ಧಾರ್ಮಿಕ ಆಚರಣೆಗಳನ್ನು ವಿರೋಧಿಸುವವರಿಗೆ ‘ಪಾಠ ಕಲಿಸುವ’ ಉದ್ದೇಶದಿಂದ ಈ ವರ್ಷದ ಈದ್ ಉಲ್-ಅಝ್ಹಾ (ಬಕ್ರೀದ್) ಸಂದರ್ಭದಲ್ಲಿ ದೊಡ್ಡ ಜಾನುವಾರುಗಳ ಖರೀದಿ ಹಾಗೂ ಬಲಿಯನ್ನು ತಾತ್ಕಾಲಿಕವಾಗಿ ಬಹಿಷ್ಕರಿಸುವಂತೆ ಇಸ್ಲಾಮಿಕ್ ವಿದ್ವಾಂಸ ಮೊಹಮ್ಮದ್ ಜಾಫರ್ ಪಾಷಾ ಹುಸ್ಸಾಮಿ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೆಲವು ಮುಸ್ಲಿಮರು ಜಾನುವಾರುಗಳನ್ನು ಖರೀದಿಸದೇ ಹಾಗೂ ಬಲಿ ನೀಡದೇ ಇರುವ ನಿರ್ಧಾರವನ್ನು ಉಲ್ಲೇಖಿಸಿದ ಅವರು, ಅದರಿಂದ ಪಾಠ ಕಲಿಯಬೇಕಿದೆ ಎಂದು ಹೇಳಿದರು.
“ನೀವು ಒಂದು ವರ್ಷ ಜಾನುವಾರುಗಳನ್ನು ಖರೀದಿಸುವುದನ್ನು ನಿಲ್ಲಿಸಿದರೆ, ಗೋವಿನ ಬಲಿ(ಖುರ್ಬಾನಿ) ವಿರೋಧಿಸುವವರಿಗೆ ಅದು ಪಾಠ ಕಲಿಸುತ್ತದೆ. ಮುಸ್ಲಿಮರು ಅದನ್ನು ಮಾಡಬೇಕು” ಎಂದು ಜಾಫರ್ ಹೇಳಿದರು.
ಮುಖ್ಯಮಂತ್ರಿ ಸ್ಪಷ್ಟ ನಿರ್ದೇಶನ ನೀಡಿದರೆ, ಬಕ್ರೀದ್ ಗಾಗಿ ಜಾನುವಾರುಗಳನ್ನು ಸಾಗಿಸುವ ವಾಹನಗಳನ್ನು ತಡೆಯಲು ಯಾರೂ ಧೈರ್ಯ ಮಾಡುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
“ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು. ಒಂದೆಡೆ ಪೊಲೀಸರು ಮುಸ್ಲಿಂ ಸಮುದಾಯವನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಸ್ವ ಘೋಷಿತ ಗೋ ರಕ್ಷಕ ಸಂಘಟನೆಗಳಿಗೆ ಮುಕ್ತ ಅವಕಾಶ ನೀಡಲಾಗುತ್ತಿದೆ ಎಂಬ ಭಾವನೆ ಇದೆ” ಎಂದು ಅವರು ಆರೋಪಿಸಿದರು.
ಈದ್ ಉಲ್-ಫಿತರ್ ಹಬ್ಬದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಮನ್ವಯ ಸಭೆ ನಡೆಸಲು ಯೋಜನೆ ರೂಪಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅದನ್ನು ರದ್ದುಗೊಳಿಸಲಾಯಿತು ಎಂದು ಜಾಫರ್ ಪಾಷಾ ಹೇಳಿದರು.
ಈದ್ ಉಲ್-ಅಝ್ಹಾ ವೇಳೆ ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಪ್ರಾಣಿಗಳ ತ್ಯಾಜ್ಯವನ್ನು ರಸ್ತೆಗಳಲ್ಲಿ ಎಸೆಯಬಾರದು ಎಂದು ಅವರು ಸಮುದಾಯಕ್ಕೆ ಸಲಹೆ ನೀಡಿದರು.


























