Sunday, November 22, 2026
Google search engine
Homeಕಾರ್ಕಳಗ್ಯಾರಂಟಿ ಸಮಾವೇಶದ ಖರ್ಚಿಗೆ ಪಂಚಾಯತ್ ಸ್ವಂತ ನಿಧಿ ಬಳಕೆ ಆದೇಶಕ್ಕೆ ಕಾರ್ಕಳ ತಾಲೂಕು ಪಂಚಾಯತ್ ರಾಜ್...

ಗ್ಯಾರಂಟಿ ಸಮಾವೇಶದ ಖರ್ಚಿಗೆ ಪಂಚಾಯತ್ ಸ್ವಂತ ನಿಧಿ ಬಳಕೆ ಆದೇಶಕ್ಕೆ ಕಾರ್ಕಳ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ತೀವ್ರ ವಿರೋಧ!

ಉಡುಪಿ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ದಿನಾಂಕ 24.112026 ರಂದು ಆಯೋಜಿಸಲು ಉದ್ದೇಶಿಸಲಾಗಿದ್ದು, ಸದ್ರಿ ಸಮಾವೇಶಕ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳನ್ನು ಕರೆತರುವ ಬಗ್ಗೆ ಮತ್ತು ಊಟೋಪಚಾರಗಳ ವ್ಯವಸ್ಥೆಗೆ ತಗಲುವ ವೆಚ್ಚವನ್ನು ಆಯಾ ಗ್ರಾಮ ಪಂಚಾಯತ್ ಸ್ವಂತ ನಿಧಿಯಿಂದ 25000/- ರೂಗಳನ್ನು ಭರಿಸಬೇಕು ಎಂದು ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ಹಣಾಧಿಕಾರಿಗಳು ನಿರ್ದೇಶನ ನೀಡಿರುವುದನ್ನು ಕಾರ್ಕಳ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ.

ಗ್ರಾಮ ಪಂಚಾಯತ್ ಸ್ವಂತ ನಿಧಿಯನ್ನು ಆಯಾ ಗ್ರಾಮಗಳ ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕರ ಮೂಲಭೂತ ಅಗತ್ಯಗಳನ್ನು ಪೂರೈಸಲು ಆದ್ಯತೆಯ ಮೇರೆಗೆ ಬಳಕೆ ಮಾಡಿಕೊಳ್ಳಬೇಕಾಗಿರುತ್ತದೆ. ಪ್ರಸ್ತುತ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಗ್ರಾಮಗಳಲ್ಲಿ ಎದುರಾಗಬಹುದಾದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪಂಚಾಯತ್ ಗಳು ಅನುದಾನವನ್ನು ಕಾಯ್ದಿರಿಸುವ ಅವಶ್ಯಕತೆ ಇರುತ್ತದೆ.

ಅನುದಾನದ ಕೊರತೆಯಿಂದಾಗಿ ಹಲವು ಗ್ರಾಮ ಪಂಚಾಯತ್ ಗಳಲ್ಲಿ ಕಛೇರಿಯ ವಿದ್ಯುತ್ ಬಿಲ್ ಪಾವತಿ, ಸಿಬ್ಬಂದಿಗಳ ವೇತನ ಪಾವತಿ ಸೇರಿದಂತೆ ದೈನಂದಿನ ಕಛೇರಿ ನಿರ್ವಹಣೆಗೆ ತುಂಬಾ ಸಮಸ್ಯೆ ಆಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ, ಪೈಪ್ ಲೈನ್ ರಿಪೇರಿ, ದಾರಿ ದೀಪಗಳ ನಿರ್ವಹಣೆ, ರಸ್ತೆ ಚರಂಡಿಗಳ ನಿರ್ವಹಣೆ ಸೇರಿದಂತೆ ತುರ್ತು ಮೂಲಭೂತ ಅಗತ್ಯಗಳನ್ನು ಪೂರೈಸಲು ಗ್ರಾಮ ಪಂಚಾಯತ್ ಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸರಕಾರದಿಂದ ಇನ್ನೂ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿರುತ್ತಾರೆ. ಗ್ರಾಮ ಪಂಚಾಯತ್ ಚುನಾವಣೆಗಳು ಸಕಾಲದಲ್ಲಿ ನಡೆಯದ ಕಾರಣ, ಚುನಾಯಿತ ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ 15ನೇ ಹಣಕಾಸು ಆಯೋಗದ ಅನುದಾನವು ಕೂಡ ಬಿಡುಗಡೆ ಆಗಿರುವುದಿಲ್ಲ.

ಜಿಲ್ಲೆಯ ಗ್ಯಾರಂಟಿ ಸಮಾವೇಶಕ್ಕೆ ನಮ್ಮ ಒಕ್ಕೂಟದ ವಿರೋಧವಿಲ್ಲ, ಆದರೆ ಪಂಚಾಯತ್ ಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಸಮಾವೇಶಕ್ಕಾಗಿ ಗ್ರಾಮ ಪಂಚಾಯತ್ ಸ್ವಂತ ನಿಧಿಯ ಅನುದಾನವನ್ನು ಬಳಕೆ ಮಾಡುವ ಬಗ್ಗೆ ನಮ್ಮ ವಿರೋಧವಿದ್ದು, ಸರ್ಕಾರದ ಬೇರೆ ಅನುದಾನವನ್ನು ಬಳಕೆ ಮಾಡಿಕೊಂಡು ಗ್ಯಾರಂಟಿ ಸಮಾವೇಶ ನಡೆಸಲಿ. ಜಿಲ್ಲೆಯ ಗ್ಯಾರಂಟಿ ಸಮಾವೇಶದ ಖರ್ಚು ವೆಚ್ಚಗಳಿಗಾಗಿ ಗ್ರಾಮ ಪಂಚಾಯತ್ ಸ್ವಂತ ನಿಧಿಯ ಬಳಕೆ ಕುರಿತು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಈ ಮೂಲಕ ಒಕ್ಕೂಟ ಆಗ್ರಹಿಸುತ್ತದೆ ಎಂದು ಕಾರ್ಕಳ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿಯವರಾದ ಸತೀಶ್‌ ಪೂಜಾರಿ ಎಳ್ಳಾರೆ ಇವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments