ಇರಾನ್-ಇಸ್ರೇಲ್-ಅಮೆರಿಕಾದ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತಕ್ಕೆ ಯುದ್ದದ ಎಫೆಕ್ಟ್ ತಟ್ಟಿದೆ. ರಾಜ್ಯದ ಅಕ್ಕಿ ವರ್ತಕರು ಈಗ ಕಂಗಲಾಗಿದ್ದಾರೆ. ಅಕ್ಕಿ ರಫ್ತು ಸ್ಥಗಿತಗೊಂಡ ಪರಿಣಾಮ ರೈಸ್ ಮಿಲ್‌ಗಳು ಮುಚ್ಚುವ ಭೀತಿ ಎದುರಾಗಿವೆ. ಯುದ್ಧ ಕಾರ್ಮೋಡದಿಂದ ಕೋಟ್ಯಂತರ ರೂಪಾಯಿ ವಹಿವಾಟು ನಷ್ಟವಾಗಿದೆ.
ಇರಾನ್-ಇಸ್ರೇಲ್ ಹಾಗೂ ಅಮೆರಿಕ ನಡುವಿನ ಸಂಘರ್ಷದಲ್ಲಿ ಭಾರತ ದೇಶಕ್ಕೆ ಕೂಡ ಹೊಡೆತ ಬಿಳುತ್ತಿದೆ. ಗ್ಯಾಸ್ ದರ ಏರಿಕೆ ಬಿಸಿ ಜನರಿಗೆ ತಟ್ಟಿದೆ. ರಾಜ್ಯದ ಬಾಸ್ಮತಿ ಅಕ್ಕಿ ಹಾಗೂ ಸೋನಾ ಮಸೂರಿ ಅಕ್ಕಿಗೆ ಮಧ್ಯಪ್ರಾಚ್ಯ ರಾಷ್ಟ್ರ ಹಾಗೂ ಅಮೆರಿಕ ದೇಶದಲ್ಲಿ ಬೇಡಿಕೆ ಹೆಚ್ಚಿದೆ. ಸೋನಾ ಮಸೂರಿ ಅಕ್ಕಿ ರಫ್ತು ಹೆಚ್ಚಾಗುತ್ತಿತ್ತು. ಮಾರ್ಚ್ ತಿಂಗಳಿನಲ್ಲಿ ಭಾರಿ ಪ್ರಮಾಣದ ಅಕ್ಕಿ ದುಬೈ, ಸೌದಿ ಅರೇಬಿಯಾ, ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. ಆದರೆ, ಯುದ್ಧ ಕಾರ್ಮೋಡ ಹಿನ್ನೆಲೆ ಸೋನಾ ಮಸೂರಿ ಅಕ್ಕಿ ರಫ್ತು ಸ್ಥಗಿತವಾಗಿದೆ.
ಯುದ್ಧದ ಪರಿಣಾಮ ಕಳೆದ ಒಂದು ವಾರದಿಂದ ಅಕ್ಕಿ ರಫ್ತು ಆಗುತ್ತಿಲ್ಲ. ರಾಜ್ಯದ ಯಾದಗಿರಿ, ರಾಯಚೂರು, ಬಳ್ಳಾರಿ ಸೇರಿ ವಿವಿಧ ಭಾಗದಲ್ಲಿ 1800 ಕ್ಕೂ ಹೆಚ್ಚು ರೈಸ್ ಮಿಲ್‌ಗಳಿವೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಅಕ್ಕಿ ರಫ್ತು ಆಗುತ್ತಿತ್ತು. ರಫ್ತು ಸ್ಥಗಿತವಾದ ಹಿನ್ನೆಲೆ ಕೋಟ್ಯಂತರ ರೂಪಾಯಿ ವಹಿವಾಟು ನಷ್ಟವಾಗಿದೆ. ಹೀಗಾಗಿ, ಅಕ್ಕಿ ವರ್ತಕರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ.













