ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ‘ಸಸ್ಟೇನಬಿಲಿಟಿ ಮತ್ತು ಇಂಟೆಲಿಜೆಂಟ್ ಸಿಸ್ಟಮ್ಸ್ ನಲ್ಲು ಕೃತಕ ಬುದ್ಧಿಮತ್ತೆ’ ಎಂಬ ವಿಷಯದ ಬಗೆಗೆ ಒಂದು ದಿನದ ಅಂತರರಾಷ್ಟ್ರೀಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.
ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾದ, ಸ್ಕೋಪಸ್ ಸೂಚ್ಯಂಕ ಹೊಂದಿದ ಈ ಸಮ್ಮೇಳನವು ಎನ್‌ಎಂಎಎಂಐಟಿ ವಿದ್ಯಾರ್ಥಿ ಸಂಶೋಧನಾ ವೇದಿಕೆ (NSRF) ವತಿಯಿಂದ ಸಂಪೂರ್ಣವಾಗಿ ವಿದ್ಯಾರ್ಥಿಗಳೇ ಮುನ್ನಡೆಸಿದ ಮೊದಲ ಪ್ರಯತ್ನವಾಗಿತ್ತು.
ಸಮ್ಮೇಳನದ ಮುಖ್ಯ ಅತಿಥಿಗಳಾಗಿದ್ದ ತೈಪೆ ಎಕನಾಮಿಕ್ ಅಂಡ್ ಕಲ್ಚರಲ್ ಸೆಂಟರ್ (TECC), ನವದೆಹಲಿ ಇದರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಕೌನ್ಸಿಲರ್ ಹಾಗೂ ನಿರ್ದೇಶಕ ಡಾ. ಲಂಗ್-ಜೀ ಯಾಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಮುಖ್ಯ ಭಾಷಣದಲ್ಲಿ ಅವರು ಸೆಮಿಕಂಡಕ್ಟರ್ ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಪ್ರಗತಿಗಳನ್ನು, ವಿಶೇಷವಾಗಿ CMOS–MEMS ಏಕೀಕರಣವನ್ನು ವಿವರಿಸಿ, ಬಯೋ ಇನ್ಸ್ಪಯರ್ಡ್ ಇಂಟಲಿಜೆಂಟ್ ಸಿಸ್ಟಮ್ಸ್ ನ ಸ್ಥಿರ ಹಾಗೂ ಶಕ್ತಿಸಮರ್ಥ ಪರಿಹಾರಗಳನ್ನು ಒದಗಿಸುವಲ್ಲಿ ವಹಿಸುವ ಮಹತ್ವದ ಪಾತ್ರವನ್ನು ವಿವರಿಸಿದರು.
ಕಾರ್ಯಕ್ರಮದ ಗೌರವ ಅತಿಥಿಯಾಗಿ ಭಾಗವಹಿಸಿದ್ದ ತಾಂತ್ರಿಕ ಶಿಕ್ಷಣ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ ಅವರು ಎಐ ಎಂಬುದು ಸಸ್ಟೇನೆಬಲ್ ಅಭಿವೃದ್ಧಿ ಮತ್ತು ನವೀನತೆಯ ಪ್ರಮುಖ ಚಾಲಕಶಕ್ತಿಯೆಂದು ತಿಳಿಸಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಡಾ. ಪ್ರವೀಣಕುಮಾರ್ ಶೆಟ್ಟಿ ಅವರು ನಿಟ್ಟೆ ವಿದ್ಯಾರ್ಥಿ ಸಂಶೋಧನಾ ವೇದಿಕೆ (NSRF) ಕಾಲೇಜಿನಲ್ಲಿ ಸ್ಥಾಪಿಸುವುದರ ಬಗೆಗಿನ ಮಹತ್ವವನ್ನು