ಬಡವರ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಿ ಬಡ ಜನರಿಗೆ ಕಾಂಗ್ರೆಸ್ ಸರ್ಕಾರ ದ್ರೋಹ
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿನಿಂದ ಒಂದಲ್ಲ ಒಂದು ರೀತಿಯಲ್ಲಿ ವಿವಾದವನ್ನೇ ಮಾಡಿಕೊಂಡು ಬರುತಿದ್ದು, ಇದೀಗ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡುವ ಮೂಲಕ ಬಡವರ ಹೊಟ್ಟೆಗೆ ಹೊಡೆಯಲು ಹೊರಟಿರುವುದು ವಿಷಾದನೀಯ.
ಸರ್ಕಾರವು ಕಾರ್ಕಳ ಮತ್ತು ಹೆಬ್ರಿ ತಾಲೂಕಿನ 7911 ಪಡಿತರ ಚೀಟಿ ರದ್ದತಿಗೆ ಮುಂದಾಗಿದ್ದು, ಕಾರ್ಕಳ ಭಾರತೀಯ ಜನತಾ ಪಾರ್ಟಿಯು, ಬಡವರಿಗೆ ಅನ್ಯಾಯ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಿಲುವನ್ನು ಖಡಾ ಖಂಡಿತವಾಗಿ ಖಂಡಿಸುತ್ತದೆ. ಒಂದು ಕಡೆಯಿಂದ ರಾಜ್ಯದ ಜನತೆಗೆ ಸರಿಯಾಗಿ ಗ್ಯಾರಂಟಿ ಯೋಜನೆಗಳನ್ನು ಕೊಡದೆ ಸತಾಯಿಸುತ್ತಿರುವ ಸರ್ಕಾರ, ಇನ್ನೊಂದು ಕಡೆ ಪಡಿತರ ಚೀಟಿಯನ್ನು ರದ್ದು ಮಾಡುವ ಮೂಲಕ ಜನತೆಗೆ ಬಹುದೊಡ್ಡ ಮೋಸ ಮಾಡಲು ಹೊರಟಿದೆ.
ರಾಜ್ಯದ ಸ್ವತಃ ಮುಖ್ಯಮಂತ್ರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿದ್ದು ಸಚಿವ ಸಂಪುಟದ ಬಹುತೇಕ ಸಚಿವರುಗಳು ಒಂದಲ್ಲ ಒಂದರಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಪದೇಪದೇ ನಮ್ಮದು ಬಡವರ ಪರ ಸರ್ಕಾರ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಪಾಲಿಗೆ ವರದಾನವಾಗಿದ್ದ ಬಿಪಿಎಲ್ ಕಾರ್ಡ್ ಅನ್ನು ಕ್ಷುಲ್ಲಕ ಕಾರಣಗಳನ್ನು ನೀಡಿ ರದ್ದುಪಡಿಸಲು ಹೊರಟಿರುವುದು ವಿಷಾದನೀಯ.
ಬಿಪಿಎಲ್ ಕಾರ್ಡುದಾರರಿಗೆ ಅನ್ನಭಾಗ್ಯವಲ್ಲದೆ ಇತರ ಅನೇಕ ಸರ್ಕಾರದ ಸವಲತ್ತುಗಳಿಗೆ ಬಿಪಿಎಲ್ ಕಾರ್ಡೇ ಮಾನದಂಡವಾಗಿದ್ದು, ಇದರ ಆಧಾರದಲ್ಲಿ ರಾಜ್ಯದಲ್ಲಿ ಲಕ್ಷಾಂತರ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇನ್ನು ಮುಂದೆ ಪಡಿತರ ಚೀಟಿ ರದ್ದಾದಲ್ಲಿ ಬಡ ಮಕ್ಕಳು ಗುಣಮಟ್ಟದ ವಿದ್ಯಾಭ್ಯಾಸದಿಂದ ವಂಚಿತರಾಗಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಕೇಂದ್ರ ಸರ್ಕಾರದ ಆಯುಷ್ಮಾನ್ ಆರೋಗ್ಯ ಯೋಜನೆಯ ಮೂಲಕ ಬಡವರಿಗೆ ಹೃದಯ ಸಂಬಂಧಿ ಹಾಗೂ ಇನ್ನಿತರ ಗಂಭೀರ ಖಾಯಿಲೆಗಳು ಬಂದಾಗ ಈ ಯೋಜನೆಯಿಂದ ಬಹಳಷ್ಟು ಅನುಕೂಲವಾಗುತ್ತಿದೆ.
ಈ ಯೋಜನೆಯ ಅನುಕೂಲವನ್ನು ಪ್ರಸ್ತುತ ಲಕ್ಷಾಂತರ ಬಡ ಜನರು ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ತೆತ್ತು ಚಿಕಿತ್ಸೆ ಪಡೆಯುವುದೇ ಕಷ್ಟಕರ. ಇಂತಹ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಪಡಿತರ ಚೀಟಿ ರದ್ದು ಮಾಡಲು ಹೊರಟಿರುವುದು, ಹೇಳುವುದೊಂದು, ಮಾಡುವುದು ಇನ್ನೊಂದು ಎಂಬ ಗಾದೆಯಂತಿದೆ. ಸರ್ಕಾರದ ಈ ನಿಲುವಿನಿಂದ ರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ ಬಡವರು ಇಂತಹ ಜನಪರ ಯೋಜನೆಯಿಂದ ವಂಚಿತರಾಗಲಿದ್ದಾರೆ. ಸರ್ಕಾರದಿಂದ ಬಡವರಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ.
ಸರ್ಕಾರ ಪಡಿತರ ಚೀಟಿ ರದ್ದು ಮಾಡಲು ಮುಂದಾಗಿರುವ ನಿರ್ಧಾರವನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಕಾರ್ಕಳ ಭಾರತೀಯ ಜನತಾ ಪಾರ್ಟಿಯ ಕ್ಷೇತ್ರ ಅಧ್ಯಕ್ಷರಾದ ನವೀನ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.