ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಜಪಾನ್ ದೇಶವು ಕೇವಲ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಷ್ಟೇ ಉಳಿಯದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಪ್ರದೇಶವೂ ಆಗಿದೆ ಎಂದರೆ ತಪ್ಪಾಗದು. ಈ ಬೆಳೆಯುತ್ತಿರುವ ಭಾರತ-ಜಪಾನ್ ಸಂಪರ್ಕಕ್ಕೆ ಸಾಕ್ಷಿ ಎಂಬಂತೆ ಅಕ್ಟೋಬರ್ 1, 2026 ರಂದು ಬೆಂಗಳೂರಿನ ಜಪಾನ್ ಕಾನ್ಸುಲ್ ಜನರಲ್ ಗೌರವಾನ್ವಿತ ನವಾತಾ ಹಿರೋಶಿ ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ನಿಟ್ಟೆ ಫ್ಯೂಚರ್ ಸ್ಪೇಸ್ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಉತ್ಕೃಷ್ಟತಾ ಕೇಂದ್ರಗಳನ್ನು ಉದ್ಘಾಟಿಸಲಿರುವರು. ಅವರೊಂದಿಗೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ಅವರೂ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ ಅವರು ವಹಿಸಲಿರುವರು.
ಈ ಕಾರ್ಯಕ್ರಮವು ಜಪಾನಿನ ಉದ್ಯಮ, ತಂತ್ರಜ್ಞಾನ ಮತ್ತು ಕಾರ್ಪೊರೇಟ್ ವಲಯದ ಪ್ರಭಾವಶಾಲಿ ನಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಲಿದ್ದು, ಜಪಾನ್ ನ ತಕಾವೊ ಕೊಗ್ಯೊ ಕಂಪನಿ ಲಿಮಿಟೆಡ್ ನ ಅಧ್ಯಕ್ಷ ಮತ್ತು ಸಿಇಒ ಯುತಕಾ ಶಿಮೊಮುರಾ; ಆಟೋಲಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಆರ್.ಡಿ.ಇ ಜನರಲ್ ಮ್ಯಾನೇಜರ್ ಮಲ್ಲಿಕಾರ್ಜುನ ಬಿ; ವಿಫ್ಲಿ ಇಂಡಿಯಾ ಎಲ್.ಎಲ್.ಪಿ ಯ ಇಂಡಿಯಾ ಕಾರ್ಯಾಚರಣೆಗಳ ಮುಖ್ಯಸ್ಥ ಸುಮಂತ್ ಪಡಿವಾಳ್; ಕೊಬಯಾಶಿ ಕ್ರಿಯೇಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಕೋಕಿ ಕಾತೊ; ಬೆಂಗಳೂರಿನಲ್ಲಿರುವ ಜಪಾನ್ ನ ಉಪ ಕಾನ್ಸುಲ್ ಜುನ್ ಹೊಮ್ಮ; ಟಿಕೆಇ ಕೊ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಜುನಿಚಿ ಗೋಯಾ ಹಾಗೂ ಮತ್ತು ವಿಪ್ರೋ 3ಡಿ ಜನರಲ್ ಮ್ಯಾನೇಜರ್ ಹಾಗೂ ಬಿಸಿನೆಸ್ ಮುಖ್ಯಸ್ಥ ಯತಿರಾಜ್ ಕಾಸೆಲ್ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು.
