ಮೊಬೈಲ್ ಫೋನ್ ಲೋನ್ ಕಟ್ಟಿಲ್ಲ ಎಂದು ಆರೋಪಿಸಿ ಖಾಸಗಿ ಫೈನಾನ್ಸ್ ಕಂಪನಿಯ ಉದ್ಯೋಗಿಗಳು ಯುವಕನೊಬ್ಬನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಪಾಲಕ್ಕಾಡ್‌ನಲ್ಲಿ ನಡೆದಿದೆ.
ಪಾಲಕ್ಕಾಡ್‌ನ ವಾಣಿಯಂಕುಳಂ ಪನಯೂರ್ ನಿವಾಸಿ ಯುವಕನ ತಲೆಬುರುಡೆ ಮತ್ತು ದವಡೆಗೆ ಗಂಭೀರ ಗಾಯಗಳಾಗಿವೆ. ಈ ಸಂಬಂಧ ದೂರು ದಾಖಲಾಗಿದ್ದು, ಫೈನಾನ್ಸ್ ಕಂಪನಿಯ ಉದ್ಯೋಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೇಬಲ್ಲಿ ಹಣ ಇಲ್ಲದಿದ್ರೂ ಐಫೋನ್ ಖರೀದಿಸಲು ಬಜಾಜ್ ಫೈನಾನ್ಸ್‌ನಲ್ಲಿ ಲೋನ್ ಮಾಡಿದ್ದ ಯುವಕ. ಲೋನ್ ತೆಗೆದುಕೊಂಡು ಐಫೋನ್ ಖರೀದಿಸಿದ ನಂತರ, ವಾಣಿಯಂಕುಳಂ ಪನಯೂರ್ ನಿವಾಸಿ ಶರೀಫ್ ಸತತವಾಗಿ ಕಂತುಗಳನ್ನು ಕಟ್ಟಲು ವಿಫಲರಾಗಿದ್ದರು. ಆಗ ಕಂಪನಿಯ ಉದ್ಯೋಗಿ ಶರೀಫ್‌ನನ್ನು ಹುಡುಕಿಕೊಂಡು ಬಂದಿದ್ದಾನೆ. ಮನೆಗೆ ಬಂದು, ಕಂಪನಿಯ ಗ್ರಾಹಕರಲ್ಲದ ತಾಯಿಯ ಫೋನ್ ನಂಬರ್ ಪಡೆದಿದ್ದನ್ನು ಶರೀಫ್ ಪ್ರಶ್ನಿಸಿದ್ದಾನೆ. ಈ ವಿಚಾರವಾಗಿ ಫೋನ್‌ನಲ್ಲಿ ನಡೆದ ವಾಗ್ವಾದವೇ ಹಲ್ಲೆಯಲ್ಲಿ ಕೊನೆಗೊಂಡಿದೆ.
ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ವಾಣಿಯಂಕುಳಂನಲ್ಲಿ ಈ ಘಟನೆ ನಡೆದಿದೆ. ಶರೀಫ್ ಎಂಬ ಯುವಕನೇ ಉದ್ಯೋಗಿ ಅನೂಪ್‌ನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದರು. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದೆ. ಅನೂಪ್ ಹೊಡೆದ ಹೊಡೆತಕ್ಕೆ ಕೆಳಗೆ ಬಿದ್ದ ಶರೀಫ್‌ನ ತಲೆಬುರುಡೆ ಮತ್ತು ದವಡೆಗೆ ಗಂಭೀರ ಗಾಯಗಳಾಗಿವೆ. ಕೋಪದಲ್ಲಿ ಹೊಡೆದ ಬಳಿಕ ಅನೂಪ್ ಅವರೇ ಶರೀಫ್‌ನನ್ನು ಒಟ್ಟಪಾಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಪೆರಿಂತಲ್ಮಣ್ಣದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.





