Friday, June 26, 2026
Google search engine
Homeಕಾರ್ಕಳಡಿಕೆಶಿ ಜೊತೆ ನನಗಾವ ವ್ಯವಹಾರವೂ ಇಲ್ಲ, ಆತ್ಮೀಯತೆಯೂ ಇಲ್ಲ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ

ಡಿಕೆಶಿ ಜೊತೆ ನನಗಾವ ವ್ಯವಹಾರವೂ ಇಲ್ಲ, ಆತ್ಮೀಯತೆಯೂ ಇಲ್ಲ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ

ನನ್ನ ಮತ್ತು ಡಿ.ಕೆ. ಶಿವಕುಮಾರ್ ಮಧ್ಯೆ ಯಾವುದೇ ರೀತಿಯ ವ್ಯವಹಾರವೂ ಇಲ್ಲ, ಆತ್ಮೀಯತೆಯೂ ಇಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಒಬ್ಬ ರಾಜಕಾರಣಿಯಾಗಿ ನೀಡಬೇಕಾದ ಮರ್ಯಾದೆಯನ್ನು ಮಾತ್ರ ನಾನು ನೀಡಿದ್ದೇನೆ ಅಷ್ಟೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ದೆಹಲಿಯಲ್ಲೇ ಮೊಕ್ಕಾಂ ಹೂಡಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದ ಅವರು, ನಿನ್ನೆ ರಾತ್ರಿ ದೆಹಲಿಯಿಂದ ನೇರವಾಗಿ ಮಂಗಳೂರಿಗೆ ಆಗಮಿಸಿ, ಇಂದು ಮುಂಜಾನೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ವಿರೋಧಿಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಪರಿಷತ್‌ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಬೆನ್ನಲ್ಲೇ ಕೇಳಿಬರುತ್ತಿರುವ ಆರೋಪಗಳಿಗೆ ಉತ್ತರಿಸಿದ ಅವರು, ಅಡ್ಡ ಮತದಾನ ನಡೆದಾಗ ಅದಕ್ಕೆ ನಾನೇ ಕಾರಣ ಎಂಬ ಚರ್ಚೆಗಳನ್ನು ಸೃಷ್ಟಿಸಲಾಗುತ್ತಿದೆ. ರಾಜ್ಯದ ಬಿಜೆಪಿ ಅಧ್ಯಕ್ಷರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಜೊತೆಯಾಗಿದ್ದಾರೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಡಿ.ಕೆ. ಶಿವಕುಮಾರ್ ಮತ್ತು ನನ್ನ ಮಧ್ಯೆ ಯಾವುದೇ ವ್ಯವಹಾರವಿಲ್ಲ. ನನ್ನ ವಿರುದ್ಧ ಯಾರು ಅಪಪ್ರಚಾರ ಮಾಡುತ್ತಿದ್ದಾರೋ, ಅವರಿಗೆ ಆ ಭಗವಂತನೇ ಒಳ್ಳೆಯ ಬುದ್ಧಿ ಕೊಡಲಿ ಎಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ತಿರುಗೇಟು ನೀಡಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದರೂ, ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ನನಗೆ ಹಾಗೂ ರಾಜ್ಯದ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ನೋವುಂಟು ಮಾಡಿದೆ. ಈ ಅಡ್ಡಮತದಾನವು ರಾಜ್ಯ ರಾಜಕಾರಣದಲ್ಲಿ ಬೇರೆ ಬೇರೆ ರೀತಿಯ ಚರ್ಚೆಗಳನ್ನು ಹುಟ್ಟುಹಾಕಿತು. ಫಲಿತಾಂಶದ ಮಾರನೇ ದಿನ ನನ್ನ ಮನಸ್ಸಿಗೆ ತೀವ್ರ ನೋವಾಗಿದ್ದರಿಂದ, ಶಾಸಕಾಂಗ ಪಕ್ಷದ ಸಭೆಯನ್ನು ಧರ್ಮಸ್ಥಳದಲ್ಲೇ ನಡೆಸಿ, ಶಾಸಕರು ಆಣೆ-ಪ್ರಮಾಣ ಮಾಡಬೇಕೆಂದು ಹೇಳಿದ್ದು ನಿಜ. ನಾನು ಕೂಡ ಭಾವನಾತ್ಮಕವಾಗಿ ಯೋಚಿಸುವ ಸಾಮಾನ್ಯ ಮನುಷ್ಯ. ಆದರೆ, ಪಕ್ಷದ ಹಿರಿಯರು ಕಿವಿಮಾತು ಹೇಳಿದಂತೆ, ಎಲ್ಲರ ಮಾತಿಗೆ ಗೌರವ ಕೊಟ್ಟು ಇಂದು ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ ಎಂದರು

ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿರುವುದಾಗಿ ತಿಳಿಸಿದ ವಿಜಯೇಂದ್ರ, ರಾಜ್ಯದಲ್ಲಿರುವ ಬರಗಾಲದ ಪರಿಸ್ಥಿತಿ ದೂರವಾಗಿ, ಜನರಿಗೆ ಒಳ್ಳೆಯ ದಿನಗಳು ಬರಲಿ ಎಂದು ಪ್ರಾರ್ಥಿಸಿದ್ದೇನೆ. ಇದರ ಜೊತೆಗೆ, ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ನಮ್ಮೆಲ್ಲರ ನೇತೃತ್ವದಲ್ಲಿ ಜನಪರ, ಅಭಿವೃದ್ಧಿಪರ ಹಾಗೂ ಹಿಂದೂಗಳ ರಕ್ಷಣೆ ಮಾಡುವ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದರು.

ರಾಜ್ಯದ ಸದ್ಯದ ರಾಜಕೀಯ ಸ್ಥಿತಿಯ ಬಗ್ಗೆ ಮಾತನಾಡುತ್ತಾ ಯಡಿಯೂರಪ್ಪನವರ ಕಾಲದ ಇತಿಹಾಸವನ್ನು ನೆನಪಿಸಿದ ಅವರು, ಹಿಂದೆ ರಾಜ್ಯದಲ್ಲಿ 17 ಜನ ಶಾಸಕರು ರಾಜೀನಾಮೆ ನೀಡಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಮ್ಮ ಪಕ್ಷಕ್ಕೆ ಬಂದಿದ್ದರು. ಪ್ರಸ್ತುತ ರಾಜ್ಯದಲ್ಲಿರುವ ಭ್ರಷ್ಟ, ಜನವಿರೋಧಿ ಹಾಗೂ ರೈತ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯುವ ಕೆಲಸವನ್ನು ನಮ್ಮ ಕಾರ್ಯಕರ್ತರು ತಮ್ಮ ಶ್ರಮದಿಂದ ಮಾಡಲಿದ್ದಾರೆ ಎಂಬ ದೃಢ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments