ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ನೀಡಿದ ಕಾಣಿಕೆ ಹಣ ಹಾಗೂ ಆಭರಣಗಳ ಎಣಿಕೆಯಲ್ಲಿ ಭಾರಿ ಅಕ್ರಮ ಮತ್ತು ಕಳ್ಳತನ ನಡೆದಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿದ್ದ ಸುಮಾರು 40 ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ತೆಗೆದುಹಾಕಲಾಗಿದೆ.
ಬ್ಯಾಂಕ್ ಟ್ರಸ್ಟ್ ಈಗ ಅವರ ಜಾಗಕ್ಕೆ ಸಂಪೂರ್ಣ ಹೊಸ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಹಣ ಮತ್ತು ಆಭರಣಗಳ ಎಣಿಕೆಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಇರಿಸಲಾಗಿದೆ. ಮತ್ತೊಂದೆಡೆ, ಆರು ದಿನಗಳ ಕಾಲ ಅಯೋಧ್ಯೆಯಲ್ಲೇ ಬೀಡುಬಿಟ್ಟು ತನಿಖೆ ನಡೆಸಿದ ವಿಶೇಷ ತನಿಖಾ ತಂಡವು (SIT) ಇಂದು ತನ್ನ ಪ್ರಾಥಮಿಕ ವರದಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಲಿದೆ.
ಮೂವರು ಸದಸ್ಯರ ಎಸ್‌ಐಟಿ ತಂಡವು ದೇಣಿಗೆಯ ಹಳೆಯ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು, ನಗದು ಎಣಿಕೆ ಮಾಡುವ ವಿಧಾನಗಳು ಮತ್ತು ಆಭರಣಗಳ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದೆ. ದೇವಸ್ಥಾನದ ಟ್ರಸ್ಟ್‌ಗೆ ಸಂಬಂಧಿಸಿದ ಪ್ರಮುಖರು, ಅರ್ಚಕರು, ಬ್ಯಾಂಕ್ ಅಧಿಕಾರಿಗಳು ಮತ್ತು ನಗದು ನಿರ್ವಹಣಾ ಸಿಬ್ಬಂದಿ ಸೇರಿದಂತೆ 100 ಕ್ಕೂ ಹೆಚ್ಚು ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.



















