Friday, October 2, 2026
Google search engine
Homeಕಾರ್ಕಳಬಡವರ ಬದುಕಿಗೆ ಕೊಳ್ಳಿ ಇಟ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕ...

ಬಡವರ ಬದುಕಿಗೆ ಕೊಳ್ಳಿ ಇಟ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕ ವಿ. ಸುನಿಲ್ ಕುಮಾರ್ ಕರೆ.

ಅಭಿವೃದ್ಧಿ ಸಂಪೂರ್ಣ ಸ್ತಬ್ಧ, ಬಡವರ ಬದುಕಿಗೆ ಕೊಳ್ಳಿ – ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ತೀವ್ರ ಆಕ್ರೋಶ
ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಮತ್ತು ಜನವಿರೋಧಿ ಧೋರಣೆಗಳಿಂದ ಇಡೀ ಕರ್ನಾಟಕ ಅಭಿವೃದ್ಧಿ ಶೂನ್ಯತೆಯ ಕತ್ತಲಿಗೆ ತಳ್ಳಲ್ಪಟ್ಟಿದೆ. ಸರ್ಕಾರ ತನ್ನ ಸಾಂವಿಧಾನಿಕ ಜವಾಬ್ದಾರಿ ಮತ್ತು ಜನಹಿತವನ್ನು ಸಂಪೂರ್ಣವಾಗಿ ಮರೆತು ನಿದ್ದೆಯಲ್ಲಿದ್ದರೆ, ಜನಸಾಮಾನ್ಯರ ಬದುಕು ದಿನನಿತ್ಯ ಬೀದಿಗೆ ಬರುತ್ತಿದೆ. ಜನಾದೇಶಕ್ಕೆ ದ್ರೋಹ ಬಗೆದು ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಈ ಭಂಡ ಸರ್ಕಾರದ ವಿರುದ್ಧ ಜನಾಕ್ರೋಶದ ಕಹಳೆ ಮೊಳಗಿಸಲು ಅಕ್ಟೋಬರ್ 5, 2026ರ ಸೋಮವಾರ ಬೆಳಗ್ಗೆ 10:00 ಗಂಟೆಗೆ ಕಾರ್ಕಳ ತಾಲೂಕು ಕಚೇರಿ ಮುಂಭಾಗ ‘ಬೃಹತ್ ಪ್ರತಿಭಟನಾ ಧರಣಿ’ ಹಮ್ಮಿಕೊಳ್ಳಲಾಗಿದೆ.
ಕಳೆದ 3 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಬೊಕ್ಕಸವನ್ನು ಸಂಪೂರ್ಣವಾಗಿ ಬರಿದು ಮಾಡಿದೆ. ಆರ್ಥಿಕ ದಿವಾಳಿತನವನ್ನು ಮುಚ್ಚಿಡಲು ಬಡವರ, ದುರ್ಬಲರ ಮತ್ತು ರೈತರ ಹಕ್ಕುಗಳನ್ನು ಕಸಿಯುವ ಹೀನ ಕೃತ್ಯಕ್ಕೆ ಕೈಹಾಕಿದೆ. ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಸಾರ್ವಜನಿಕರ ಆಕ್ರೋಶ ಮುಗಿಲುಮುಟ್ಟಿದೆ.
ರಾಜ್ಯದ ಲಕ್ಷಾಂತರ ಬಡವರು, ಕೂಲಿಕಾರ್ಮಿಕರು ಹಾಗೂ ನಿವೇಶನ ರಹಿತರಿಗೆ ಸೂರು ಕಲ್ಪಿಸುವ ಆಶ್ರಯ ಯೋಜನೆಗೆ ಕಳೆದ 3 ವರ್ಷಗಳಲ್ಲಿ ಹೊಸದಾಗಿ ಒಂದೇ ಒಂದು ಮನೆಯನ್ನೂ ಮಂಜೂರು ಮಾಡದೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಬಡವರ ಸೂರು ಹೊಂದುವ ಕನಸಿಗೆ ಕಾಂಗ್ರೆಸ್ ಸರ್ಕಾರ ಎಳ್ಳುನೀರು ಬಿಟ್ಟಿದೆ.
