ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಕಾರ್ಯದರ್ಶಿಯ ಹಳೆಯ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಈಗ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿವೆ. ಕಾಂಗ್ರೆಸ್ ಪಕ್ಷದ ಅಗ್ರ ನಾಯಕ ರಾಹುಲ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಈ ಹಿಂದೆ ಮಾಡಲಾಗಿದ್ದ ವಿವಾದಾತ್ಮಕ ಪೋಸ್ಟ್‌ಗಳ ಸ್ಕ್ರೀನ್ ಶಾಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಜನರು, ಕಾಂಗ್ರೆಸ್ ನಾಯಕರ ಮಾನಸಿಕತೆಯನ್ನು ಪ್ರಶ್ನಿಸಿದ್ದಾರೆ.
ಬುಧವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೂವರು ಮಾಧ್ಯಮ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಒಬ್ಬರಾಗಿರುವ ರಾಘವೇಂದ್ರ ಭಟ್ ಎಂಬುವವರು ಈ ಹಿಂದೆ ಮಾಡಿದ್ದ ಪೋಸ್ಟ್‌ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಮೇ 3, 2021ರ ಫೇಸ್‌ಬುಕ್ ಪೋಸ್ಟ್ ಒಂದರಲ್ಲಿ ರಾಹುಲ್ ಗಾಂಧಿ ಅವರನ್ನು ‘ಘಟಿಂಗ’ ಎಂದು ಕರೆಯಲಾಗಿತ್ತು.”ಈ ಘಟಿಂಗ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೊಮ್ಮಗ ಎಂದು ಕರೆಸಿಕೊಳ್ಳುವುದಕ್ಕೆ ಅರ್ಹನೇ?” ಎಂದು ಪ್ರಶ್ನಿಸಿ ಬರೆಯಲಾಗಿದ್ದ ಪೋಸ್ಟ್‌ನ ಸ್ಕ್ರೀನ್ ಶಾಟ್ ಇಟ್ಟುಕೊಂಡು ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ.
ಇದರ ಜೊತೆಗೆ ಇತ್ತೀಚಿನ ಮತ್ತೊಂದು ಪೋಸ್ಟ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ವ್ಯಂಗ್ಯವಾಡಲಾಗಿತ್ತು. “ಮೇ 26 ಮೋದಿ ಸರ್ಕಾರ ಹನ್ನೆರಡು ವರ್ಷ ಪೂರ್ಣಗೊಳಿಸಿದ ದಿನ, ಮೇ 26 ಸಿದ್ದರಾಮಯ್ಯ ರಾಜೀನಾಮೆಗೆ ನಿರ್ಧರಿಸಿದ ದಿನ… ಕಾಕತಾಳೀಯ ವೈರುಧ್ಯ ಹೊಂದಾಣಿಕೆ!” ಎಂದು ಬರೆಯಲಾಗಿತ್ತು.
ಈ ಸ್ಕ್ರೀನ್ ಶಾಟ್‌ಗಳನ್ನು ಒಳಗೊಂಡ ಪೋಸ್ಟರ್ ಹಂಚಿಕೊಂಡಿರುವ ಜಾಲತಾಣ ಬಳಕೆದಾರರು, “ರಾಹುಲ್ ಗಾಂಧಿಯವರನ್ನು ‘ಘಟಿಂಗ’ ಎಂದು ಕರೆದವನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಕಾರ್ಯದರ್ಶಿ! ಇದು ಅವರ ವೈಯಕ್ತಿಕ ಅಭಿಪ್ರಾಯವೇ? ಅಥವಾ ಕಾಂಗ್ರೆಸ್ ನಾಯಕರ ಅಧಿಕೃತ ಮನಸ್ಥಿತಿಯೇ? ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ!” ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷದೊಳಗೆ ಸಾಫ್ಟ್ ಆರ್‌ಎಸ್‌ಎಸ್ ಮನಸ್ಥಿತಿಯನ್ನು ಮತ್ತೊಮ್ಮೆ ಸಾಮಾಜಿಕ ಜಾಲತಾಣದ ನೆಟ್ಟಿಗರು ಅನಾವರಣಗೊಳಿಸಿದ್ದಾರೆ. ಈ ಹಿಂದೆಯೂ ಸಹ ಬಿಎಸ್ ಯಡಿಯೂರಪ್ಪ ಅತ್ಯಾಪ್ತ ಹಾಲಿ ಬಿಜೆಪಿ ಮುಖಂಡ ಬಿಡಿ ಭೂಕಾಂತ್ ಎಂಬ ಶಿವಮೊಗ್ಗ ಮೂಲದ ವ್ಯಕ್ತಿಯನ್ನು ನಿಗಮ ಮಂಡಳಿಯೊಂದರ ಅಧ್ಯಕ್ಷರನ್ನಾಗಿ ಮಾಡಲಾಗಿದ್ದೂ ಅಲ್ಲದೇ, ಅವರಿಗೆ ಸಚಿವ ಸ್ಥಾನಮಾನ ನೀಡಲಾಗಿತ್ತು. ಇದರ ಮೇಲೆ ಮೊದಲು ಬೆಳಕು ಚೆಲ್ಲಿದ ಪೀಪಲ್ ಮೀಡಿಯಾ ವರದಿ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಬಿಡಿ ಭೂಕಾಂತ್‌ಗೆ ಸಿಕ್ಕ ಸಚಿವ ಸ್ಥಾನಮಾನವನ್ನು ಕಾಂಗ್ರೆಸ್ ಸರ್ಕಾರ ಕೂಡಲೇ ಹಿಂಪಡೆದಿದ್ದು ಇಲ್ಲಿ ಮತ್ತೊಮ್ಮೆ ನೆನೆಯಲೇಬೇಕು.
ಹೀಗೆ ಕಾಂಗ್ರೆಸ್ ಸರ್ಕಾರದ ಪ್ರತಿಯೊಂದು ಆಯಕಟ್ಟಿನ ಜಾಗದಲ್ಲಿ ಆರೆಸ್ಸೆಸ್ ತನ್ನ ಮನಸ್ಥಿತಿಯವರನ್ನು ಕೂರಿಸುತ್ತಿದೆಯೋ ಅಥವಾ ಕಾಂಗ್ರೆಸ್ ಪಕ್ಷದ ಒಳಗೇ ‘ನಮಸ್ತೇ ಸದಾ ವತ್ಸಲೆ.’ಯ ಹೊಗೆಯಾಡುತ್ತಿದೆಯೋ ಎಂಬ ಬಗ್ಗೆ ಈಗ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ.
ಒಟ್ಟಾರೆಯಾಗಿ ಬಿಜೆಪಿ ಕಾರ್ಯಕರ್ತರಿಗಿಂತಲೂ ಕೊಳಕಾಗಿ ಕಾಂಗ್ರೆಸ್ ಮತ್ತು ಅದರ ನಾಯಕರನ್ನು ಟ್ರೋಲ್ ಮಾಡಿರುವ ಹಾಗೂ ಟೀಕಿಸಿರುವ ವ್ಯಕ್ತಿಯನ್ನು ಮಾಧ್ಯಮ ಸಲಹೆಗಾರನನ್ನಾಗಿ ಆಯ್ಕೆ … ಮಾಡಿಕೊಳ್ಳುವ ಮೂಲಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತನ್ನದೇ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಗೊಂದಲಕ್ಕೆ ದೂಡಿದ್ದಾರೆ.



















