ರಾಜೇಶ್ವರಿ ಶಿಕ್ಷಣ ಪ್ರತಿಷ್ಠಾನ ಸಾಣೂರು, ಕಾರ್ಕಳ ತಾಲೂಕು ಇವರ ವತಿಯಿಂದ ವಿದ್ಯಾರ್ಥಿಗಳು ಹಾಗೂ ಕನ್ನಡ ಸಾಹಿತ್ಯಾಸಕ್ತ ಬಂಧುಗಳಿಗಾಗಿ ಒಂದು ದಿನದ ಸಾಹಿತ್ಯ ರಚನಾ ಕಮ್ಮಟ ಹಾಗೂ ಸಾಹಿತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸೆ. 20 ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾಹಿತ್ಯಾಸಕ್ತ ಬಂಧುಗಳು ಭಾಗವಹಿಸಬಹುದಾಗಿದೆ. ಸಾಹಿತ್ಯ ರಚನಾ ಕಮ್ಮಟವು ದಿನದ ಪೂರ್ವಾಹ್ನದ ಅವಧಿಯಲ್ಲಿ ನಡೆಯಲಿದ್ದು, ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಿರ್ದೇಶನ ನೀಡಲಾಗುತ್ತದೆ. ಅಪರಾಹ್ನದ ಅವಧಿಯಲ್ಲಿ ಆಶುಕವಿತೆ, ಆಶು ಸಣ್ಣಕಥೆ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.
ವಿದ್ಯಾರ್ಥಿ ಕೇಂದ್ರಿತವಾಗಿ ನಡೆಯುವ ಈ ಸಾಹಿತ್ಯ ರಚನಾ ಕಮ್ಮಟ ಹಾಗೂ ಸಾಹಿತ್ಯ ಸ್ಪರ್ಧೆಗಳು ಪ್ರೌಢಶಾಲಾ, ಕಾಲೇಜು(ಪದವಿ ಪೂರ್ವ ಮತ್ತು ಪದವಿ) ಹಾಗೂ ಶಿಕ್ಷಕರನ್ನೂ ಒಳಗೊಂಡಂತೆ ಸಾಹಿತ್ಯಾಸಕ್ತರಿಗಾಗಿ ಎಂದು ಮೂರು ಸ್ತರದಲ್ಲಿ ನಡೆಯಲಿದ್ದು, ಪ್ರತಿಯೊಂದು ವಿಭಾಗಗಳಲ್ಲೂ ಪ್ರತ್ಯೇಕ ಬಹುಮಾನಗಳಿವೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನಮ್ಮ ಸಂಸ್ಥೆಯಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ಕಾರ್ಕಳ ತಾಲೂಕು 23 ನೇ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ವಿತರಿಸಲಾಗುತ್ತದೆ.
ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವುದಾದಲ್ಲಿ 15.09.2026ರ ಒಳಗೆ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಬಹುದು.
ಸಂಪರ್ಕ ಸಂಖ್ಯೆ: 9019323906, 8105454926
ಕಾರ್ಯಕ್ರಮಗಳ ವಿವರ
ಪೂರ್ವಾಹ್ನ: 9.00 ರಿಂದ ನೋಂದಣಿ ಪ್ರಕ್ರಿಯೆ
9.30 ರಿಂದ 10.00 – ಉಪಾಹಾರ
10.00 ರಿಂದ 10.30 – ಉದ್ಘಾಟನೆ
10.30 ರಿಂದ 11.30 – ಕಾರ್ಯಾಗಾರದ ಮೊದಲ ಅವಧಿ. ವಿಷಯ: “ಕವನ ರಚನೆಯ ಕೌಶಲ್ಯಗಳು”
11.30 ರಿಂದ 11.45 – ಪ್ರಶ್ನೋತ್ತರ
11.45 ರಿಂದ 12.00 – ಟೀ ವಿರಾಮ
12.00 ರಿಂದ 1.00 – ಕಾರ್ಯಾಗಾರದ ಎರಡನೇ ಅವಧಿ. ವಿಷಯ: “ಸಣ್ಣ ಕಥಾ ರಚನೆ ಹೇಗೆ?”
1.00 ರಿಂದ 1.15 – ಪ್ರಶ್ನೋತ್ತರ
1.15 ರಿಂದ 2.00 – ಭೋಜನ
ಅಪರಾಹ್ನ 2.00 ರಿಂದ ವಿವಿಧ ಸ್ಪರ್ಧೆಗಳು
ಕೊಠಡಿ ಸಂಖ್ಯೆ 01 – ಆಶುಕವಿತಾ ಸ್ಪರ್ಧೆ (ಸಮಯದ ಮಿತಿ 60 ನಿಮಿಷ)
ಕೊಠಡಿ ಸಂಖ್ಯೆ 02 – ಆಶು ಸಣ್ಣ ಕಥಾ ಸ್ಪರ್ಧೆ (ಸಮಯದ ಮಿತಿ 120 ನಿಮಿಷ)
ಕೊಠಡಿ ಸಂಖ್ಯೆ 03 – ಚಿತ್ರಕಲಾ ಸ್ಪರ್ಧೆ (ಸಮಯದ ಮಿತಿ 120 ನಿಮಿಷ)
ಸ್ಪರ್ಧಾ ನಿಯಮಾವಳಿಗಳು
೧. ಸ್ಪರ್ಧೆಯು ಆಶುಕವಿತೆ (ಕನ್ನಡ) ಆಶು ಸಣ್ಣಕಥೆ (ಕನ್ನಡ) ಹಾಗೂ ಚಿತ್ರಕಲಾ (ಕನ್ನಡ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳ ಚಿತ್ರ) ಸ್ಪರ್ಧೆ ಎಂದು ಮೂರು ರೀತಿಯದ್ದಾಗಿರುತ್ತದೆ.
