ಕಾರ್ಕಳ:ಕಾಡುಹೊಳೆ, ಅಂಡಾರು ರಸ್ತೆಯನ್ನು ಕಳಪೆ ಮಟ್ಟದಲ್ಲಿ ಮಾಡಿರುವ ಗುತ್ತಿಗೆದಾರರೂ, ಸ್ಥಳೀಯರೂ ಆದ ಉದಯ್ ಕುಮಾರ್ ಶೆಟ್ಟಿಯವರಿಗೆ ಅವರ ಊರಿನವರೇ ಹುಟ್ಟೂರಿನ ಸನ್ಮಾನ ಮಾಡಿರುವುದೇ ಹೊರತು ಹೊರಗಿನಿಂದ ಬಂದವರಲ್ಲ. ಸ್ಥಳೀಯ ಗ್ರಾಮಸ್ಥರು ನಿಮ್ಮ ನಾಯಕನ ಕಳಪೆ ಕಾಮಗಾರಿಯ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದು ವಿಶಿಷ್ಟ ಹಾಗೂ ಹೊಸತನದ ಮಾದರಿಯಲ್ಲಿ ಸನ್ಮಾನ ಕಾರ್ಯಕ್ರಮ ಮಾಡಿದ್ದಾರೆ. ಅವರು ಎಲ್ಲಿಯೂ ಕೂಡ ಕಾಂಗ್ರೆಸ್ ನಾಯಕರಂತೆ ಅವರದ್ದೇ ನಾಯಕರ ಭಾವಚಿತ್ರ ನೆಲಕ್ಕೆ ಹಾಕಿ ಚಪ್ಪಲಿಯಿಂದ ತುಳಿಯಲಿಲ್ಲ, ಬೆಂಕಿ ಹಾಕಿ ಸುಡಲಿಲ್ಲ. ಸುಡುವುದು, ಚಪ್ಪಲಿಯಲ್ಲಿ ತುಳಿಯುವುದು ಕಾಂಗ್ರೆಸ್‌ನ ಸಂಸ್ಕೃತಿ. ಒಂದು ಒಳ್ಳೆಯ ರೀತಿಯಲ್ಲಿ ಮಾಡಿದ ಪ್ರತಿಭಟನೆ ಕೆಟ್ಟ ಸಂಪ್ರದಾಯ ಹಾಗೂ ಅವಹೇಳನಕಾರಿ ಎಂದು ಟೀಕಿಸುವ ಶುಭದ ರಾವ್, ರಾಜ್ಯದ ಉನ್ನತ ಸ್ಥಾನದಲ್ಲಿರುವ ರಾಜ್ಯಪಾಲರ ಬಗ್ಗೆ ಹೀನಾಯ, ವಿಕೃತ ಶಬ್ಧಗಳನ್ನು ಬಳಸುವ ತಮ್ಮದೇ ಕಾಂಗ್ರೆಸ್ ಪಕ್ಷದ ನಾಯಕರಿಗೆ ತಿಳಿಸಿ ಹೇಳುವುದು ಸೂಕ್ತ.ಮಾನ್ಯ ಸುಭದ್ ರಾವ್ ಅವರೇ ನಿಮಗೆ ಗುತ್ತಿಗೆದಾರ ಯಾರು? ಜನಪ್ರತಿನಿಧಿ ಯಾರು ? ಎಂಬ ವ್ಯತ್ಯಾಸವೇ ಗೊತ್ತಿಲ್ಲ. ಶಾಸಕರಿಗೂ ಗುತ್ತಿಗೆದಾರರಿಗೂ ಇರುವ ವ್ಯತ್ಯಾಸದ ಬಗ್ಗೆ ಮೊದಲು ತಿಳಿಯಿರಿ.
