Sunday, June 21, 2026
Google search engine
Homeಕಾರ್ಕಳಎಐ ಹೆಚ್ಚು ಉದ್ಯೋಗ ಸೃಷ್ಟಿಸಲಿದೆ; ನೀರಿನ ಬಳಕೆ ಕುರಿತು ಆತಂಕ ಅತಿರೇಕ: ಅಮೆಜಾನ್ ಸಂಸ್ಥಾಪಕ ಜೆಫ್...

ಎಐ ಹೆಚ್ಚು ಉದ್ಯೋಗ ಸೃಷ್ಟಿಸಲಿದೆ; ನೀರಿನ ಬಳಕೆ ಕುರಿತು ಆತಂಕ ಅತಿರೇಕ: ಅಮೆಜಾನ್ ಸಂಸ್ಥಾಪಕ ಜೆಫ್ ಬೆಝೋಸ್

ಕೃತಕ ಬುದ್ಧಿಮತ್ತೆ (AI) ಮಾನವರ ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ; ಬದಲಿಗೆ ಹೊಸ ಉದ್ಯೋಗಾವಕಾಶಗಳು ಮತ್ತು ಕೈಗಾರಿಕೆಗಳನ್ನು ಸೃಷ್ಟಿಸುವ ಮೂಲಕ ಕಾರ್ಮಿಕರ ಕೊರತೆಯನ್ನೇ ಉಂಟುಮಾಡಲಿದೆ ಎಂದು ಅಮೆಜಾನ್ ಸಂಸ್ಥಾಪಕ ಜೆಫ್ ಬೆಝೋಸ್ ಅಭಿಪ್ರಾಯಪಟ್ಟಿದ್ದಾರೆ.

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ ‘ವಿವಾಟೆಕ್–2026’ ತಂತ್ರಜ್ಞಾನ ಸಮ್ಮೇಳನದಲ್ಲಿ ಮಾತನಾಡಿದ ಅವರು, AI ಮಾನವ ಸೃಜನಶೀಲತೆಯನ್ನು ವಿಸ್ತರಿಸುವ ಸಾಧನವಾಗಿದ್ದು, ಹಿಂದೆ ಅಸಾಧ್ಯವೆಂದು ಭಾವಿಸಲಾಗಿದ್ದ ಅನೇಕ ಕಲ್ಪನೆಗಳನ್ನು ವಾಸ್ತವಕ್ಕೆ ತರುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.

‘ಕೃತಕ ಸಾಮಾನ್ಯ ಇಂಜಿನಿಯರ್‌’ (ಆರ್ಟಿಫಿಷಿಯಲ್ ಜನರಲ್ ಇಂಜಿನಿಯರ್ ) ನಿರ್ಮಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ‘ಪ್ರೊಮಿಥಿಯಸ್‌’ ಎಂಬ AI ಸ್ಟಾರ್ಟ್‌ಅಪ್‌ ನ ಉದಾಹರಣೆ ನೀಡಿದ ಜೆಫ್ ಬೆಝೋಸ್, ಇಂತಹ ತಂತ್ರಜ್ಞಾನಗಳು ಸಂಶೋಧನೆ ಮತ್ತು ಹೊಸ ಆವಿಷ್ಕಾರದ ವೇಗವನ್ನು ಹೆಚ್ಚಿಸುವುದರ ಜೊತೆಗೆ ಹೊಸ ಕೈಗಾರಿಕೆಗಳ ಬೆಳವಣಿಗೆಗೆ ದಾರಿ ಮಾಡಿಕೊಡಲಿವೆ ಎಂದರು.

“AI ಕಾರ್ಮಿಕರ ಕೊರತೆಯನ್ನು ಸೃಷ್ಟಿಸಲಿದೆ. ಏಕೆಂದರೆ ಅದು ಜನರಿಗೆ ಇನ್ನಷ್ಟು ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಕಂಡುಹಿಡಿಯುವ ಅವಕಾಶ ನೀಡುತ್ತದೆ. ಪರಿಣಾಮವಾಗಿ ಹೊಸ ಕ್ಷೇತ್ರಗಳು ಮತ್ತು ಉದ್ಯೋಗಗಳು ಹುಟ್ಟಿಕೊಳ್ಳಲಿವೆ” ಎಂದು ಅವರು ಹೇಳಿದರು.

“ನಾವು ಕನಸುಗಳನ್ನು ಸಾಕಾರಗೊಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಸಾಧ್ಯವಾದರೆ, ಹೆಚ್ಚಿನ ಆಲೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ಆಗ ನಮ್ಮ ಮಿತಿಯನ್ನು ನಮ್ಮ ಸಾಮರ್ಥ್ಯಗಳು ಅಲ್ಲ, ನಮ್ಮ ಕಲ್ಪನೆಗಳೇ ನಿರ್ಧರಿಸುತ್ತವೆ” ಎಂದು ಅವರು ಹೇಳಿದರು.

