
ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಇಂತಹ ವೇದಿಕೆಗಳು ಸಿಕ್ಕಾಗ ಅವಕಾಶವನ್ನು ಬಳಸಿಕೊಳ್ಳಬೇಕು. ಅಂತಹ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿರುವ ಚಾಣಕ್ಯ ಸಂಸ್ಥೆಯ ಸಮಾಜ ಮುಖಿ ಚಿಂತನೆ ಶ್ಲಾಘನೀಯ. ಯಾವುದೇ ಒಂದು ಪ್ರತಿಭೆ ಅನಾವರಣವಾಗಬೇಕಾದರೆ ಅದಕ್ಕೆ ಸೂಕ್ತ ವೇದಿಕೆ ಅಗತ್ಯ. ಈ ನಿಟ್ಟಿನಲ್ಲಿ ಕಳೆದ 8 ವರ್ಷಗಳಿಂದ ನಿರಂತರವಾಗಿ ಸಂಗೀತ ಸ್ಪರ್ಧೆಯನ್ನು ಆಯೋಜಿಸುವುದರ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ರಾಜಕುಮಾರ್ ಶೆಟ್ಟಿ ಹೇಳಿದರು.
ಅವರು ಪೆರ್ಡೂರು ಅನಂತ ಸೌರಭ ಸಭಾಂಗಣದಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪೆರ್ಡೂರು, ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ
ಚಾಣಕ್ಯ ಮ್ಯೂಸಿಕ್ ಅಕಾಡೆಮಿ ಹೆಬ್ರಿ ಇವರ ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ ಟ್ರ್ಯಾಕ್ ಸಂಗೀತ ಸಮರದ ಸೆಮಿಫೈನಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಾಯಕರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಪೆರ್ಡೂರು ಯುವಕ ಸಂಘದ ಅಧ್ಯಕ್ಷ ಪ್ರಸಾದ ಆಚಾರ್ಯ ಮಾತನಾಡಿ ಪೆರ್ಡೂರಿನಲ್ಲಿ ಯಕ್ಷಗಾನ, ನೃತ್ಯ ತರಗತಿ ಆರಂಭಗೊಂಡಿದ್ದರಿಂದ ಇಲ್ಲಿನ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದಂತಾಗಿದೆ.
ಸಾಮಾಜಿಕ ಕಾರ್ಯಕರ್ತ ತ್ರಿವರ್ಣ ವಿಶ್ವ ವೇದಿಕೆಯ ಸ್ಥಾಪಕ ಅಧ್ಯಕ್ಷ ಸತೀಶ್ ಪೂಜಾರಿ ಕಿಳಂಜೆ ಮಾತನಾಡಿ ಸಮಾಜಮುಖಿ ಚಿಂತನೆ ಇರುವ ಉದಯಕುಮಾರ್ ಶೆಟ್ಟಿ ಅವರು ಪತ್ರಿಕೋದ್ಯಮದ ಜೊತೆ ಗ್ರಾಮೀಣ ಪ್ರತಿಭೆಗಳನ್ನು ಬೆಳಗಿಗೆ ತರುವಲ್ಲಿ ವಿಶೇಷ ಶ್ರಮವಹಿಸುತ್ತಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಚಾಣಕ್ಯ ಸಂಸ್ಥೆಯ ಪ್ರಾಂಶುಪಾಲೆ ವೀಣಾ ಯು ಶೆಟ್ಟಿ ವಹಿಸಿದ್ದರು.
ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ಧಿಕಾರಿ ಸುಧಾಕರ್ ಕುಲಾಲ್ ಪಟ್ಲ, ಪ್ರಗತಿಪರ ಕೃಷಿಕ ಪ್ರವೀಣ್ ಕುಮಾರ್, ತುಳುನಾಡು ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಉದ್ಯಮಿ ನವೀನ್ ಪೆರ್ಡೂರು, ಸಂಗೀತ ನಿರ್ದೇಶಕ ರಮೇಶ್ ಡಿ. ಸಂಗೀತ ಗುರುಗಳಾದ ಸ್ಮಿತಾ ಭಟ್, ಶ್ರುತಿ ಭಟ್, ಸುಕೇಶ್ ಕುಲಾಲ್, ಪ್ರಸನ್ನ ಮುನಿಯಾಲು ಮೊದಲಾದವರು ಉಪಸ್ಥಿತರಿದ್ದರು.
ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಭಟ್ ಬಲ್ಲಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಚಾಣಕ್ಯ ಡ್ಯಾನ್ಸ ಅಕಾಡೆಮಿ ಪೆರ್ಡೂರು ತಂಡದ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.