ಒಂದೆಡೆ ಸತತವಾಗಿ ವಿದ್ಯುತ್ ದರ ಹೆಚ್ಚಿಸಿ ಜನಸಾಮಾನ್ಯರ, ಕೈಗಾರಿಕೆಗಳ ರಕ್ತ ಹೀರುತ್ತಿರುವ ಸರ್ಕಾರ, ಮತ್ತೊಂದೆಡೆ ಹಳ್ಳಿ-ನಗರಗಳೆನ್ನದೆ ನಿರಂತರ ಅಘೋಷಿತ ಲೋಡ್ ಶೆಡ್ಡಿಂಗ್ ಹೇರುತ್ತಿದೆ. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಿಗದೆ ಬೆಳೆಗಳು ಒಣಗುತ್ತಿದ್ದು, ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ.
ರಾಜ್ಯದ ರೈತರು ಹಾಗೂ ಬಡ ಕುಟುಂಬಗಳು ಸಲ್ಲಿಸಿದ್ದ ಬಗರ್‌ಹುಕುಂ, ಅಕ್ರಮ-ಸಕ್ರಮ ಅರ್ಜಿಗಳನ್ನು ಪರಿಶೀಲಿಸುವ ಕನಿಷ್ಠ ಸೌಜನ್ಯವೂ ಇಲ್ಲದೆ ಅಧಿಕಾರಿಗಳ ಹಂತದಲ್ಲೇ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಲಾಗುತ್ತಿದೆ.
ಇ-ಸ್ವತ್ತು, 9 & 11A ಖಾತಾ ಮತ್ತು ಏಕವಿನ್ಯಾಸ (ಸಿಂಗಲ್ ಲೇಔಟ್) ಅನುಮೋದನೆಗೆ ಅವೈಜ್ಞಾನಿಕ ಷರತ್ತುಗಳನ್ನು ವಿಧಿಸಿ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸಿ ಭ್ರಷ್ಟಾಚಾರಕ್ಕೆ ರಹದಾರಿ ಮಾಡಲಾಗಿದೆ.
ರಾಜ್ಯದ ಗ್ರಾಮೀಣ ರಸ್ತೆಗಳ ನಿರ್ವಹಣೆ, ದುರಸ್ತಿ ಹಾಗೂ ಅಭಿವೃದ್ಧಿಗೆ ನಯಾಪೈಸೆ ಅನುದಾನ ಬಿಡುಗಡೆ ಮಾಡದೆ ಗ್ರಾಮೀಣ ಭಾಗದ ಮೂಲಸೌಕರ್ಯ ವ್ಯವಸ್ಥೆಯನ್ನೇ ಹಾಳುಗೆಡವಲಾಗಿದೆ.
ಅಸಹಾಯಕರ ಆಸರೆಯಾಗಿದ್ದ ವಿಧವಾ ವೇತನ, ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಪಿಂಚಣಿಗಳನ್ನು ಕಡಿತಗೊಳಿಸಲು ಆದೇಶ ಹೊರಡಿಸಿರುವುದು ಅಕ್ಷಮ್ಯ ಅಪರಾಧ. ನೊಂದವರ, ವೃದ್ಧರ ಕಣ್ಣೀರ ಮೇಲೆ ಸರ್ಕಾರ ಆಡಳಿತ ನಡೆಸುತ್ತಿದೆ.
ಖಜಾನೆ ಖಾಲಿ ಮಾಡಿ ಬಡವರ ಸೂರು, ಅನ್ನ, ಪಿಂಚಣಿ ಕಸಿದುಕೊಂಡ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸುನಿಲ್ ಕುಮಾರ್ ಕುಮಾರ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಅಕ್ಟೋಬರ್ 5ರಂದು ಕಾರ್ಕಳ ತಾಲೂಕು ಕಚೇರಿ ಮುಂಭಾಗ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಕಾರ್ಕಳ ಕ್ಷೇತ್ರದ ಸಮಸ್ತ ಸಾರ್ವಜನಿಕರು, ಅನ್ನದಾತ ರೈತರು, ಸಂತ್ರಸ್ತ ಫಲಾನುಭವಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರದ ಕಣ್ಣು ತೆರೆಸಬೇಕು ಎಂದು ಶಾಸಕ ವಿ. ಸುನಿಲ್ ಕುಮಾರ್ ಕರೆ ನೀಡಿದ್ದಾರೆ.
ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments