ಕಾಬೆಟ್ಟು: ಕಾಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಎಸ್‌ಡಿಎಂಸಿ ಅಧ್ಯಕ್ಷರಾದ ಅಬ್ದುಲ್ ಹ್ಯಾರಿಸ್ ಅವರ ನೇತೃತ್ವದಲ್ಲಿ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ದೈಹಿಕ ಶಿಕ್ಷಣ ಹಾಗೂ ಯೋಗ ಶಿಕ್ಷಕರಾದ ನರೇಂದ್ರ ಕಾಮತ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅಲ್ಲದೆ, ಪ್ರಸ್ತುತ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಏಳು ಮಂದಿ ಶಿಕ್ಷಕರನ್ನೂ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದ ಕೆ. ನವೀನ್ ಚಂದ್ರ ಶೆಟ್ಟಿ ಅವರು ಉಪಸ್ಥಿತರಿದ್ದು ಮಾತನಾಡಿ, ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ವಹಿಸುವ ಮಹತ್ವದ ಪಾತ್ರವನ್ನು ಸ್ಮರಿಸಿ, ಶಿಕ್ಷಕರ ಸೇವೆಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಯೋಗೀಶ್ ಕಿಣಿ, ಶತಮಾನೋತ್ಸವ ಸಮಿತಿಯ ಸದಸ್ಯರಾದ ವೈಕುಂಠ ಶೆಣೈ ಹಾಗೂ ಕಮಲಾಕ್ಷ, ಪುರಸಭಾ ಸದಸ್ಯೆ ರೆಹಮತ್ ಶೇಕ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರೀಲತಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‌ಡಿಎಂಸಿಯ ಮಾಜಿ ಅಧ್ಯಕ್ಷೆ ಶೋಭಾ ಭಾಸ್ಕರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಯೋಗೀಶ್ ಕಿಣಿ ಅವರು ವಂದಿಸಿದರು.
ಶಿಕ್ಷಕರ ಸೇವೆಯನ್ನು ಗೌರವಿಸಿ, ಅವರ ಕೊಡುಗೆಯನ್ನು ಸ್ಮರಿಸಿದ ಈ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ನಡೆಯಿತು.





