ವಿವರಿಸಿದರು. ಎನ್‌ಎಂಎಎಂಐಟಿ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆ ಮತ್ತು ಜಾಗತಿಕ ಸಂಶೋಧನಾ ತೊಡಗಿಸಿಕೊಳ್ಳುವಿಕೆಗೆ ಇರುವ ಬದ್ಧತೆಯನ್ನು ಪುನರುಚ್ಚರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ (ಡೀಮ್ಡ್ ಟು ಬಿ ಯುನಿವರ್ಸಿಟಿ) ಕುಲಪತಿ ಪ್ರೊ. (ಡಾ.) ಎಂ. ಎಸ್. ಮೂಡಿತಾಯ, ಜಾಗತಿಕ ಸವಾಲುಗಳಿಗೆ ಕೃತಕ ಬುದ್ಧಿಮತ್ತೆಯ ಮೂಲಕ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿ ನೇತೃತ್ವದ ಸಂಶೋಧನೆ ಮತ್ತು ಅಂತಾರಾಷ್ಟ್ರೀಯ ಸಹಕಾರ ಅತ್ಯವಶ್ಯಕವೆಂದು ಅಭಿಪ್ರಾಯಪಟ್ಟರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿ ಎನ್‌ಎಂಎಎಂಐಟಿ ವಿದ್ಯಾರ್ಥಿ ಸಂಶೋಧನಾ ವೇದಿಕೆಯ ಅಧಿಕೃತ ಉದ್ಘಾಟನೆ ಹಾಗೂ IC-AISIS’26 ಸಮ್ಮೇಳನದ ಪ್ರೊಸೀಡಿಂಗ್ಸ್ ಬಿಡುಗಡೆ ನಡೆಯಿತು.
ಸಮ್ಮೇಳನದಲ್ಲಿ ಇಂಟಲಿಜೆಂಟ್ ಇನ್ಫ್ರಾಶ್ಟ್ರಕ್ಚರ್, ಕಾಗ್ನಿಟಿವ್ ಕಂಪ್ಯೂಟಿಂಗ್, ಸಸ್ಟೈನೆಬಲ್ ಕಂಪ್ಯೂಟಿಂಗ್, ಎಂಬೆಡೆಡ್ ಇಂಟಲಿಜೆನ್ಸ್ ಹಾಗೂ ಎಐ ಡ್ರಿವನ್ ಮೆಟೀರಿಯಲ್ಸ್ ಸೇರಿದಂತೆ ಐದು ಪ್ರಮುಖ ವಿಭಾಗಗಳಲ್ಲಿ ತಾಂತ್ರಿಕ ಸಂಶೋಧನಾ ಪ್ರಬಂಧಗಳ ಪ್ರಸ್ತುತಿಕೆಗಳು ನಡೆದವು.
ವಿದ್ಯಾರ್ಥಿ ಅಧ್ಯಕ್ಷ ನಂದನ್ ಪೈ ಅವರು ಅತಿಥಿಗಳನ್ನು ಸ್ವಾಗತಿಸಿದರು. ಎಂಸಿಎ ವಿಭಾಗದ ಸಹಪ್ರಾಧ್ಯಾಪಕಿ ಡಾ. ಮಂಗಳಾ ಶೆಟ್ಟಿ ಸಮ್ಮೇಳನದ ಕುರಿತು ಪರಿಚಯ ನೀಡಿದರು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎನ್. ಎಸ್. ಎಸ್. ರಾಮಕೃಷ್ಣ ಅವರು ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ. ಶಶಾಂಕ್ ಶೆಟ್ಟಿ ವಂದಿಸಿದರು. ಡಾ. ವಿಜೀಶ್ ವಿ (ಸಹ ನಿರ್ದೇಶಕ – R&D), ಡಾ. ಮಂಗಳಾ ಶೆಟ್ಟಿ, ಡಾ. ಎನ್. ಎಸ್. ಎಸ್. ರಾಮಕೃಷ್ಣ ಹಾಗೂ ಡಾ. ಶಶಾಂಕ್ ಶೆಟ್ಟಿ ಅವರು ಸಮ್ಮೇಳನದ ಜನರಲ್ ಚೇರ್ಸ್ ಆಗಿ ಕಾರ್ಯನಿರ್ವಹಿಸಿದ್ದರು.
















