ಬಿಜೆಪಿಯ ಪರಂಪರಾನುಗತ ಅಧಿಕಾರ ದಾಹದ ಷಢ್ಯಂತ್ರಕ್ಕೆ ಮೂಡ ಪ್ರಕರಣ ಸಾಕ್ಷಿ-ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ
ಸಾಮಾಜಿಕ ನ್ಯಾಯದ ಹರಿಕಾರ ಸಿದ್ಧರಾಮಯ್ಯನವರ ತೇಜೋವಧೆ ಮಾಡಿ ರಾಜ್ಯದ ಕಾಂಗ್ರೆಸ್ ಪಕ್ಷದ ಸರಕಾರವನ್ನು ಅತಂತ್ರಗೊಳಿಸುವ ಬಿಜೆಪಿಯ ಪರಂಪರಾನುಗತ ಅಧಿಕಾರ ದಾಹದ ಷಢ್ಯಂತ್ರಕ್ಕೆ ಮೂಡ ಪ್ರಕರಣ ಸಾಕ್ಷಿಯಾಗಿದೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂಡಾ ಪ್ರಕರಣವನ್ನು ಬಳಸಿಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಇಳಿಸಿ ಕಾಂಗ್ರೆಸ್ ಪಕ್ಷದಲ್ಲಿ ಆಂತರೀಕ ಗೊಂದಲ ಸೃಷ್ಢಿಸಿ ಅಧಿಕಾರಕ್ಕೆ ಬರುವ ರಾಜ್ಯ ಬಿಜೆಪಿಯ ವ್ಯರ್ಥ ಹುನ್ನಾರದ ಹಿಂದೆ ಕೇಂದ್ರದ ವ್ಯವಸ್ಥಿತ ಕೈವಾಡವಿದೆ. ಇದಕ್ಕೆ ಹರ್ಯಾಣದ ಸೋನಿಪತ್ ನಲ್ಲಿ ಪ್ರಧಾನಿ ಮೋದಿ ರಾಜ್ಯದ ಮೂಡ ಪ್ರಕರಣವನ್ನು ಉಲ್ಲೇಖಿಸಿ ಮಾಡಿದ ಚುನಾವಣಾ ಪ್ರಚಾರ ಭಾಷಣವನ್ನು ಒಂದು ಉದಾಹರಣೆಯಾಗಿದೆ. ಅಪರಾದ ಸಾಬೀತಾಗದೆ ಕಾಂಗ್ರೆಸ್ ಪಕ್ಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಾತನಾಡಿರುವುದು ಎಷ್ಟು ಸರಿ ಎನ್ನುವುದು ಉಲ್ಲೇಖನೀಯ ಎಂದು ಹೇಳಿದ್ದಾರೆ.
ಕಳೆದ ತನ್ನ 10 ವರ್ಷಗಳ ಆಡಳಿತಾವಧಿಯಲ್ಲಿ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳ 10ಕ್ಕೂ ಹೆಚ್ಚು ವಿರೋಧ ಪಕ್ಷಗಳ ಚುನಾಯಿತ ಸರಕಾರಗಳನ್ನು ಬೀಳಿಸಿದ, ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿ 400ಕ್ಕೂ ಅಧಿಕ ಕಾಂಗ್ರೆಸ್ ಹಾಗೂ ಅನ್ಯಪಕ್ಷಗಳ ಶಾಸಕರನ್ನು ತನ್ನ ಪಕ್ಷಕ್ಕೆ ಪಕ್ಷಾಂತರಿಸಿದ, ರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದ ಭ್ರಷ್ಠಾಚಾರಿಗಳೆಂದು ಪ್ರಕರಣ ದಾಖಲಿಸಿಕೊಂಡವರಿಗೆ ಅಧಿಕಾರದ ಹುದ್ಧೆಕೊಟ್ಟು ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸಿದವರಿಗೆ ಅದು ದೇಶದ ಪ್ರಧಾನಿಗಾಗಲಿ, ಬಿಜೆಪಿಯ ಯಾವುದೇ ನಾಯಕನಿಗಾಗಲಿ ಮೂಡಾ ಪ್ರಕರಣದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಸಿದ್ಧರಾಮಯ್ಯನವರ ಮೇಲಿನ ಅಪವಾಧ ವಾಸ್ತವತೆ ತನಿಖೆಯಿಂದ ಹೊರಬರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.