Tuesday, April 7, 2026
Google search engine
Homeಅಂಕಣಅವರು ಸಜ್ಜನರಲ್ಲಿ ಸಜ್ಜನ ಕಲಾವಿದ. ಸಣಕಲು ಶರೀರ. ಆದರೆ ಹಾಡಲು ನಿಂತರೆ ಅವರು ದಣಿಯುವ ಪ್ರಶ್ನೆಯೇ...

ಅವರು ಸಜ್ಜನರಲ್ಲಿ ಸಜ್ಜನ ಕಲಾವಿದ. ಸಣಕಲು ಶರೀರ. ಆದರೆ ಹಾಡಲು ನಿಂತರೆ ಅವರು ದಣಿಯುವ ಪ್ರಶ್ನೆಯೇ ಇಲ್ಲ!-ರಾಜೇಂದ್ರ ಭಟ್ ಕೆ.

ಶ್ರೇಷ್ಠ ಗಾಯಕ ಗಣೇಶ್ ಗಂಗೊಳ್ಳಿ ನಾದಲೀನ..
————————————————————–
ಅವರು ಸಜ್ಜನರಲ್ಲಿ ಸಜ್ಜನ ಕಲಾವಿದ. ಸಣಕಲು ಶರೀರ. ಆದರೆ ಹಾಡಲು ನಿಂತರೆ ಅವರು ದಣಿಯುವ ಪ್ರಶ್ನೆಯೇ ಇಲ್ಲ!

ಏರು ಶ್ರುತಿಯ ಕಂಠಶ್ರೀ, ಲಯ ಪ್ರಧಾನ ಹಾಡುಗಳು.
————————————————————————
ಅದೇ ಏರು ಶ್ರುತಿಯ ಜನಪದ ಹಾಡುಗಳು. ಬಡಿದೆಬ್ಬಿಸುವ ಭಾವಗೀತೆಗಳು. ಶಿಶುನಾಳ ಶರೀಫರ ಗೀತೆಗಳು, ಕುವೆಂಪು ಅವರ ಲಯಪ್ರಧಾನ ಹಾಡುಗಳು, ಓ ನನ್ನ ಚೇತನ, ಬಾರಿಸು ಕನ್ನಡ ಡಿಂಡಿಮವ…….ಇತ್ಯಾದಿ! ವರಕವಿ ಬೇಂದ್ರೆಯವರ ಅಂತರಂಗದ ತರಂಗಗಳನ್ನು ಬಡಿದೆಬ್ಬಿಸುವ ಇಳಿದು ಬಾ ತಾಯಿ ಇಳಿದು ಬಾ, ಬಂತು ಶ್ರಾವಣ, ಅಂತರಂಗದಾ ಮೃದಂಗ, ಯುಗ ಯುಗಾದಿ ಕರೆದರೂ, ಹಕ್ಕಿ ಹಾರುತಿದೆ ನೋಡಿದಿರಾ, ನಿಸ್ಸಾರರ ಜೋಗದ ಸಿರಿ, ಚೊಕ್ಕಾಡಿಯವರ ಮುನಿಸು ತರವೇ…. ಇತ್ಯಾದಿ ನೂರಾರು ಹಾಡುಗಳನ್ನು ಬಾಯಿಪಾಟದಲ್ಲಿ ಅನುಭವಿಸಿ ಅವರು ಹಾಡುತ್ತಿದ್ದರು.

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ..
————————————————————-
ಕನ್ನಡದಲ್ಲಿ ಸಿ ಅಶ್ವತ್ಥ ಹಾಡಿದ ಅಷ್ಟೂ ಹಾಡುಗಳನ್ನು ಅಷ್ಟೇ ಎತ್ತರದ ಸ್ಥಾಯಿಯಲ್ಲಿ, ಆದರೆ ಯಾವುದೇ ಅನುಕರಣೆಯನ್ನು ಮಾಡದೇ ಹಾಡುವ ಒಬ್ಬ ಗಾಯಕರು ಇದ್ದರೆ ಅದು ಗಣೇಶ್ ಗಂಗೊಳ್ಳಿ! ನನ್ನ ಮುಕ್ತಾ ಟಿವಿಯ ಹಲವು ಸಂಗೀತ ಪ್ರಧಾನ ಕಾರ್ಯಕ್ರಮಗಳಿಗೆ ಅವರು ಬಂದು ಹಾಡಿದ ನೆನಪು ಇಂದಿಗೂ ಜೀವಂತ. ಎಲ್ಲಿಯೂ ಸಿಟ್ಟು ಮಾಡಿದ, ಬೇಸರ ವ್ಯಕ್ತಪಡಿಸಿದ ಒಂದು ಉದಾಹರಣೆ ಕೂಡ ನಮಗೆ ದೊರೆತಿಲ್ಲ. ಕಾಡು ಕುದುರೆ ಓಡಿ ಬಂದಿತ್ತಾ ಹಾಡು ಅವರು ಹಾಡಿದಾಗ ಶಿವಮೊಗ್ಗ ಸುಬ್ಬಣ್ಣ ಬೇಡವೆಂದರೂ ಕಣ್ಣ ಮುಂದೆ ಬರುತ್ತಿದ್ದರು.

