ಪುತ್ತೂರಿನ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದಲ್ಲಿ ಮನೆಯೊಂದಕ್ಕೆ ಟಿವಿ ನೋಡಲು ತೆರಳಿದ್ದ ಅಪ್ರಾಪ್ತ ವಯಸ್ಕ ಬಾಲಕಿಗೆ ಬಲತ್ಕಾರವಾಗಿ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ನಡೆಸಿದ ಆರೋಪಿಗೆ ಪುತ್ತೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸ್ ವಿಶೇಷ ನ್ಯಾಯಾಲಯ 20 ವರ್ಷಗಳ ವರ್ಷಗಳ ಕಠಿನ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನೆಲ್ಯಾಡಿ ಗ್ರಾಮದ ಜಾಲುಮನೆ ನಿವಾಸಿ ರವೀಂದ್ರ ಆಚಾರ್ಯ ಶಿಕ್ಷೆಗೊಳಗಾದ ಅಪರಾಧಿ. 2018ರ ಅ. 13ರಂದು ಘಟನೆ ನಡೆದಿದ್ದು, ಬಾಲಕಿಯು ಆರೋಪಿಯ ಮನೆಗೆ ಟಿವಿ ನೋಡಲು ತೆರಳಿದ್ದಳು. ಆ ವೇಳೆ ಆರೋಪಿಯು ರಾತ್ರಿ ಆಕೆಯನ್ನು ಆತನ ಮಲಗುವ ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ಜತೆಗೆ ಮುಂದೆ ಹಲವು ಬಾರಿ ಆಕೆಯ ಮನೆಗೆ ತೆರಳಿ ದೈಹಿಕ ಸಂಪರ್ಕ ಬೆಳೆಸಿ ಯಾರಿಗೂ ಹೇಳದಂತೆ ತಿಳಿಸಿದ್ದು, ಹೇಳಿದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದ.
ಈ ಕುರಿತು ಬಾಲಕಿಯ ತಂದೆ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಪುತ್ತೂರು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕೆ. ಹಾಗೂ ಕಡಬ ಠಾಣೆಯ ಪಿಎಸ್‌ಐ ಪ್ರಕಾಶ್ ದೇವಾಡಿಗ ತನಿಖೆ ನಡೆಸಿ, ಇನ್ಸ್ಪೆಕ್ಟರ್‌ಡಿ.ಮಂಜುನಾಥ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪುತ್ತೂರು ನ್ಯಾಯಾಲಯದ ನ್ಯಾಯಾಧೀಶೆ ಸುಮಂಗಲಾ ಚಕಲಬ್ಬಿ ಅವರು, ಅಪರಾಧಿಗೆ ಪೋಕ್ಕೊ ಕಾಯ್ದೆಯಡಿ 20 ವರ್ಷಗಳ ಕಠಿನ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ಅದನ್ನು ತೆರಲು ತಪ್ಪಿದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಐಪಿಸಿ ಕಲಂ 506ರಡಿ ಅಪರಾಧಕ್ಕೆ ಒಂದು ವರ್ಷ ಕಠಿನ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೆ 1 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಜತೆಗೆ ಸಂತ್ರಸ್ತ ಬಾಲಕಿಗೆ 9 ಲಕ್ಷ ರೂ. ಪರಿಹಾರ ನೀಡಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಿದ್ದಾರೆ.






























