“ಯಾವ ಶಾಲೆಯಲ್ಲಿ ಆಡಳಿತ ಮಂಡಳಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಶ್ರಮಿಸುತ್ತಾರೋ, ಆ ಸಂಸ್ಥೆ ಖಂಡಿತವಾಗಿಯೂ ಪ್ರಗತಿ ಸಾಧಿಸುತ್ತದೆ. ಇದಕ್ಕೆ ಜ್ಞಾನಸುಧಾ ಸಂಸ್ಥೆಯೇ ಉತ್ತಮ ಉದಾಹರಣೆ” ಎಂದು ಅಜೆಕಾರು ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ‘ಜ್ಞಾನ ಸಂಭ್ರಮ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಕ್ಯಾಥೋಲಿಕ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಂದನೀಯ ಗುರು ವಿನ್ಸೆಂಟ್ ರಾಬರ್ಟ್ ಕ್ರಾಸ್ತಾ ಮಾತನಾಡಿ, “ವಿನಯ ಇರುವಲ್ಲಿ ಪ್ರಗತಿ ಇರುತ್ತದೆ. ಜ್ಞಾನಸುಧಾ ವಿದ್ಯಾರ್ಥಿಗಳ ಶಿಸ್ತು ಮತ್ತು ವಿನಯ ಮೆಚ್ಚುವಂಥದ್ದಾಗಿದ್ದು, ಇದು ಎಲ್ಲರಿಗೂ ಮಾದರಿಯಾಗಿದೆ” ಎಂದರು.
ಕಾರ್ಯಕ್ರಮದಲ್ಲಿ 2026ನೇ ಸಾಲಿನ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳು, ಶೈಕ್ಷಣಿಕ ಸಾಧಕರು ಹಾಗೂ ಶಾಲಾ-ಕಾಲೇಜು ಹಂತದ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರನ್ನು ಗುರುತಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಮಚಂದ್ರ ನೆಲ್ಲಿಕಾರ್, ವಿದ್ಯಾರ್ಥಿ ನಾಯಕರಾದ ಮಾಸ್ಟರ್ ನಿಹಾರ್ ಹಾಗೂ ಕುಮಾರಿ ಧ್ವನಿ ಸುರೇಶ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಸಂತೋಷ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಕವಿತಾ ಜೈನ್ ವಾರ್ಷಿಕ ವರದಿ ಮಂಡಿಸಿದರು. ಉಪನ್ಯಾಸಕರಾದ ವಿಘ್ನೇಶ್, ಸಮಾಜ ವಿಜ್ಞಾನ ಶಿಕ್ಷಕಿ ಆಶಾ ಜ್ಯೋತಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಕುಮಾರಿ ಹರಿಣಿ ಸಾಧಕರ ಪಟ್ಟಿ ವಾಚಿಸಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ, ಉಪನ್ಯಾಸಕಿ ಡಾ. ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಾಂಶುಪಾಲರಾದ ಶ್ರೀಮತಿ ಆರತಿ ಸರ್ವರನ್ನು ವಂದಿಸಿದರು.
ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮವನ್ನು ಮರ್ಣೆ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷರಾದ ಯಶೋದಾ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತದನಂತರ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ನೆರವೇರಿದವು.














