಾಮ ಪಂಚಾಯಿತಿ ಪೂರ್ವಾಧ್ಯಕ್ಷ ತಾರಾನಾಥ ಬಂಗೇರ, ಮೂಡಬಿದರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ.ಸುಲತಾ ಹೆಬ್ರಿ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ಮುನಿಯಾಲಿನ ಮಂಜುನಾಥ ಪೂಜಾರಿ, ಬೆಳ್ವೆ ವಲಯದ ರಾಜು ಪೂಜಾರಿ, ಶಿವಪುರದ ದಿವಾನಂದ ಸಾಲಿಯಾನ್, ಹೆಬ್ರಿ ಸಂಘದ ಗೌರವಾಧ್ಯಕ್ಷ ಅಣ್ಣಪ್ಪ ಪೂಜಾರಿ ಹೆಬ್ರಿ, ಕಾರ್ಯದರ್ಶಿ ಸಂತೋಷ ಪೂಜಾರಿ ಬಲ್ಲಾಡಿ, ಕೋಶಾಧಿಕಾರಿ ರತ್ನಾಕರ ಪೂಜಾರಿ ಕುಚ್ಚೂರು, ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ಪೂಜಾರಿ, ಕಾರ್ಯದರ್ಶಿ ಹೇಮಾವತಿ ಪೂಜಾರಿ, ಯುವ ಘಟಕದ ಅಧ್ಯಕ್ಷ ಪ್ರವೀಣ್ ಪೂಜಾರಿ, ಕಾರ್ಯದರ್ಶಿ ಸುನೀಲ್ ಪೂಜಾರಿ, ವಿವಿಧ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
ಪ್ರಕಾಶ ಪೂಜಾರಿ ಮಾತಿಬೆಟ್ಟು ಮತ್ತು ಆನಂದ ಪೂಜಾರಿ ಸೋಮೇಶ್ವರ ನಿರೂಪಿಸಿದರು. ಹರೀಶ ಪೂಜಾರಿ ಸ್ವಾಗತಿಸಿದರು.


