ನಿಮ್ಮ ನಾಯಕ ಗುತ್ತಿಗೆದಾರನಾಗಿದ್ದುಕೊಂಡು ನಾಯಕ ಆಗಿರಬಹುದು. ಆದರೆ ನಮ್ಮ ಶಾಸಕರು ನಾಯಕ ಮಾತ್ರ. ಶಾಸಕರದ್ದು ಏನಿದ್ದರೂ ಪ್ರಸ್ತಾವನೆ ಸಲ್ಲಿಸುವುದು, ಅನುದಾನ ಬಿಡುಗಡೆಗೊಳಿಸುವುದಷ್ಟೇ ಕೆಲಸ. ಶಾಸಕರು ತಂದ ಅನುದಾನವನ್ನು ಕಾರ್ಯಗತಗೊಳಿಸುವುದು ಸಂಬಂಧಪಟ್ಟ ಇಲಾಖೆ ಹಾಗೂ ಗುತ್ತಿಗೆದಾರ. ಒಂದು ವೇಳೆ ಗುತ್ತಿಗೆದಾರ ಪ್ರಾಮಾಣಿಕನಾಗಿದ್ದರೆ ಕಾಮಗಾರಿಯ ಗುಣಮಟ್ಟ ಒಳ್ಳೆಯದಿರುತ್ತದೆ. ಇಲ್ಲದೆ ಇದ್ದಲ್ಲಿ ಕಾಡುಹೊಳೆ ರಸ್ತೆ, ಗುರುವಾಯನಕೆರೆ ರಸ್ತೆ, ಶಕ್ತಿನಗರ ರಸ್ತೆ ತರಹವೇ ಆಗುತ್ತದೆ.
ಕಳಪೆ ಕಾಮಗಾರಿ ವಿಷಯದಲ್ಲಿ ನಾವೆಂದೂ ರಾಜಿ ಮಾಡಿಕೊಂಡಿಲ್ಲ, ಮಾಡುವುದೂ ಇಲ್ಲ. ಯಾರೇ ಕಳಪೆ ಕಾಮಗಾರಿ ಮಾಡಿದ್ದರೂ ಅದರ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಿ ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ನಮ್ಮ ನಾಯಕರು ಬಹಿರಂಗವಾಗಿಯೇ ಈ ಹಿಂದೆಯೂ ಹೇಳಿದ್ದರು, ಈಗಲೂ ಹೇಳುತ್ತಿದ್ದಾರೆ, ಮುಂದೆಯೂ ಇದೇ ನಿಲುವಾಗಿರುತ್ತದೆ. ಕಳಪೆ ಕಾಮಗಾರಿ ಕುರಿತು ನಮ್ಮ ನಿಲುವು ಸದಾ ಸ್ಪಷ್ಟವಾಗಿದೆ. ನೀವು ಮಾತ್ರ ಗೊಂದಲದಲ್ಲಿದ್ದೀರಿ.
ದಯವಿಟ್ಟು ಮಾನ್ಯ ಸುಭದ್ ರಾವ್ ಅವರೇ, ನೀವೂ ಒಬ್ಬ ಜನಪ್ರತಿನಿಧಿ. ಪುರಸಭಾ ಸದಸ್ಯ ಆದ್ದರಿಂದ ಇದನ್ನೆಲ್ಲ ಸ್ವಲ್ಪ ಅರಿತುಕೊಳ್ಳಬೇಕು ಅಥವಾ ತಿಳಿದವರ ಬಳಿ ಕೇಳಿ ಮಾತನಾಡಬೇಕು. ನೀವು ಚಿಲ್ಲರೆ ವ್ಯಕ್ತಿತ್ವ ತೋರಿಸುತ್ತಾ, ಬರೀ ಸುಳ್ಳು ಹೇಳಿಕೆಗಳನ್ನು ನೀಡುವುದೇ ನಿಮ್ಮ ಕಾಯಕವಾಗಿದೆ. ನಿಮಗೆ ವೇದಿಕೆ ಸಿಕ್ಕರೆ ಸಾಕು ಸುನಿಲ್ ಕುಮಾರ್ ಬಿಟ್ಟರೆ ಬೇರೆ ವಿಚಾರವೇ ಇಲ್ಲ. ನೀವು ಇನ್ನೊಬ್ಬರ ಬಗ್ಗೆ ಮಾತನಾಡುವುದನ್ನು ಬಿಟ್ಟು ನಿಮ್ಮ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ನಿಮಗೊಂದು ಕಿವಿಮಾತು, ಇನ್ನೂ ನಿಮಗೆ ಗುತ್ತಿಗೆದಾರರಿಗೂ ನಾಯಕರಿಗೂ ಇರುವ ವ್ಯತ್ಯಾಸ ಗೊತ್ತಿಲ್ಲ ಎಂದಾದರೆ ನಮ್ಮಲ್ಲಿ ಬನ್ನಿ ನಾವು ನಿಮಗೆ ಅರ್ಥವಾಗುವ ಹಾಗೆ ತಿಳಿ ಹೇಳುತ್ತೇವೆ ಎಂದು ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ ಹೇಳಿದ್ದಾರೆ