ಜನಪರ ಕೆಲಸ ಮಾಡುವ ಪ್ರಾಮಾಣಿಕ ಅಧಿಕಾರಿಗಳ ಜೊತೆ ಕಾರ್ಕಳದ ಜನತೆ ಇದೆ
ಶಾಸಕರು ಮೊದಲು ತಾವು ಶಿಷ್ಟಾಚಾರವನ್ನು ಪಾಲಿಸಲಿ ಶುಭದ ರಾವ್
ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಸಹಾಯಕ ಅಧಿಕಾರಿಗಳ ಮೇಲೆ ದರ್ಪ ತೋರುವ ಮೂಲಕ ಸುನೀಲ್ ಕುಮಾರ್ ತನ್ನ ವೈಫಲ್ಯವನ್ನು ಸಭೆಯಲ್ಲಿ ತೆರೆದಿಟ್ಟಿದ್ದಾರೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸುನಿಲ್ ಕುಮಾರ್,ರವರು ಯಾವುದೊ ವಾಟ್ಸಪ್ ಯೂನಿವರ್ಸಿಟಿಯ ಫೋಟೋವನ್ನು ಹಿಡಿದು ನನ್ನ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳ ವಿರುದ್ಧ ದರ್ಪ ತೋರಿರುವುದು ಇದು ಅವರ 21 ವರ್ಷಗಳ ಶಾಸಕತ್ವದ ಅಹಂಕಾರವನ್ನು ತೋರಿಸುತ್ತದೆ. ಕಾರ್ಕಳ ವಿಧಾನಸಭಾ ಕ್ಷೇತ್ರದ ನೂರಾರು ಮಂದಿ ಸಾರ್ವಜನಿಕರು ಹಕ್ಕು ಪತ್ರಗಳಿಗಾಗಿ ಶಾಸಕರ ಕಚೇರಿಗೆ ಅಲೆದಾಡುವುದು ಇದು ಕಾರ್ಕಳದ ನಾಗರಿಕರ ದಿನನಿತ್ಯದ ಗೋಳಾಗಿದೆ. ಕಾರ್ಕಳದಲ್ಲಿ ಎರಡು ದಶಕಗಳಿಂದ ಅಧಿಕಾರದಲ್ಲಿರುವ ಸುನಿಲ್ ಕುಮಾರ್ ಅವರು ಬಡವರ ಕೆಲಸಗಳನ್ನು ಮಾಡಿಕೊಡದೆ ಬಡವರನ್ನು ದಿನನಿತ್ಯ ತನ್ನ ಕಚೇರಿಗೆ ಅಲೆದಾಡುವಂತೆ ಮಾಡಿರುವುದು ಅಕ್ಷಮ್ಯ.
ಹಲವಾರು ವರ್ಷಗಳಿಂದ ಹಕ್ಕುಪತ್ರಗಳಿಗಾಗಿ ಶಾಕರ ಕಚೇರಿ ಸುತ್ತಿದ ನಿಟ್ಟೆಯ ಹಿರಿಯ ನಾಗರಿಕರಾದ ಸುರೇಶ್ ಆಚಾರ್ಯರವರು ತಹಶಿಲ್ದಾರರ ಮೂಲಕ ಹಕ್ಕುಪತ್ರವನ್ನು ಪಡೆದಿರುವುದು ಸುನೀಲ್ ಕುಮಾರ್ ಕೆಂಗಣ್ಣಿಗೆ ಗುರಿಯಾಗಿದ್ದು ವಿಪರ್ಯಾಸ. ಇತೀಚೆಗಷ್ಟೆ ತನ್ನ ಮಗನನ್ನು ಕಳೆದುಕೊಂಡು ವಾಸಿಸಲು ಸೂರಿಲ್ಲದೆ ಮನೆ ನಿರ್ಮಾಣಕ್ಕಾಗಿ ಕಂಡ ಕಂಡ ಕಚೇರಿ ಅಲೆದಾಡಿ-ಅಲೆದಾಡಿ ಸುಸ್ತಾಗಿ ಹೇಗೋ ಕಷ್ಟ ಪಟ್ಟು ಸರ್ಕಾರಿ ಅಧಿಕಾರಿಗಳ ಮೂಲಕ ತಮ್ಮ ಹಕ್ಕು ಪತ್ರವನ್ನು ಪಡೆಯುವಲ್ಲಿ ಯಶಸ್ವಿಯಾಗಿ ನಿಟ್ಟುಸಿರುಬಿಟ್ಟಿದ್ದರು, ಆದರೆ ಬಡವರ ನಿಟ್ಟುಸಿರನ್ನು ನೋಡಲಾಗದ ಸುನೀಲ್ ಕುಮಾರ್ ಹಕ್ಕು ಪತ್ರ ನೀಡಿರುವುದೇ ದೊಡ್ಡ ಅಪರಾಧ ಎನ್ನುವಂತೆ ಸಭೆಯಲ್ಲಿ ಕೂಗಾಡಿದ್ದು ಅವರ ಬಡವರ ವಿರೋದಿ ಮನಸ್ಥಿತಿಯನ್ನು ಸೂಚಿಸುತ್ತದೆ. ಬಡವರ ಪರವಾಗಿ ಜನಸಾಮಾನ್ಯರ ಪರವಾಗಿ ಕೆಲಸ ಮಾಡುವ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳ ಜೊತೆ ಕಾರ್ಕಳದ ಜನತೆ ಸದಾ ನಿಲ್ಲಲಿದ್ದಾರೆ.