೨. ಪ್ರತಿಯೊಂದು ಸ್ಪರ್ಧೆಯು ಪ್ರೌಢಶಾಲಾ, ಕಾಲೇಜು(ಪದವಿ ಪೂರ್ವ ಹಾಗೂ ಪದವಿ ತರಗತಿಯ ವಿದ್ಯಾರ್ಥಿಗಳು) ಹಾಗೂ ಸಾಹಿತ್ಯಾಸಕ್ತರ ವಿಭಾಗ ಎಂದು ಮೂರು ಸ್ತರದಲ್ಲಿ ನಡೆಯಲಿದ್ದು, ಮೂರು ವಿಭಾಗಗಳಲ್ಲಿಯೂ ಪ್ರತ್ಯೇಕವಾದ ಬಹುಮಾನಗಳನ್ನು ಹೊಂದಿರುತ್ತದೆ.
೩. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳಿರುತ್ತವೆ.
೪. ಆಶು ಕವಿತೆ ಸ್ಪರ್ಧೆಗೆ ಹೆಸರು ನೋಂದಾಯಿಸಿದ ಸ್ಪರ್ಧಾಳುಗಳಿಗೆ ಏಳು ದಿನ ಮುಂಚಿತವಾಗಿ ಸಂಘಟಕರು 10 ಆಯ್ದ ವಿಷಯಗಳನ್ನು ವಾಟ್ಸಪ್ ಸಂಖ್ಯೆಗೆ ರವಾನಿಸುತ್ತಾರೆ. ಇವುಗಳಲ್ಲಿ ಯಾವುದಾದರೂ ಒಂದನ್ನು ಸ್ಪರ್ಧೆಯ ಸಮಯದಲ್ಲಿ ಚೀಟಿ ಆಯ್ದುಕೊಳ್ಳುವ ಮೂಲಕ ನಿರ್ಧರಿಸಲಾಗುತ್ತದೆ.
೫. ಆಶು ಸಣ್ಣ ಕಥಾ ಸ್ಪರ್ಧೆಯ ವಿಷಯಗಳನ್ನೂ ಕೂಡಾ ವಾಟ್ಸಪ್ ಮೂಲಕ ಏಳು ದಿನ ಮುಂಚಿತವಾಗಿ ಸ್ಪರ್ಧಾಳುಗಳಿಗೆ ತಿಳಿಸಲಾಗುತ್ತದೆ. ಅವುಗಳಲ್ಲಿ ಯಾವುದಾದರೂ ಒಂದನ್ನು ಸ್ಪರ್ಧಾ ದಿನ ನಿರ್ಧರಿಸಲಾಗುತ್ತದೆ.
೬. ಚಿತ್ರಕಲಾ ಸ್ಪರ್ಧೆಯು ಪೆನ್ಸಿಲ್ ಸ್ಕೆಚ್ ಮಾದರಿಯದಾಗಿದ್ದು, ಸ್ಪರ್ಧಾಳು ತನ್ನ ಆಯ್ಕೆಯಂತೆ ಚಿತ್ರ ರಚಿಸಬಹುದು.
೭. ಯಾವುದೇ ಕಾರಣಕ್ಕೂ ಆಶು ಕವಿತೆ, ಹಾಗೂ ಆಶು ಸಣ್ಣ ಕಥಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳು ಬರೆದ ಬರಹದಲ್ಲಿ ಕೃತಿಚೌರ್ಯ ಕಂಡುಬಂದಲ್ಲಿ ಅದನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
೮. ಸ್ಪರ್ಧಾಳುಗಳು ಸ್ಪರ್ಧೆಯ ದಿನಾಂಕದಂದು ನಡೆಯುವ ಕಾರ್ಯಾಗಾರದಲ್ಲಿ ಭಾಗವಹಿಸದೆ ನೇರವಾಗಿ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಅಂದು ವಿದ್ಯಾರ್ಥಿಗಳು ತಮ್ಮ ಸಂಸ್ಥೆಯ ಗುರುತು ಚೀಟಿಯನ್ನು ಹೊಂದಿರಬೇಕು.
೯. ಸ್ಪರ್ಧೆ ಏಕಕಾಲದಲ್ಲಿ ನಡೆಯುವುದರಿಂದ ಒಬ್ಬ ಸ್ಪರ್ಧಾಳು ಯಾವುದಾದರೂ ಒಂದೇ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಎರಡು ಅಥವಾ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ.
೧೦. ಎಲ್ಲಾ ಸ್ಪರ್ಧೆಗಳಲ್ಲಿಯೂ ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: 7975354424

























