ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಜೋಗಿ ಅವರು ಕನಕದಾಸರ ಜೀವನ, ಸಾಹಿತ್ಯ ಹಾಗೂ ತತ್ವಾದರ್ಶಗಳ ಮಹತ್ವವನ್ನು ತಿಳಿಸಿದರು. ಶತಶತಮಾನಗಳಿಂದ ಜಾತಿ ಪದ್ಧತಿಯ ಬಿಗಿ ಸಂಕೋಲೆಗಳಿಂದ ಭಾರತೀಯ ಸಮಾಜ ಬಂಧಿಸಲ್ಪಟ್ಟಿತ್ತು. ಇಂತಹ ಸಂದರ್ಭದಲ್ಲಿ ಕನಕದಾಸರ ಮಾನವೀಯ ಮೌಲ್ಯಗಳು ಸಮಾಜದ ಕಣ್ಣು ತೆರೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ದಾಸ ಸಾಹಿತ್ಯದ ಪ್ರಮುಖ ಕೊಂಡಿಯಾಗಿ ಕನ್ನಡ ಸಾರಸ್ವತ ಲೋಕಕ್ಕೆ ಕನಕದಾಸರ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿನ ಅಂಧಶ್ರದ್ಧೆ ಹಾಗೂ ಮೌಢ್ಯಗಳನ್ನು ದಿಟ್ಟತನದಿಂದ ವಿರೋಧಿಸಿದ ಮಹಾನ್ ದಾರ್ಶನಿಕರು ಕನಕದಾಸರು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಉಪನ್ಯಾಸಕರು ಪುಷ್ಪನಮನ ಸಲ್ಲಿಸಿದರು. ಕಾಲೇಜಿನ ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು. ಗಣಿತ ಉಪನ್ಯಾಸಕಿ ಮಾನಸ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.