ಸುನೀಲ್ ಕುಮಾರ್ ಅವರು ಎರಡು ದಶಕಗಳಿಂದ ಆ ಕುಟುಂಬಕ್ಕೆ ಹಕ್ಕುಪತ್ರವನ್ನು ಯಾಕೆ ನೀಡಲಿಲ್ಲ ಎಂದು ಮೊದಲು ಉತ್ತರಿಸಲಿ, ಬಡವರು ಬದುಕುವ ಹಕ್ಕಿಗಾಗಿ ಹೋರಾಡುತ್ತಿರುವಾಗ ಈ ಶಾಸಕರು ಅಧಿಕಾರದ ಹಕ್ಕಿಗಾಗಿ ಸಭೆಯಲ್ಲಿ ಕೂಗಾಡಿದ್ದು ಅವರ ಅಧಿಕಾರದ ಹಪಹಪಿಯನ್ನು ತೋರಿಸುತ್ತದೆ.
ಶಿಷ್ಟಾಚಾರದ ಬಗ್ಗೆ ಉದ್ದುದ್ದ ಮಾತನಾಡುವ ಶಾಸಕ ಸುನೀಲ್ ಕುಮಾರ್ ಅವರು ಕಾರ್ಕಳದಲ್ಲಿ ಇಷ್ಟು ವರ್ಷಗಳಿಂದ ನಡೆಯುತ್ತಿರುವ ಗುದ್ದಲಿ ಪೂಜೆಯ ಸಂದರ್ಭದಲ್ಲಿ ಎಷ್ಟು ಶಿಷ್ಟಾಚಾರಗಳನ್ನು ಪಾಲಿಸಿದ್ದಾರೆ..? ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರ ಪೋಟೊಗಳನ್ನಾಗಲಿ, ಜಿಲ್ಲಾ ಉಸ್ತುವಾರಿ ಸಚಿವರ ಪೋಟೊಗಳನ್ನಾಗಲಿ ಅವರು ಗುದ್ದಲಿ ಪೂಜೆಯ ಸಂದರ್ಭದಲ್ಲಿ ಹಾಕಿದ್ದಾರೆಯೆ..? ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳದ್ದು ಬಿಡಿ ಅವರದೇ ಪಕ್ಷದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಹೆಸರನ್ನಾಗಲಿ, ಅವರದೇ ಪಕ್ಷದ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರದ್ದಾಗಲಿ, ಅವರ ಮಿತ್ರಪಕ್ಷ ಜೆಡಿಎಸ್,ನ ವಿಧಾನಪರಿಷತ್ ಸದಸ್ಯ ಬೋಜೆ ಗೌಡರದ್ದಾಗಲಿ ಭಾವಚಿತ್ರ ಅಥವಾ ಹೆಸರುಗಳನ್ನು ಹಾಕಿ ಶಿಷ್ಟಾಚಾರ ಮೆರೆದಿದ್ದಾರೆಯೆ..? ಸ್ವತಃ ತಾನೇ ಸರ್ಕಾರಿ ಶಿಷ್ಟಾಚಾರ ಪಾಲಿಸದೆ ಊರಿಗೆಲ್ಲಾ ಶಿಷ್ಟಾಚಾರದ ಉಪದೇಶ ನೀಡುವ ಸುನಿಲ್ ಕುಮಾರ್ ಅವರು ಸ್ವತಃ ತಾನೇ ಸರ್ಕಾರಿ ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ ಎನ್ನುವುದನ್ನು ಮೊದಲು ನೆನಪಿಡಬೇಕು ಎಂದು ಕೆಡಿಪಿ ಸಭೆಯಲ್ಲಿ ಸುನೀಲ್ ಕುಮಾರ್ ಸರ್ಕಾರಿ ಅಧಿಕಾರಿಗಳ ವಿರುದ್ದ ಎತ್ತಿದ ಆಕ್ಷೇಪದ ಬಗ್ಗೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
































