Tuesday, October 20, 2026
Google search engine
Homeಕಾರ್ಕಳನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2026-2027ನೇ ಸಾಲಿನ ರಕ್ತದಾನ ಶಿಬಿರ

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2026-2027ನೇ ಸಾಲಿನ ರಕ್ತದಾನ ಶಿಬಿರ

‘ರಕ್ತದಾನ ಮಾಡುವುದರಿಂದ ನಾವು ಇನ್ನೊಬ್ಬರ ಜೀವ ಉಳಿಯಲು ಕಾರಣರಾಗುತ್ತೇವೆ. ರಕ್ತದಾನವೆಂಬುದು ಎಲ್ಲಾ ರೀತಿಯ ದಾನಕ್ಕಿಂತ ಶ್ರೇಷ್ಟವಾದುದು’ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಕ್ಯಾಂಪಸ್ ಮೈಂಟೆನೆನ್ಸ್ & ಡೆವಲಪ್ಮೆಂಟ್ ವಿಭಾಗದ ನಿರ್ದೇಶಕ ಪ್ರೊ. ಎ ಯೋಗೀಶ್ ಹೆಗ್ಡೆ ಅಭಿಪ್ರಾಯಪಟ್ಟರು.

ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್), ರೆಡ್‌ಕ್ರಾಸ್ ಸೊಸೈಟಿ, 6 (ಕೆ.ಎ.ಆರ್) ನೇವಿ ಎನ್.ಸಿ.ಸಿ ಸಬ್‌ಯುನಿಟ್ ನಿಟ್ಟೆ, ಮೆಕ್ಯಾನಿಕಲ್ ವಿಭಾಗದ ಏಐಎಂಎಸ್ ಘಟಕ, ನಿಟ್ಟೆ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಿರಿಯಡ್ಕ ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು, ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು, ನಿಟ್ಟೆ ಗಾಜ್ರಿಯಾ ಆಸ್ಪತ್ರೆ, ಲೇಡಿಗೋಶನ್ ಆಸ್ಪತ್ರೆ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಅ.17 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ‘ರಕ್ತದಾನ ಶಿಬಿರವು ಒಂದು ಉತ್ತಮ ಯೋಜನೆಯಾಗಿದ್ದು ಇದಕ್ಕೆ ವಿದ್ಯಾರ್ಥಿಗಳು ಬಹಳಷ್ಟು ಹುಮ್ಮಸ್ಸಿನಿಂದ ಭಾಗವಹಿಸುತ್ತಾರೆ. ಸಂಸ್ಥೆಯು ರಕ್ತದಾನ ಶಿಬಿರದ ಹೊರತಾಗಿಯೂ ಅಗತ್ಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೂಲಕ ರೋಗಿಗಳ ನೆರವಿಗೆ ಸದಾ ಕಾರ್ಯನಿರ್ವಹಿಸುತ್ತದೆ’ ಎಂದರು.

ದಕ್ಷಿಣಕನ್ನಡ ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಕಿಶೋರಚಂದ್ರ ಹೆಗ್ಡೆ, ನಿಟ್ಟೆ ರೆಡ್‌ಕ್ರಾಸ್‌ನ ಮುಖ್ಯಸ್ಥ ಡಾ.ಜನಾರ್ದನ್ ನಾಯಕ್, ಎನ್.ಸಿ.ಸಿ ಆಫೀಸರ್ ಡಾ.ಶಿವಪ್ರಸಾದ್ ಶೆಟ್ಟಿ, ಎನ್.ಎಸ್.ಎಸ್ ಅಧಿಕಾರಿ ಡಾ. ಸರ್ವಜಿತ್, ರೋಟರಿ ಕ್ಲಬ್ ನಿಟ್ಟೆ ಅಧ್ಯಕ್ಷೆ ಶೈಲಜಾ ವಿ ಶೆಟ್ಟಿ, ಹಿರಿಯಡ್ಕ ಲಯನ್ಸ್ ಕ್ಲಬ್ ನ ಅಧ್ಯಕ್ಷ ಜಯಪ್ರಕಾಶ್ ನಾಯಕ್, ಲಯನ್ಸ್ 317ಡಿ 2ನೇ ವೈಸ್ ಜಿಲ್ಲಾ ಗವರ್ನರ್ ವೆಂಕಟೇಶ್ ಹೆಬ್ಬಾರ್, ಕೆ.ಎಸ್ ಹೆಗ್ಡೆ ಆಸ್ಪತ್ರೆ, ಗಾಜ್ರಿಯಾ ಆಸ್ಪತ್ರೆ, ಲೇಡಿಗೋಶನ್ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಲಿಖಿತಾ ಸ್ವಾಗತಿಸಿದರು ಹಾಗೂ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಧನ್ವಿ ವಂದಿಸಿದರು.

ಈ ಒಂದು ದಿನದ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕ ಹಾಗೂ ಭೋದಕೇತರ ವರ್ಗದವರ ರಕ್ತದಾನದೊಂದಿಗೆ 290 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ಕಾಲೇಜಿನ ಪತ್ರಿಕಾಪ್ರಕಟಣೆಯಲ್ಲಿ ಪ್ರಾಂಶುಪಾಲರು ತಿಳಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments