ನಿಟ್ಟೆಯಲ್ಲಿ ಸಂಭ್ರಮದ ಹಳೆವಿದ್ಯಾರ್ಥಿಗಳ ಪುನರ್ಮಿಲನ
ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಹಾಗೂ 1995 ರಲ್ಲಿ ಪ್ರವೇಶ ಪಡೆದ ಎನ್ಎಂಎಎಂಐಟಿಯ ಹಳೆಯ ವಿದ್ಯಾರ್ಥಿಗಳ ಸಿಲ್ವರ್ ರಿಯೂನಿಯನ್ ನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘವಾದ “ವೆನಮಿತಾ” ಇತ್ತೀಚೆಗೆ ನಿಟ್ಟೆಯ ಸಂಭ್ರಮ್ ಸಭಾಂಗಣದಲ್ಲಿ ಹಮ್ಮಿಕೊಂಡಿತು.
ಕಾರ್ಯಕ್ರಮವನ್ನು ನಿಟ್ಟೆ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಕುಲಪತಿ ಎನ್.ವಿನಯ ಹೆಗ್ಡೆ ಉದ್ಘಾಟಿಸಿದರು. ನಿಟ್ಟೆ ಕ್ಯಾಂಪಸ್ ನ್ನು ಅವರು ಎಷ್ಟು ಭಾವನಾತ್ಮಕವಾಗಿ ಹಚ್ಚಿಕೊಂಡಿರುವರು ಎಂದು ವ್ಯಕ್ತಪಡಿಸಿ, ಸಂಸ್ಥೆಯ ಬೆಳವಣಿಗೆಯ ಬಗ್ಗೆ ನೆನಪಿಸಿಕೊಂಡು ಮತ್ತು ಸಂಸ್ಥೆಯ ಯಶಸ್ಸಿನಲ್ಲಿ ಹಳೆಯ ವಿದ್ಯಾರ್ಥಿಗಳ ನಿರ್ಣಾಯಕ ಪಾತ್ರವನ್ನು ವಿವರಿಸಿದರು.
ನಿಟ್ಟೆ ಸಂಸ್ಥೆಯ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ ಅವರು ಪ್ರೇರಕ ಭಾಷಣ ಮಾಡಿ, ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೆನಮಿತಾದ ಅಧ್ಯಕ್ಷ ಮುಲ್ಕಿ ಜೀವನ್ ಕೆ.ಶೆಟ್ಟಿ ಅವರು ತಮ್ಮ ಭಾಷಣದಲ್ಲಿ, ಪ್ರಸ್ತುತ ವಿದ್ಯಾರ್ಥಿಗಳನ್ನು ಅವರ ಶೈಕ್ಷಣಿಕ ಮತ್ತು ವೃತ್ತಿಜೀವನದ ಅನ್ವೇಷಣೆಗಳಲ್ಲಿ ಬೆಂಬಲಿಸುವ ಹಳೆಯ ವಿದ್ಯಾರ್ಥಿಗಳ ಸಂಘದ ಬದ್ಧತೆಯನ್ನು ವ್ಯಕ್ತಪಡಿಸಿದರು.
ಮಾಜಿ ಪ್ರಾಂಶುಪಾಲ ಡಾ. ಎಸ್ ವೈ ಕುಲಕರ್ಣಿ ಅವರ ಕೊಡುಗೆಗಳಿಗಾಗಿ ವಿಶೇಷ ಗೌರವದೊಂದಿಗೆ ಸನ್ಮಾನಿಸಲಾಯಿತು. ಜೊತೆಗೆ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಹಾಗೂ ನಿವೃತ್ತರಾದ ಎನ್ಎಂಎಎಂಐಟಿ ಬೋಧಕರು ಮತ್ತು ಸಿಬ್ಬಂದಿ ಗಳಾದ ಪ್ರೊ.ಶಾಲಿನಿ ಕೆ.ಶರ್ಮಾ, ಡಾ.ಉದಯ ಕುಮಾರ್, ಪ್ರೊ.ವೇಣುಗೋಪಾಲ್, ಪ್ರೊ.ವಾಸುದೇವ ಶೆಟ್ಟಿಗಾರ್, ಡಾ.ದಿವಾಕರ ಭಟ್ (ಗ್ರಂಥಪಾಲಕ), ದೊಂಬಯ್ಯ ಪೂಜಾರಿ, ಸುನೀತಾ ಶೆಟ್ಟಿ, ಜಾನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಎನ್ಎಂಎಎಂಐಟಿಯ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಪಯಣದಲ್ಲಿ ಹಳೆಯ ವಿದ್ಯಾರ್ಥಿಗಳ ಮಹತ್ವವನ್ನು ಹೇಳಿದರು. ಮಹೇಶ್ ನಿಡುಗಾಲ (1995 ಬ್ಯಾಚ್) ಮತ್ತು ಶ್ರೀವತ್ಸ ಪ್ರಭಾಕರ್ (1994 ಬ್ಯಾಚ್) ಸೇರಿದಂತೆ ವಿವಿಧ ಬ್ಯಾಚ್ ಗಳ ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ವೆನಮಿತಾ ಉಪಾಧ್ಯಕ್ಷ ಅವಿನಾಶ್ ಕೃಷ್ಣ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ರಂಜಿತ್ ಭಟ್ ವಂದಿಸಿದರು. ಕಾರ್ಯಕ್ರಮವನ್ನು ವೆನಾಮಿಟಾದ ಖಜಾಂಚಿ ಡಾ. ಹರ್ಷಿತಾ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಶರತ್ ಸಾಲಿಯಾನ್ ಉಪಸ್ಥಿತರಿದ್ದರು.