ನಾಸಾದ ಮಾಜಿ ಗಗನಯಾತ್ರಿ ಮೈಕ್ ಮಾಸ್ಸಿಮಿನೊ ನಡೆಸಿಕೊಟ್ಟ ಅಧಿವೇಶನದಲ್ಲಿ ಮಾತನಾಡಿದ ಬೆಜೋಸ್, AI ಅಭಿವೃದ್ಧಿಯು ಮಾನವ ಸಮಾಜದ ಭವಿಷ್ಯವನ್ನು ರೂಪಿಸುವ ಮುಖ ಶಕ್ತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಬ್ಲೂ ಒರಿಜಿನ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವ್ ಲಿಂಪ್ ಕೂಡ ಚರ್ಚೆಯಲ್ಲಿ ಭಾಗವಹಿಸಿದ್ದರು.

AI ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಬೇಕಾದರೆ, ಕೆಲವು ಸಂಪನ್ಮೂಲಗಳನ್ನು ಮಾನವ ಬಳಕೆಯಿಂದ ತಂತ್ರಜ್ಞಾನ ಮೂಲಸೌಕರ್ಯಗಳತ್ತ ಮರುಹಂಚಿಕೆ ಮಾಡಬೇಕಾಗುತ್ತದೆ ಎಂದು ಬೆಜೋಸ್ ಹೇಳಿದರು.

ವಿಶ್ವದಾದ್ಯಂತ AI ಡೇಟಾ ಕೇಂದ್ರಗಳು ಅಪಾರ ಪ್ರಮಾಣದಲ್ಲಿ ನೀರನ್ನು ಬಳಸುತ್ತಿರುವುದು ಪರಿಸರವಾದಿಗಳು ಮತ್ತು ಸ್ಥಳೀಯ ಸಮುದಾಯಗಳ ಕಳವಳಕ್ಕೆ ಕಾರಣವಾಗಿದೆ. ಆದರೆ ಈ ವಿಷಯವನ್ನು ದೀರ್ಘಕಾಲೀನ ದೃಷ್ಟಿಕೋನದಿಂದ ಪರಿಗಣಿಸಬೇಕು ಎಂದು ಅವರು ವಾದಿಸಿದರು.

“ಜೈವಿಕ ಮಿತಿಗಳು ನಿಜ. ಆದರೆ ಡಿಜಿಟಲ್ ಸಾಮರ್ಥ್ಯ ಬಹುತೇಕ ಅನಂತವಾಗಿದೆ. ನಮ್ಮ ಡೇಟಾ ಮೂಲಸೌಕರ್ಯಗಳಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಕಡಿತಗೊಳಿಸಿದರೆ, ಭವಿಷ್ಯದಲ್ಲಿನಮ್ಮ ಅನೇಕ ಸಂಪನ್ಮೂಲ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಸೂಪರ್‌–ಬುದ್ಧಿವಂತಿಕೆಯ ಅಭಿವೃದ್ಧಿಯನ್ನು ನಾವು ತಾವೇ ವಿಳಂಬಗೊಳಿಸುತ್ತೇವೆ” ಎಂದು ಅವರು ಹೇಳಿದರು.

“ಕೆಲವೊಮ್ಮೆ ನಮ್ಮನ್ನು ನಿಧಾನಗೊಳಿಸುವ ಜೀವಶಾಸ್ತ್ರಕ್ಕಿಂತ ನಮ್ಮನ್ನು ಉಳಿಸಬಲ್ಲ ಬುದ್ಧಿಮತ್ತೆಗೆ ಆದ್ಯತೆ ನೀಡಬೇಕಾಗುತ್ತದೆ” ಎಂದೂ ಅವರು ಅಭಿಪ್ರಾಯಪಟ್ಟರು.

ಬೆಜೋಸ್ ಅವರ ಈ ಹೇಳಿಕೆಗಳು AI ಅಭಿವೃದ್ಧಿಯ ಸುಸ್ಥಿರತೆ, ಪರಿಸರದ ಮೇಲೆ ಅದರ ಪರಿಣಾಮ ಹಾಗೂ ಮಾನವ ಜೀವನಕ್ಕೆ ಅದರ ವೆಚ್ಚದ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿವೆ.ಕೆಲವರು ಇದನ್ನು ತಂತ್ರಜ್ಞಾನದ ಪ್ರಾಯೋಗಿಕ ದೃಷ್ಟಿಕೋನ ಎಂದು ಸಮರ್ಥಿಸಿದರೆ, ಇನ್ನು ಕೆಲವರು ಮಾನವ ಅಗತ್ಯಗಳಿಗಿಂತ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡುವ ಮನೋಭಾವದ ಪ್ರತಿಬಿಂಬ ಎಂದು ಟೀಕಿಸಿದ್ದಾರೆ.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments