ತುಳುನಾಡಿನ ಸಾಂಪ್ರದಾಯಿಕ ಕಂಬಳವನ್ನು ತುಳುನಾಡಿನ ಹೊರಕ್ಕೆ ಒಯ್ಯುವ ವಿಚಾರದಲ್ಲಿ ಸಾಕಷ್ಟು ಅಳೆದು ತೂಗಿ ನಿರ್ಧಾರ ತೆಗೆದು ಕೊಳ್ಳುವುದು ಸೂಕ್ತ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಘ ಮೈಸೂರು ಜಿಲ್ಲೆಯ ಸ್ಥಾಪಕ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ .
ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವ ಪ್ರಸ್ತಾವದ ಹಿನ್ನೆಲೆಯಲ್ಲಿ ಬಿಸಿಯೇರಿದ ಚರ್ಚೆಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಿರ್ದಿಷ್ಟ ಪ್ರಾದೇಶಿಕ ವೈಶಿಷ್ಟ್ಯ, ಪರಂಪರೆಯ ಜ್ಯೇಷ್ಠತೆ ಹೊಂದಿರುವ ಹಬ್ಬ, ಉತ್ಸವಾದಿ ಆಚರಣೆಗಳು ಆಯಾ ಪ್ರದೇಶದಲ್ಲಿ ನಡೆದರೇನೆ, ಅಂತಹ ಆಚರಣೆಗಳ ಘನತೆ ಗೌರವಗಳು ಅರ್ಥಪೂರ್ಣ ವಾಗಿ ಉಳಿದುಕೊಳ್ಳುತ್ತವೆ . ಈ ಹಿನ್ನೆಲೆಯಲ್ಲಿ ತುಳುನಾಡಿನ ಪವಿತ್ರ ಮತ್ತು ಸಾಂಪ್ರದಾಯಿಕ ಕಂಬಳ ಉತ್ಸವ ತುಳುನಾಡಿನ ಮಣ್ಣಿನಲ್ಲಿ ನಡೆಯುತ್ತಿದ್ದರೇನೆ ಚಂದ. ಅದನ್ನು ತುಳುನಾಡಿನಿಂದ ಹೊರ ಪ್ರದೇಶದಲ್ಲಿ ಆಚರಿಸುವ ನಿರ್ಧಾರ ಸೂಕ್ತವಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಂಬಳವನ್ನು ಅದರ ಹಿಂದಿರುವ ಕೃಷಿ ಸಂಸ್ಕೃತಿ, ಆಚರಣೆ ಮತ್ತು ತುಳುವರ ಸಾಂಸ್ಕೃತಿಕ ನೆಲೆಗಟ್ಟಿನ ಹಿರಿಮೆಯನ್ನು ಅರ್ಥೈಸಿಕೊಳ್ಳಬೇಕು. ತುಳುನಾಡಿನ ವೈಶಿಷ್ಟ್ಯ ಹೊಂದಿರುವ ಕಂಬಳವನ್ನು ಬರಿಯ ಕ್ರೀಡೆ, ಮನರಂಜನೆ ಮತ್ತು ಸ್ಪರ್ಧಾಕೂಟವಾಗಿ ಮಾರ್ಪಡಿಸುವ ಪ್ರಯತ್ನಕ್ಕೆ ತುಳುನಾಡಿನ ಹಿರಿಯರ, ಪ್ರಾಜ್ಞರ ವಿರೋಧ ಸರಿಯಾಗಿಯೇ ಇದೆ. ವಿಶೇಷವಾಗಿ ಕಂಬಳ, ಭೂತ ಕೋಲ, ಬಲಿಯೇಂದ್ರ ಮುಂತಾದ ಪವಿತ್ರ ಪ್ರಕಾರಗಳನ್ನು ಸ್ಪರ್ಧೆ ಮತ್ತು ವ್ಯವಹಾರಿಕ ದೃಷ್ಟಿಯಿಂದ ನೋಡುವುದು ಸರಿಯೆನಿಸದು ಎಂದು ಅವರು ಹೇಳಿದ್ದಾರೆ.
ಕಂಬಳ – ಕೋಲಗಳಿಗೆ ತುಳುನೆಲವೇ ಸೂಕ್ತ ಸ್ಥಳ. ಅವುಗಳ ಪಾರಂಪರಿಕ ಮೂಲ ನೆಲೆಯಿಂದ ಹೊರಗೆ ಕೊಂಡೊಯ್ಯುವ ಯೋಚನೆ ಸರಿ ಎನಿಸುವುದಿಲ್ಲ. ತುಳುನಾಡಿನ ಗೌರವ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಂಬಳವು ತುಳುನಾಡಿನ ನೆಲದಲ್ಲಿಯೇ ತನ್ನ ಸಂಪೂರ್ಣ ವೈಭವದೊಂದಿಗೆ ಸದಾ ಅರಳುತ್ತಿರಬೇಕು . ಅದರ ಶ್ರೇಷ್ಠತೆ ಉಳಿಸುವುದೇ ನಾವು ಪರಂಪರೆಗೆ ಸಲ್ಲಿಸಬಹುದಾದ ಉನ್ನತ ಗೌರವ ಎಂದು ಹೇಳಿದ್ದಾರೆ.



