ಸ್ಟಾರ್ ಆಗದ ದೊಡ್ಡ ಕಲಾವಿದ.
——————————————-
ಅವರಿಂದ ಸಂಗೀತ ಕಲಿತ ನೂರಾರು ವಿದ್ಯಾರ್ಥಿಗಳು ಇಂದು ದೊಡ್ಡ ಸ್ಟಾರ್ ಆಗಿದ್ದಾರೆ. ಆದರೆ ಈ ಗಣೇಶ್ ಮಾತ್ರ ಇದ್ದ ಹಾಗೇ ಇದ್ದರು. ನೀವು ಮಹಾನಗರದಲ್ಲಿ ಇರಬೇಕಾಗಿತ್ತು ಸರ್ ಭಾರೀ ದೊಡ್ಡ ಸ್ಟಾರ್ ಆಗಿರುತ್ತಿದ್ದೀರಿ ಎಂದು ನಾನು ಹೇಳಿದರೆ ಅವರ ಸಣ್ಣ ನಗು ಮಾತ್ರ ಅದಕ್ಕೆ ಉತ್ತರ ಆಗಿರುತ್ತಿತ್ತು. ಒಮ್ಮೆ ಅವರ ಆರೋಗ್ಯ ಪೂರ್ತಿ ಕೆಟ್ಟು ಹೋಗಿ ಇನ್ನು ಅವರು ಹಾಡಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯವು ಕೇಳಿ ಬಂದಿತ್ತು.ಆದರೆ ಅವರ ಇಚ್ಛಾಶಕ್ತಿಯು ಬಲಿಷ್ಠವಾಗಿತ್ತು. ಅವರು ಬದುಕಿ ಬಂದರು ಮಾತ್ರವಲ್ಲ ಇನ್ನಷ್ಟು ಅದ್ಭುತವಾಗಿ ಹಾಡಲು ಆರಂಭಿಸಿದರು.

ದೊಡ್ಡ ದೊಡ್ಡ ವೇದಿಕೆಗಳಲ್ಲಿ ನಾಡಗೀತೆ ಮತ್ತು ರೈತಗೀತೆ.
—————————————————————————-
ಸರಕಾರದ ದೊಡ್ಡ ದೊಡ್ಡ ಕಾರ್ಯಕ್ರಮಗಳು, ಸಮ್ಮೇಳನಗಳು ಎಲ್ಲ ಕಡೆ ನಾಡಗೀತೆ ಮತ್ತು ರೈತಗೀತೆಗಳನ್ನು ಹಾಡಲು ಅವರೇ ಬೇಕು ಎಂದು ಡಿಮ್ಯಾಂಡಿನಲ್ಲಿ ಅವರನ್ನು ಕಾರ್ಯಕ್ರಮಗಳ ಸಂಘಟಕರು ಕರೆಯುತ್ತಿದ್ದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇತ್ತೀಚೆಗೆ ಉಡುಪಿಗೆ ಬಂದಿದ್ದಾಗ ಅಧಿಕೃತ ಕಾರ್ಯಕ್ರಮದಲ್ಲಿ ನಾಡಗೀತೆ ಮತ್ತದರ ಬೆನ್ನಿಗೆ ರೈತಗೀತೆಯನ್ನು ಅವರು ಹಾಡಿ ಮುಗಿಸಿದಾಗ ಸೇರಿದ್ದ ಸಾವಿರಾರು ಜನರು ಚಪ್ಪಾಳೆ ಹೊಡೆದು ಖುಷಿ ಪಟ್ಟಿದ್ದರು. ಏನು ಚಂದಾ ಹಾಡ್ತೀರೀ ನೀವು, ಬೆಂಗಳೂರಿಗೆ ಒಮ್ಮೆ ಬನ್ನಿ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ ಘಟನೆಗೆ ನಾನು ಸಾಕ್ಷಿಯಾಗಿದ್ದೆ!

ಅಂತಹ ಗಣೇಶ್ ಗಂಗೊಳ್ಳಿ ಇದೀಗ ನಿರ್ಗಮಿಸಿದ್ದಾರೆ. ಮನಸ್ಸು ಬೇಡವೆಂದರೂ ಭಾರವಾಗುತ್ತಿದೆ. ಅವರಿಗೆ ನಮ್ಮ ಶ್ರದ್ಧಾಂಜಲಿ ಇರಲಿ.
———————————————————————————
ರಾಜೇಂದ್ರ ಭಟ್ ಕೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments