ಕಾರ್ಕಳ ನಿವಾಸಿ ಶಂಕರ ಕುಲಾಲ್ ಅವರ ಮನೆಯಲ್ಲಿ ಕಳ್ಳರು ಪ್ರವೇಶಿಸಿ ಕಪಾಟಿನೊಳ ಇಡಲಾಗಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ನೆಕ್ಲಸ್, 3 ಗ್ರಾಂ ತೂಕದ 3 ಚಿನ್ನದ ಉಂಗುರಗಳು, 3 ಗ್ರಾಂ ತೂಕದ ಚಿನ್ನದ ಬೆಂಡೋಲೆ ಹಾಗೂ 3ಗ್ರಾಂ ತೂಕದ ಜುಮ್ಕಿಯನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಚಿನ್ನದ ಒಟ್ಟು ಮೌಲ್ಯ 2,64,000 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಶಂಕರ ಕುಲಾಲ್ ನೀಡಿದ ದೂರಿನ ಮೇರೆಗೆ ಅಪರಾಧ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಯನ್ನು ಕಾರ್ಕಳ ಉಪವಿಭಾಗದ ಡಿವೈಎಸ್ಸಿ ವಿಜಯಪ್ರಸಾದ ಅವರ ನೇತೃತ್ವದಲ್ಲಿ ನಡೆದು ಆರೋಪಿ ಆನಂದ ಕುಲಾಲ್ (40) ಅವರನ್ನು ಪ್ರಕರಣ ದಾಖಲಾದ 24 ಗಂಟೆಗಳೊಳಗೆ ಬಂಧಿಸಲಾಗಿದೆ. ಜೊತೆಗೆ, ಕಳವು ಮಾಡಿದ ಚಿನ್ನವನ್ನು ಖರೀದಿಸಿದ ಜಯರಾಮ ಆಚಾರ್ಯ (54) ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ ಒಟ್ಟು 39 ಗ್ರಾಂ ತೂಕದ, ಅಂದಾಜು ರೂ. 5,60,000 ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

