ನಿಟ್ಟೆ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಹಯೋಗದ ನಿರ್ದೇಶಕ ಪ್ರೊ. ಹರಿಕೃಷ್ಣ ಭಟ್ ಅಲೆವೂರ್ ಅವರು ಸಾಂಸ್ಥಿಕ ಸಹಭಾಗಿತ್ವವನ್ನು ಬಲಪಡಿಸಲು ಮತ್ತು ಅಂತರರಾಷ್ಟ್ರೀಯ ಉದ್ಯಮ ಮತ್ತು ಶೈಕ್ಷಣಿಕ ಸಹಯೋಗದ ಮೂಲಕ ವಿದ್ಯಾರ್ಥಿಗಳಿಗೆ ವ್ಯಾಪಕ ಅವಕಾಶಗಳನ್ನು ಸೃಷ್ಟಿಸಲು ಕರ್ನಾಟಕ ಮತ್ತು ಜಪಾನ್ ನ ಪ್ರಮುಖ ಅಧಿಕಾರಿವರ್ಗದವರೊಂದಿಗೆ ಕಾರ್ಯನಿರ್ವಹಿಸುತ್ತಿರುವರು. ನಿಟ್ಟೆ ಸಂಸ್ಥೆಯು ಪ್ರಸ್ತುತ ನಿಡೆಕ್, ಟಿಕೆಇ, ಕೊಬಯಾಶಿ ಕ್ರಿಯೇಟ್, ಕ್ಯೋರಿಟ್ಸು ಎಲೆಕ್ಟ್ರಿಕ್, ವಿಲ್ ಡಿಸೈನ್ ಸೇರಿದಂತೆ ವಿವಿಧ ಕಂಪನಿಗಳೊಂದಿಗಿನ ಸಹಯೋಗದೊಂದಿಗೆ ಏಳು ಉತ್ಕೃಷ್ಟತಾ ಕೇಂದ್ರಗಳನ್ನು ಹೊಂದಿದ್ದು, ವೆಬ್ಒಮೆಗಾ ಮತ್ತು ಫ್ಯೂಜಿಗಿಕೆನ್ ನೊಂದಿಗೆ ಹೆಚ್ಚುವರಿ ಸಹಯೋಗದ ಮಾತುಕತೆ ಪ್ರಗತಿಯಲ್ಲಿದೆ. ಸಾಫ್ಟ್ ವೇರ್ ಅಭಿವೃದ್ಧಿ, 3D ವಿನ್ಯಾಸ ಮತ್ತು ಸಂಯೋಜಕ ಉತ್ಪಾದನೆ, ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳು, ಕೃತಕ ಬುದ್ಧಿಮತ್ತೆ ಆಧಾರಿತ ತಪಾಸಣಾ ವ್ಯವಸ್ಥೆಗಳು, ಸೈಬರ್ ಸೆಕ್ಯುರಿಟಿ ಮತ್ತು ಯಾಂತ್ರಿಕ ಮತ್ತು ಫಿಕ್ಚರ್ ವಿನ್ಯಾಸ ಸೇರಿದಂತೆ ವಿವಿಧ ಕ್ಷೇತ್ರಗಳ CoE ಗಳು ಸ್ಥಾಪಿತವಾಗಿದೆ.
ಅತಿ ಮುಖ್ಯವಾಗಿ, ನಿಟ್ಟೆ ಸಂಸ್ಥೆಯು ಇಂತಹ ಯೋಜನೆಗಳು ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಫಲಿತಾಂಶ ನೀಡುತ್ತಿರುವುದನ್ನು ಕಾಣುತ್ತಿದೆ. ನಿಟ್ಟೆ ತಾಂತ್ರಿಕ ಕಾಲೇಜಿನೊಂದಿಗಿನ ಒಡಂಬಡಿಕೆಯ ಮೂಲಕ ನಿಡೆಕ್ ಸಂಸ್ಥೆಯು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿದೆ. ಟಿಕೆಇ ನೇರವಾಗಿ 38 ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿದೆ ಮತ್ತು ಇನ್ನೂ 34 ನಿಯೋಜನೆಗಳನ್ನು ಸಕ್ರಿಯಗೊಳಿಸಿದೆ, ಕೊಬಯಾಶಿ ಕ್ರಿಯೇಟ್ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿದೆ. ಕ್ಯೋರಿಟ್ಸು ಎಲೆಕ್ಟ್ರಿಕ್ ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳು ಮತ್ತು ಎಐ ಆಧಾರಿತ ತಪಾಸಣಾ ವ್ಯವಸ್ಥೆಗಳನ್ನು ಒಳಗೊಂಡ ಕೆಲಸಕ್ಕಾಗಿ ಪದವೀಧರರು ಮತ್ತು ಇಂಟರ್ನ್ ಗಳನ್ನು ನೇಮಕ ಮಾಡಿದೆ. ವಿದ್ಯಾರ್ಥಿಗಳು ಈ ರೀತಿಯ ಉತ್ಕೃಷ್ಟತಾ ಕೇಂದ್ರಗಳ ಮೂಲಕ ಜಪಾನಿಗೆ ಹೋಗುವ ಮೊದಲೇ ಅಲ್ಲಿನ ಕಾರ್ಯಚಟುವಟಿಕೆಗಳ ಅನುಭವವನ್ನು ಪಡೆಯುತ್ತಾರೆ.
ಈ ವ್ಯವಸ್ಥೆಯ ಸಫಲತೆಯ ಫಲಿತಾಂಶವನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ಲೇಸ್ಮೆಂಟ್ ಕಡತಗಳಲ್ಲಿ ಕಾಣಬಹುದಾಗಿದೆ. ಆಗಸ್ಟ್ 2026 ರವರೆಗೆ ನಿಟ್ಟೆ ಸಂಸ್ಥೆಯು ಜಪಾನಿನ 40 ಕಂಪನಿಗಳಲ್ಲಿ ಒಟ್ಟು 320+ ನಿಯೋಜನೆಗಳನ್ನು ದಾಖಲಿಸಿದೆ. ಅತಿಮುಖ್ಯವಾಗಿ 2026 ಇಸವಿಯೊಂದರಲ್ಲೇ 115 ಉದ್ಯೋಗ ನಿಯೋಜನೆಗಳನ್ನು ದಾಖಲಿಸಲಾಗಿದೆ.
ನಿಟ್ಟೆಯಲ್ಲಿ ಬಿಟೆಕ್ ಪ್ರೋಗ್ರಾಂಗೆ ಸೇರುವ ವಿದ್ಯಾರ್ಥಿಗೆ ಸಾಂಪ್ರದಾಯಿಕ ಕ್ಯಾಂಪಸ್ ನಿಯೋಜನೆಯನ್ನು ಮೀರಿ ಯೋಚಿಸುವ ಅವಕಾಶವನ್ನು ಸೃಷ್ಟಿಸುತ್ತದೆ. ಒಬ್ಬ ವಿದ್ಯಾರ್ಥಿಯು ಬಲವಾದ ತಾಂತ್ರಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡರೆ, ಉತ್ಕೃಷ್ಟತೆಯ ಕೇಂದ್ರದ ಮೂಲಕ ಉದ್ಯಮದೊಂದಿಗೆ ಕೆಲಸಮಾಡಿ ತದನಂತರ ಜಪಾನ್ ನಲ್ಲಿ ವೃತ್ತಿಜೀವನದತ್ತ ಮುಂದಿನ ಹೆಜ್ಜೆ ಇಡಬಹುದಾದ ಅವಕಾಶ ಸಿಗಲಿದೆ.
ಆದ್ದರಿಂದ ಕಾನ್ಸುಲ್ ಜನರಲ್ ಅವರ ಭೇಟಿಯು ರಾಜತಾಂತ್ರಿಕ ತೊಡಗಿಸಿಕೊಳ್ಳುವಿಕೆಯಾಗಿ ಮಾತ್ರವಲ್ಲದೆ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಮತ್ತು ಜಪಾನಿನ ಉದ್ಯಮದ ನಡುವೆ ಬೆಳೆಯುತ್ತಿರುವ ಸಂಬಂಧದ ಪ್ರತಿಬಿಂಬವಾಗಿಯೂ ಮಹತ್ವದ್ದಾಗಿದೆ. ಈ ಸಹಯೋಗಗಳನ್ನು ಮತ್ತಷ್ಟು ವಿಸ್ತರಿಸುವ ಮೂಲಕ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಜಾಗತಿಕ ಉದ್ಯೋಗ ಕ್ಷೇತ್ರದಲ್ಲಿ ತಮ್ಮ ತಾಂತ್ರಿಕ ಶಿಕ್ಷಣವನ್ನು ಬಳಸಿಕೊಳ್ಳಬಯಸುವ ಎಂಜಿನಿಯರಿಂಗ್ ಪದವೀಧರರಿಗೆ ಉತ್ತಮ ವೇದಿಕೆಯಾಗುತ್ತಿದ್ದು, ಈ ಪ್ರಯಾಣದಲ್ಲಿ ಜಪಾನ್ ಪ್ರಮುಖ ಭಾಗವಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



























